PSI ಪರೀಕ್ಷಾ ಅಕ್ರಮದಲ್ಲಿ ಆರೋಪ ಎದುರಿಸುತ್ತಿರುವ ಸಚಿವ ಅಶ್ವಥ್ ನಾರಾಯಣ್ – ಎಂಬಿ ಪಾಟೀಲ್ ಭೇಟಿ ವದಂತಿಯನ್ನು ಹಿಂದೆ ಮುಂದೆ ನೋಡದೆ, ಪಕ್ಷದೊಳಗಿನ ತಮ್ಮ ಎದುರಾಳಿಗಳನ್ನು ಹಣಿಯಲು ಅಸ್ತ್ರ ಮಾಡಿಕೊಳ್ಳಲು ನೋಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ಈಗ ಅದೇ ತಿರುಗು ಬಾಣವಾದಂತೆ ಕಾಣುತ್ತಿದೆ.
ಎಂಬಿ ಪಾಟೀಲರ ವಿಚಾರದಲ್ಲಿ ಡಿಕೆ ಶಿವಕುಮಾರ್ ತೋರಿದ ವರ್ತನೆ ಮತ್ತು ಹೇಳಿಕೆ ಬಗ್ಗೆ ಬಹಿರಂಗವಾಗಿ ನಟಿ ಕಮ್ ಕಾಂಗ್ರೆಸ್ ಐಟಿ ಸೆಲ್ ಮಾಜಿ ಮುಖ್ಯಸ್ಥೆ ರಮ್ಯಾ ಅಸಮಾಧಾನ ಹೊರಹಾಕಿದ್ದರು.
ಇದಕ್ಕೆ ಪ್ರತಿಯಾಗಿ ರಮ್ಯಾ ವಿರುದ್ಧ ನಾನಾ ರೀತಿಯಲ್ಲಿ ಆರೋಪ ಮಾಡಿ, ಡಿಕೆಶಿಯನ್ನು ಹೊಗಳುವಂತೆ ಟ್ರೋಲ್ ಆರ್ಮಿಗೆ ಹಂಚಿಕೆಯಾದ ಸಂದೇಶಗಳ ಸ್ಕ್ರೀನ್ ಶಾಟ್ ಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು, ಅವುಗಳನ್ನು ಡಿಕೆ ಶಿವಕುಮಾರ್ ಗೆ ಟ್ಯಾಗ್ ಮಾಡಿ ನೇರನೇರಾ ಡಿಚ್ಚಿ ಹೊಡೆದಿದ್ದಾರೆ.
ನನ್ನನ್ನು ಟ್ರೋಲ್ ಮಾಡುವಂತೆ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರಿಗೆ ‘ಕಚೇರಿ’ ಈ ಸಂದೇಶಗಳನ್ನು ರವಾನಿಸಿದೆ. ಆದರೆ ಅವರು ಆ ತೊಂದರೆಯನ್ನು ತೆಗೆದುಕೊಳ್ಳುವುದು ಬೇಡ.. ನನ್ನನ್ನು ನಾನೇ ಟ್ರೋಲ್ ಮಾಡಿಕೊಳ್ಳುತ್ತೇನೆ ಎಂದು ನಟಿ ರಮ್ಯಾ ಟ್ವೀಟಿಸಿದ್ದಾರೆ.
ಅಲ್ಲದೇ, ಕೆಪಿಸಿಸಿ ಮೀಡಿಯಾ ಸೆಲ್ ನ ಮಾಜಿ ಸೆಕ್ರೆಟರಿ ವಸಂತ ನಗರದ ಬಿ ಆರ್ ನಾಯ್ಡು, ರಮ್ಯಾ ಹಂಚಿಕೊಂಡ ಸ್ಕ್ರೀನ್ ಶಾಟ್ ನಲ್ಲಿರುವ ಅಂಶಗಳನ್ನು ಟ್ವೀಟ್ ಮಾಡಿ, ರಮ್ಯಾಗೆ ಹಲವು ಪ್ರಶ್ನೆ ಕೇಳಿದ್ದರು. B R ನಾಯ್ಡು ಮಾಡಿದ್ದ ಟ್ವೀಟ್ ಅನ್ನು ಹಂಚಿಕೊಂಡು ಕಾಪಿ ಪೇಸ್ಟ್ ಎಂದು ಕಾಳೆದಿದ್ದಾರೆ.
ರಮ್ಯಾ ಹೀಗೆ ನೇರಾನೇರ ಸಮರಕ್ಕೆ ಇಳಿದಿರುವುದು ಡಿಕೆಶಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಸಂಘರ್ಷದ ಹುಳುಕುಗಳನ್ನು ಬಟಾ ಬಯಲು ಮಾಡಿದೆ.
ಕಾಂಗ್ರೆಸ್ ಮಾಡುವ ಪ್ರತಿಯೊಂದು ಆರೋಪಕ್ಕೂ ಇದು ಟೂಲ್ ಕಿಟ್ ಷಡ್ಯಂತ್ರ ಎಂದು ಆರೋಪಿಸುವ ಬಿಜೆಪಿಗೆ ಇದು ದೊಡ್ಡ ಅಸ್ತ್ರವಾಗಿ ಪರಿಣಮಿಸುವುದರಲ್ಲಿ ಯಾವುದೇ ಆಶ್ಚರ್ಯ ಇಲ್ಲ.