ರಾಜ್ಯದಲ್ಲಿ 13 ಉಷ್ಣ ವಿದ್ಯುತ್ ಸ್ಥಾವರಗಳಿವೆ. ಇವುಗಳ ಕಾರ್ಯ ನಿರ್ವಹಣೆಗೆ ಅಗತ್ಯವಾದ ಕಲ್ಲದ್ದಲು ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಅಗತ್ಯವಿರುತ್ತದೆ. ಇವುಗಳ ಮಾರುಕಟ್ಟೆ ದರದ ಏರಿಳಿತ ಆಧರಿಸಿ ಎಲ್ಲ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಹೊಂದಾಣಿಕೆ ವೆಚ್ಚ ಪರಿಷ್ಕರಣೆ ನಡೆಸಲಾಗುತ್ತದೆ ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ಹೇಳಿದ್ದಾರೆ.
ವಿದ್ಯುತ್ ದರ ಪರಿಷ್ಕರಣೆಗೆ ರಾಜ್ಯ ಸರಕಾರ ಮುಂದಾಗಿದೆ ಎಂಬ ಬಗ್ಗೆ ಸಂದೇಶ ರವಾನೆಯಾಗಿದೆ. ಆದರೆ ರಾಜ್ಯ ಸರಕಾರದ ಮುಂದೆ ಅಂಥ ಯಾವುದೇ ಪ್ರಸ್ತಾಪವಿಲ್ಲ. ವಿದ್ಯುತ್ ದರವನ್ನು ವರ್ಷದಲ್ಲಿ ಒಮ್ಮೆ ಮಾತ್ರ ಪರಿಷ್ಕರಿಸುವುದು ವಾಡಿಕೆಯಾಗಿದೆ. ಹೀಗಾಗಿ ದರ ಹೆಚ್ಚಳದ ವದಂತಿ ಬಗ್ಗೆ ಸಾರ್ವಜನಿಕರು ಆತಂಕಗೊಳ್ಳಬೇಕಾದ ಅಗತ್ಯವಿಲ್ಲ.
ರಾಜ್ಯದಲ್ಲಿನ ಉಷ್ನ ವಿದ್ಯುತ್ ಸ್ಥಾವರಗಳ ನಿರ್ವಹಣೆಗೆ ಕಲ್ಲಿದ್ದಲಿನ ಅಗತ್ಯವಿದೆ. ಕಲ್ಲಿದ್ದಲು ಮಾರುಕಟ್ಟೆ ದರದ ಏರಿಳಿತ ಆಧರಿಸಿ ವಿದ್ಯುತ್ ಸರಬರಾಜು ಕಂಪೆನಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ಹೊಂದಾಣಿಕೆ ವೆಚ್ಚ ಪರಿಷ್ಕರಣೆ ಮಾಡುತ್ತಾರೆ. ಇದು ಕಂಪೆನಿಗಳ ವಿವೇಚನಾಧಿಕಾರ.
ಹೊಂದಾಣಿಕೆ ವೆಚ್ಚ ಪರಿಷ್ಕರಣೆ ಕೆಇಆರ್ಸಿ ವಿವೇಚನಾಧಿಕಾರವಾಗಿದೆ. ಕಲ್ಲಿದ್ದಲು ದರ ಆಧರಿಸಿ ಈ ಹೊಂದಾಣಿಕೆ ವೆಚ್ಚ ಹೆಚ್ಚೂ ಆಗಬಹುದು, ಕಡಿಮೆಯೂ ಆಗಬಹುದು. ಈ ಸಂಬಂಧ ಎಸ್ಕಾಂಗಳು ಸಲ್ಲಿಸಿದ ಹೊಂದಾಣಿಕೆ ವೆಚ್ಚ ಪ್ರಸ್ತಾಪ ಹಿನ್ನೆಲೆಯಲ್ಲಿ ಕೆಇಆರ್ ಸಿ ಈ ದರ ಪರಿಷ್ಕರಿಸಿದೆ. ಹೀಗಾಗಿ ಈ ಪ್ರಕ್ರಿಯೆಯನ್ನು ವಾರ್ಷಿಕ ದರ ಪರಿಷ್ಕರಣೆ ಜತೆ ಥಳುಕು ಹಾಕುವ ಅಗತ್ಯವಿಲ್ಲ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ