ಐದು ವರ್ಷಗಳ ನಂತರ ನಟಿ ಮಾಲಾಶ್ರೀ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಪತಿ ರಾಮು ನಿಧನದ ನಂತರ ಕುಗ್ಗಿ ಹೋಗಿದ್ದ ಅವರು ಇದೀಗ ಮತ್ತೆ ನಟನೆಯತ್ತ ಮರಳಿದ್ದಾರೆ. 2017ರಲ್ಲಿ ಬಿಡುಗಡೆಗೊಂಡ ‘ಉಪ್ಪು ಹುಳಿ ಖಾರ’ ದಲ್ಲಿ ಮಾಲಾಶ್ರೀ ನಟಿಸಿ, ಗ್ಯಾಪ್ ತೆಗೆದುಕೊಂಡಿದ್ದರು. ಈಗ ಹೆಸರಿಡದ ಹೊಸ ಚಿತ್ರಕ್ಕೆ ಸಹಿ ಹಾಕಿದ್ದು, ಎರಡನೇ ಬಾರಿ ಅವರು ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.
ಸಿನಿಮಾದ ಕಥೆಯೇ ವಿಭಿನ್ನವಾಗಿದೆ ಎಂದಿದ್ದಾರೆ ನಿರ್ದೇಶಕರು. ಸಿನಿಮಾ ಕಥೆಯಲ್ಲಿ ಹದಿನೈದು ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ನಂತರ ಮರಳಿರುತ್ತಾರೆ. ಕರೋನ ಮತ್ತು ಲಾಕ್ಡೌನ್ ಅವಧಿಯಲ್ಲಿ ನಡೆದಂತ ನೈಜ ಘಟನೆಗಳನ್ನು ತೆಗೆದುಕೊಂಡು ಅದಕ್ಕೆ ಆಕ್ಷನ್ ಥ್ರಿಲ್ಲರ್ ಜತೆಗೆ ಸೆಂಟಿಮೆಂಟ್ ಅಂಶಗಳನ್ನು ಸೇರಿಸಿ ಸಿನಿಮಾ ಮಾಡುತ್ತಿದ್ದಾರಂತೆ ನಿರ್ದೇಶಕರು. ಬಹುತೇಕ ಸನ್ನಿವೇಶಗಳು ಆಸ್ಪತ್ರೆಯಲ್ಲಿ ನಡೆಯುತ್ತದೆ. ಹಾಡುಗಳಿಗೆ ಅವಕಾಶವಿರುವುದಿಲ್ಲ. ಆದರೂ ಹಿನ್ನಲೆ ಸಂಗೀತಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ.
ರವೀಂದ್ರ ವೆಂಶಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಈ ಸಿನಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಬಿ.ಎಸ್.ಚಂದ್ರಶೇಖರ್ ಅವರ ಸ್ವರ್ಣಗಂಗ ಫಿಲಿಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ತಾರಗಣದಲ್ಲಿ ವೈದ್ಯರಾಗಿ ಪ್ರಮೋದ್ಶೆಟ್ಟಿ, ಪೋಲೀಸ್ ಆಗಿ ರಂಗಾಯಣರಘು, ಸಾಧುಕೋಕಿಲ, ಬಿಗ್ಬಾಸ್ ವಿಜೇತ ಮಂಜುಪಾವಗಡ, ಕುರಿರಂಗ, ಅಶ್ವಿನ್, ವರ್ದನ್ ಇದ್ದಾರೆ. ಸದ್ದಿಲ್ಲದೇ ಮೊದಲನೇ ಹಂತದ ಚಿತ್ರೀಕರಣ ಮುಗಿದಿದ್ದು, ಎರಡನೇ ಹಂತವನ್ನು ಯುಗಾದಿ ತರುವಾಯ ನಡೆಸಲು ತಂಡವು ಯೋಜನೆ ಹಾಕಿಕೊಂಡಿದೆ.