ಜಮ್ಮು ಕಾಶ್ಮೀರ ಕಣಿವೆಯಲ್ಲಿ ಮತ್ತೆ ಅಶಾಂತಿ ತಲೆ ದೂರಿದೆ. ಗುಂಡಿನ ಸದ್ದಿಗೆ ಕೊನೆ ಇಲ್ಲವಾಗಿದೆ. ಸ್ಥಳೀಯರಲ್ಲದವರನ್ನು ಟಾರ್ಗೆಟ್ ಮಾಡಿ ಉಗ್ರರು ಅಟ್ಟಹಾಸ ಮೆರೆಯುತ್ತಿದ್ದಾರೆ. ಕುಲ್ಗಮ್ ಜಿಲ್ಲೆಯಲ್ಲಿ ಬ್ಯಾಂಕ್ ಮ್ಯಾನೇಜರ್ ಕೊಂದ ಕೇವಲ 10ಗಂಟೆಗಳ ಅಂತರದಲ್ಲಿ ಮತ್ತೊಬ್ಬರನ್ನು ಹತ್ಯೆ ಮಾಡಲಾಗಿದೆ.
ಬುದ್ಗಾಮ್ ಜಿಲ್ಲೆಯ ಮಗ್ರಿಪೋರಾದಲ್ಲಿ ಸ್ಥಳೀಯರಲ್ಲದ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಬಿಹಾರ ಮೂಲದ ದಿಲ್ ಸುಖ್ ಎಂಬ ಕಾರ್ಮಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಕಾರ್ಮಿಕಣಿಗೆ ಚಿಕಿತ್ಸೆ ಮುಂದುವರೆಲಾಗುತ್ತಿದೆ.
ಪಾಕ್ ಮೂಲದ ಲಷ್ಕರ್ ಇ ತೋಯ್ಬಾ ಭಯೋತ್ಪಾದಕ ಸಂಘಟನೆ ಈ ದಾಳಿ ಹೊಣೆ ಹೊತ್ತಿದೆ.
ಕಳೆದ ಐದು ತಿಂಗಳಲ್ಲಿ ಕಣಿವೆ ರಾಜ್ಯದಲ್ಲಿ ನಡೆದ ಭಯೋತ್ಪಾದಕ ಕೃತ್ಯಗಳಲ್ಲಿ 15ಯೋಧರು ಹುತಾತ್ಮರಾಗಿದ್ದಾರೆ. 20ಕ್ಕೂ ಹೆಚ್ಚು ನಾಗರಿಕರು ಹತ್ಯೆ ಆಗಿದ್ದಾರೆ.. ಈ ಅಂಕಿ ಅಂಶಗಳೇ ಕಾಶ್ಮೀರದಲ್ಲಿ ಪರಿಸ್ಥಿತಿ ಎಷ್ಟು ಭೀಕರವಾಗಿದೆ ಎಂಬುದನ್ನು ಸಾರಿ ಹೇಳುತ್ತಿದೆ.
ಆರ್ಟಿಕಲ್ 370ನೇ ವಿಧಿ ರದ್ದು ಬಳಿಕ ಕಾಶ್ಮೀರ ಶಾಂತವಾಗಿದೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ ವಾಸ್ತವ ಪರಿಸ್ಥಿತಿ ಅಲ್ಲಿ ಬಿಜೆಪಿಯವರು ಹೇಳುವಂತೆ ಇಲ್ಲ.
ಕಾಶ್ಮೀರಿ ಫಿಲಂಸ್ ಬಳಿಕ ದೇಶವ್ಯಾಪಿ ಹಬ್ಬಿಸಿದ ರೋಷಾಗ್ನಿ, ದ್ವೇಷಾಗ್ನಿಯಿಂದ ಉಗ್ರರು ಕೆರಳಿ ಇಂಥಾ ಕೃತ್ಯಕ್ಕೆ ಕೈ ಹಾಕಿದ್ದಾರೆ ಎನ್ನಲಾಗಿದೆ.
ಜಮ್ಮು ಕಾಶ್ಮೀರದಲ್ಲಿ ಇಂದು ಕಾಶ್ಮೀರಿ ಪಂಡಿತರು ಇರಲು ಭಯ ಪಡುವಂತೆ ಆಗಿದೆ. ನಮಗೆ ರಕ್ಷಣೆ ನೀಡಿ ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. 300ಕ್ಕೂ ಹೆಚ್ಚು ಕುಟುಂಬಗಳು ಕಳೆದ ಮೂರು ದಿನಗಳಲ್ಲಿ ಕಣಿವೆಯಿಂದ ಬೇರೆ ರಾಜ್ಯಕ್ಕೆ ವಲಸೆ ಹೋಗಿದ್ದಾರೆ.