ಮೂರು ದಿನಗಳ ಹಿಂದಷ್ಟೇ ನೂರಾರು ಕನಸು ಹೊತ್ತು ಪ್ರೀತಿಯ ಇನಿಯನ ಜೊತೆ ಮಹಾಬಲಿಪುರಂನಲ್ಲಿ ಸಪ್ತಪದಿ ತುಳಿದ ನಟಿ ನಯನತಾರ ಮದುವೆಯಾದ ಮಾರನೇ ದಿನವೇ ವಿವಾದದಲ್ಲಿ ಸಿಲುಕಿದ್ದಾರೆ.
ಮಹಾಬಲಿಪುರಂನಿಂದ ನೇರವಾಗಿ ತಿರುಪತಿ ತಿರುಮಲಕ್ಕೆ ಬಂದ ನಯನತಾರ- ವಿಗ್ನೇಶ್ ಶಿವನ್ ದಂಪತಿ, ಶ್ರೀವಾರಿಯ ದರ್ಶನ ಮಾಡಿದ್ದಾರೆ. ಈ ಸಂದರ್ಭದಲ್ಲಿಯೇ ಎರಡು ಯಡವಟ್ಟುಗಳನ್ನು ಮಾಡಿದ್ದಾರೆ.

ಮೊದಲ ತಪ್ಪು
ಸಾಕ್ಷಾತ್ ತಿರುಪತಿ ತಿಮ್ಮಪ್ಪನೇ ನಡೆದಾಡುವ ಸ್ಥಳ ಎಂದು ನಂಬುವ ತಿರುಮಾಡದ ಬೀದಿಗಳಲ್ಲಿ ನಟಿ ನಯನತಾರ ಪಾದರಕ್ಷೆ ಧರಿಸಿ ಓಡಾಡಿದ್ದಾರೆ. ಈ ಮೂಲಕ ತಿರುಮಾಡವನ್ನು ಅಪವಿತ್ರ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಎರಡನೇ ತಪ್ಪು
ಯಾರೇ ಆಗಲಿ ಮದುವೆಯಾದ ಹೊಸತರಲ್ಲಿ ವಧು ವರರು ಪ್ರಾಪಂಚಿಕ ಸುಖಗಳಲ್ಲಿ ಮುಳುಗಿರುತ್ತಾರೆ. ಇಂತಹ ಸಂದರ್ಭದಲ್ಲಿ ತಿರುಮಲಕ್ಕೆ ಬರಬಾರದು ಎಂಬುದು ಪ್ರತೀತಿ. ಆದರೇ, ನಯನತಾರ ಈ ನಿಯಮವನ್ನು ಉಲ್ಲಂಘಿಸಿದ್ದಾರೆ. ದೇವಾಲಯದ ಮುಂದೆ ನಯನತಾರ ದಂಪತಿ ಖುಷಿ ಖುಷಿಯಿಂದ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಇದು ಕೂಡಾ ವಿವಾದಕ್ಕೆ ಕಾರಣವಾಗಿದೆ.

ನಯನತಾರ ಮಾಡಿರುವ ಯಡವಟ್ಟು, ಅಪಚಾರಗಳ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ಹೀಗಾಗಿ ಟಿಟಿಡಿ ಬೇಸರ ಹೊರಹಾಕಿದೆ. ಇದು ದುರಾದೃಷ್ಟಕರ ಘಟನೆ. ಕಾನೂನು ತಜ್ಞರ ಜೊತೆ ಸಮಾಲೋಚಿಸಿ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಟಿಟಿಡಿ ತಿಳಿಸಿದ್ದಾರೆ.