ತಮಿಳುನಾಡಿನಲ್ಲಿ ವಿರೋಧ ಪಕ್ಷವಾದ ಎಐಎಡಿಎಮ್ಕೆ ಪಕ್ಷದಲ್ಲಿನ ಜಗಳ ತಾರ್ಕಿಕ ಅಂತ್ಯಕ್ಕೆ ಬಂದು ನಿಂತಿದೆ. ಇಂದು ಪಕ್ಷದಲ್ಲಿನ ದ್ವಿ-ನಾಯಕತ್ವ ನೀತಿಗೆ ತೆರೆಬಿದ್ದಿದೆ.
ಎಐಎಡಿಎಮ್ಕೆ ಯ ಎಡಪ್ಪಾಡಿ ಕೆ ಪಳನಿಸ್ವಾಮಿಯವರು ಇಂದು ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಇದಾದ ಬೆನ್ನಲ್ಲೇ, ಮತ್ತೊಬ್ಬ ನಾಯಕ ಓ ಪನ್ನೀರಸೆಲ್ವಂ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.
ಎಐಎಡಿಎಮ್ಕೆ ಪಕ್ಷದ 2500 ಕಾರ್ಯದರ್ಶಿಗಳ ಒಕ್ಕೂಟ ಕ ಪಳನಿಸ್ವಾಮಿಯವರನ್ನು ಮದ್ಯಂತರ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದೆ. ಅಲ್ಲದೇ, ಪಕ್ಷ ವಿರೋಧಿ ಕಾರ್ಯಾಚರಣೆಗಳ ಆಧಾರದ ಮೇಲೆ ಓ ಪನ್ನೀರಸೆಲ್ವಂ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದೆ.
ಇಂದು ತಮಿಳುನಾಡಿನ ಎಐಎಡಿಎಮ್ಕೆ ಪಕ್ಷಕ್ಕೆ ಸಂಬಂಧಿಸಿದಂತೆ ರಾಜಕೀಯ ಪ್ರಹಸನವೇ ನಡೆದಿದೆ.
ತಮಿಳ್ ಮಹಾನ್ ಅವರ ಅಧ್ಯಕ್ಷತೆಯಲ್ಲಿ ಇಂದು ಬೆಳಿಗ್ಗೆ 9.15 ಕ್ಕೆ ಪಕ್ಷದ ಜನರಲ್ ಕೌನ್ಸಿಲ್ ಸಭೆ ನಡೆದಿದೆ. ಈ ಸಭೆಯಲ್ಲಿ ಪಳನಿಸ್ವಾಮಿಯವರನ್ನು ಪಕ್ಷದ ಮಧ್ಯಂತರ ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಗಿದೆ. ಇದಕ್ಕಿಂತ ಮೊದಲು ಪನ್ನೀರಸೆಲ್ವಂ ಅವರು ಈ ಸಭೆಗೆ ತಡೆ ನೀಡಬೇಕೆಂಬ ಅರ್ಜಿಯನ್ನು ಹೈಕೋರ್ಟ್ ರದ್ದು ಮಾಡಿತ್ತು. ಈ ಬೆನ್ನಲ್ಲೇ, ಪನ್ನೀರಸೆಲ್ವ. ಮತ್ತು ಪಳನಿಸ್ವಾಮಿ ಅಭಿಮಾನಿಗಳ ನಡುವೆ ಪಕ್ಷದ ಕಚೇರಿ ಮುಂದೆ ಮಾರಾಮಾರಿ ಗಲಾಟೆ ನಡೆದಿತ್ತು.
ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಪಳನಿಸ್ವಾಮಿಯವರು, ಪಕ್ಷದ ಖಜಾಂಚಿ ಸ್ಥಾನ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಪನ್ನೀರಸೆಲ್ವಂ ಅವರನ್ನು ಉಚ್ಚಾಟನೆ ಮಾಡಿದ್ದಾರೆ. ದಿಂಡುಕ್ಕಲ್ ಶ್ರೀನಿವಾಸನ್ ಅವರನ್ನು ನೂತನ ಖಜಾಂಚಿಯನ್ನಾಗಿ ನೇಮಕ ಮಾಡಿದ್ದಾರೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಮರಣಾನಂತರ ಎಐಎಡಿಎಮ್ಕೆ ಪಕ್ಷದಲ್ಲಿ ಒಡಕು ಮೂಡಿತ್ತು. ಪಕ್ಷದಲ್ಲಿನ ಏಕ ನಾಯಕತ್ವಕ್ಕಾಗಿ ಇದುವರೆಗೂ ಪನ್ನೀರಸೆಲ್ವಂ ಮತ್ತು ಪಳನಿಸ್ವಾಮಿಯವರ ನಡುವೆ ಮುಸುಕಿನ ಗುದ್ದಾಟ ನಡೆದಿತ್ತು. ಇಂದು ಈ ಮುಸುಕಿನ ಗುದ್ದಾಟ ತೆರೆ ಬಿದ್ದಿದೆ.