ಕುಟುಂಬದೊಂದಿಗೆ ಗೋವಾಗೆ ಪ್ರವಾಸಕ್ಕೆ ಹೋಗಿದ್ದ ನಟ ದಿಗಂತ್ ಅಲ್ಲಿ ಸೋಮರ್ ಸಾಲ್ಟ್ ಸಾಹಸ ಪ್ರಯೋಗ ಮಾಡಲು ಹೋಗಿ ಕುತ್ತಿಗೆಗೆ ಗಂಭೀರ ಪೆಟ್ಟು ಮಾಡಿಕೊಂಡಿದ್ದರು. ಅವರನ್ನು ಗೋವಾದಿಂದ ಬೆಂಗಳೂರಿಗೆ ಏರ್ ಲಿಫ್ಟ್ ಮಾಡಿಸಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಬಗ್ಗೆ ಮಣಿಪಾಲ್ ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಮಂಗಳವಾರ ದಿಗಂತ್ಗೆ 3 ಗಂಟೆಗಳ ಕಾಲ ಆಪರೇಷನ್ ಮಾಡಲಾಗಿದೆ. ಸರ್ಜರಿ ಬಳಿಕ ದಿಗಂತ್ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡು ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ. ವೈದ್ಯರ ತಂಡದಿಂದ ದಿಗಂತ್ಗೆ ಚಿಕಿತ್ಸೆ ನೀಡಲಾಗುತ್ತಿದೆ. ದಿಗಂತ್ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಾಣುತ್ತಿದೆ. ಇನ್ನೂ ಮೂರು-ನಾಲ್ಕು ದಿನ ಮಾತ್ರ ಆಸ್ಪತ್ರೆಯಲ್ಲಿ ಉಳಿಯುವ ಸಾಧ್ಯತೆ ಇದೆ ಎಂದು ಮಣಿಪಾಲ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ದಿಗಂತ್ ಗೆ ಏನೂ ಆಗಲ್ಲ ಎಂದು ಡಾಕ್ಟರ್ ಹೇಳಿದ್ದಾರೆ. ನನ್ನ ಮಗ ಒಂದೆರಡು ದಿನಗಳಲ್ಲಿ ಎದ್ದು ಓಡಾಡ್ತಾನೆ ಅಂತ ಎಂದು ದಿಗಂತ್ ತಂದೆ ಹೇಳಿದ್ದಾರೆ. ಘಟನೆ ಹೇಗೆ ಆಯ್ತು ಎಂದು ನಾನು ನೋಡಿಲ್ಲ. ಓಡಾಡುವಾಗ ಬೀಳೋದು ಸಹಜ, ಚೆನ್ನಾಗಿ ಮಾತನಾಡ್ತಿದ್ದಾನೆ. ಆಪರೇಷನ್ಗೆ ಕರೆದುಕೊಂಡು ಹೋಗಿದ್ದಾರೆ. ಮೈನರ್ ಇರೋದ್ರಿಂದ ಈಗಲೇ ಆಪರೇಷನ್ ಮಾಡ್ತೀವಿ ಅಂತ ಕರೆದುಕೊಂಡು ಹೋಗಿದ್ದಾರೆ. ಮುಂದೆ ಸಮಸ್ಯೆ ಆಗಬಾರದು ಅಂತ ಈಗಲೇ ಆಪರೇಷನ್ ಮಾಡ್ತಿದ್ದಾರೆ ಎಂದು ದಿಗಂತ್ ತಂದೆ ಹೇಳಿದ್ದಾರೆ.
ದಿಗಂತ್ಗೆ ಯಾವುದೇ ಅಪಾಯವಿಲ್ಲ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಮುಂದಿನ ಒಂದು ವಾರದೊಳಗೆ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ದಿಗಂತ್ ಹಾಗೂ ಐಂದ್ರಿತಾ ಅವರ ಅಭಿಮಾನಿಗಳು ದಿಗಂತ್ ಶೀಘ್ರವೇ ಗುಣಮುಖರಾಗಲಿ ಎಂದು ಆಶಿಸುತ್ತಿದ್ದಾರೆ.