ತಮಿಳು ನಟ ವಿಜಯ್ ತಮ್ಮ ಹೊಸ ಪಕ್ಷದ ಘೋಷಣೆ ಮಾಡಿದ್ದಾರೆ. ತಮಿಳ್ಗ ವೆಟ್ರಿ ಕಳಗಂ ಹೊಸ ಪಕ್ಷವನ್ನು ಸ್ಥಾಪನೆ ಮಾಡಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆ ಮತ್ತು ಫೇಸ್ಬುಕ್ ಖಾತೆಯಲ್ಲೂ ಎರಡು ಪುಟಗಳ ಪತ್ರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ತಮಿಳ್ಗ ವೆಟ್ರಿ ಕಳಗಂ ಪಕ್ಷದ ನೋಂದಣಿಗಾಗಿ ಇವತ್ತು ನಾವು ಚುನಾವಣಾ ಆಯೋಗದ ಮುಂದೆ ಅರ್ಜಿ ಸಲ್ಲಿಸುತ್ತಿದ್ದೇವೆ. ನಮ್ಮ ಗುರಿ 2026 ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಮತ್ತು ಜನರು ಬಯಸಿರುವ ಮೂಲಭೂತ ರಾಜಕೀಯ ಬದಲಾವಣೆಯನ್ನು ತರುವುದು‘
ಎಂದು ಪಕ್ಷದ ಹೇಳಿಕೆಯಲ್ಲಿ ಹೇಳಲಾಗಿದೆ.
ಅಂದರೆ ನಟ ವಿಜಯ್ ಅವರ ಹೊಸ ಪಕ್ಷ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಮತ್ತು ಯಾವ ಪಕ್ಷಕ್ಕೂ ಬೆಂಬಲ ನೀಡಲ್ಲ ಎಂದು ಸ್ಪಷ್ಟಪಡಿಸಿದೆ.
ರಾಜಕೀಯ ಎನ್ನುವುದು ನನಗೆ ಇನ್ನೊಂದು ವೃತ್ತಿಯಲ್ಲ. ಅದು ಜನರ ಪವಿತ್ರ ಕೆಲಸ. ಇದಕ್ಕಾಗಿ ನಾನು ದೀರ್ಘಕಾಲದಿಂದ ಸಿದ್ಧತೆ ನಡೆಸುತ್ತಿದ್ದೆ. ರಾಜಕೀಯ ನನ್ನ ಹವ್ಯಾಸವೂ ಅಲ್ಲ. ಇದು ನನ್ನ ಆಳವಾದ ಆಸೆ. ನಾನು ಇದರಲ್ಲಿ ಪೂರ್ಣವಾಗಿ ಧುಮುಕಬೇಕು.
ನಿಮಗೆಲ್ಲರಿಗೂ ಸದ್ಯದ ರಾಜಕೀಯ ವಾತಾವರಣ ಗೊತ್ತಿದೆ. ಆಡಳಿತಾತ್ಮಕ ಅಕ್ರಮಗಳು ಮತ್ತು ಭ್ರಷ್ಟ ರಾಜಕಾರಣದ ಸಂಸ್ಕೃತಿ ಒಂದೆಡೆಯಾದರೆ ಧರ್ಮ ಮತ್ತು ಜಾತಿಯ ಹೆಸರಲ್ಲಿ ಜನರನ್ನು ವಿಭಜಿಸುವ ವಿಭಜನಾ ರಾಜಕೀಯ ಮತ್ತೊಂದೆಡೆ. ನಿಸ್ವಾರ್ಥ, ಜಾತಿ ರಹಿತ, ದೂರದೃಷ್ಟಿಯುಳ್ಳ, ಭ್ರಷ್ಟಾಚಾರ ರಹಿತ ಮತ್ತು ದಕ್ಷ ಆಡಳಿತಕ್ಕಾಗಿ ಮೂಲಭೂತ ರಾಜಕೀಯ ಬದಲಾವಣೆಯನ್ನು ತಮಿಳುನಾಡು ಎದುರು ನೋಡುತ್ತಿದೆ
ಎಂದು ನಟ ವಿಜಯ್ ಅವರು ತಮ್ಮ ಪಕ್ಷದ ಹೇಳಿಕೆಯಲ್ಲಿ ತಿಳಿಸಿದ್ದಾರೆ.