ಪಂಚ ರಾಜ್ಯ ಸೋಲು, ಪಕ್ಷದ ಒಳಗೆ ಹೊರಗೆ ಕೇಳಿಬರುತ್ತಿರುವ ಟೀಕೆಗಳಿಂದ ಎಚ್ಚೆತ್ತ ಸೋನಿಯಾ ಗಾಂಧಿ ಈಗ ಫುಲ್ ಆಕ್ಟಿವ್ ಆದಂತೆ ಕಾಣಿಸುತ್ತಿದೆ.
ಬುಧವಾರದ ಲೋಕಸಭೆ ಕಲಾಪದಲ್ಲಿ ಸೋನಿಯಾಗಾಂಧಿ ಅತ್ಯುತ್ಸಾಹದಿಂದ ಕಾಣಿಸಿಕೊಂಡಿದ್ದಾರೆ. ತೈಲ ಬೆಲೆ ಹೆಚ್ಚಳ ಖಂಡಿಸಿ ವಿರೋಧ ಪಕ್ಷಗಳು ನಡೆಸಿದ ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದಾರೆ.
ಸಾಮಾನ್ಯವಾಗಿ ಸೌಮ್ಯ ಸ್ವಭಾವದ ಸೋನಿಯಾಗಾಂಧಿ ನಿನ್ನೆ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಪಕ್ಷದ ಸದಸ್ಯರನ್ನಷ್ಟೇ ಅಲ್ಲದೆ ಇತರೆ ಪಕ್ಷಗಳ ಸದಸ್ಯರನ್ನು ಹುರಿದುಂಬಿಸಿ ಕೇಂದ್ರ ಸರ್ಕಾರದ ವಿರುದ್ಧ ಕಲಾಪದಲ್ಲಿ ಪ್ರತಿಭಟನೆಗೆ ಕಾರಣರಾಗಿದ್ದಾರೆ.
ಪಕ್ಷದ ಅಧಿನಾಯಕಿ ಸಲಹೆ ಸೂಚನೆ ಮೇರೆಗೆ ಕಾಂಗ್ರೆಸ್ ಸಂಸದರು ಭಿತ್ತಿಪತ್ರ ಹಿಡಿದು ಸದನದಲ್ಲಿ ಪ್ರತಿಭಟನೆ ನಡೆಸಿದರು. ಇತರೆ ವಿರೋಧ ಪಕ್ಷಗಳು ಕಾಂಗ್ರೆಸ್ ನಡೆಯನ್ನು ಅನುಸರಿಸಿದವು.
ಒಂದು ಹಂತದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಸಂಸದ ಹಸನ್ ಮಸೂದ್ ಅನುಬಂಧ ಪ್ರಶ್ನೆ ಕೇಳಲು ನಿಂತಾಗ, ಮಧ್ಯ ಪ್ರವೇಶಿಸಿದ ಸೋನಿಯಾ ಗಾಂಧಿ, ಕುಳಿತುಕೊಳ್ಳಲು ಸೂಚನೆ ನೀಡಿದರು.
ಕಾಂಗ್ರೆಸ್ ಮಿತ್ರಪಕ್ಷ ಇಂಡಿಯನ್ ಮುಸ್ಲಿಂ ಲೀಗ್ ಸದಸ್ಯ ಮೊಹಮ್ಮದ್ ಬಷೀರ್ ಪ್ರಶ್ನೆ ಕೇಳಲು ಎದ್ದು ನಿಂತಾಗ, ಬೆಲೆ ಏರಿಕೆ ವಿಚಾರ ಪ್ರಸ್ತಾಪಿಸಿ, ಕೇಂದ್ರವನ್ನು ತರಾಟೆಗೆ ತೆಗೆದುಕೊಳ್ಳುವಂತೆ ಸೂಚಿಸಿದರು.
ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ಮತ್ತು ಇತರರು ಸದನದ ಬಾವಿಗೆ ಇಳಿದಾಗ ಅವರಿಗೆ ಸೋನಿಯಾ ಗಾಂಧಿ ಹಲವು ಸಲಹೆ ಸೂಚನೆ ನೀಡಿದರು.
ಪ್ರಶ್ನೋತ್ತರ ಅವಧಿ ಬಳಿಕವೂ ಸಭೆಯಲ್ಲಿಯೇ ಇದ್ದ ಸೋನಿಯಾ ಗಾಂಧಿ ಪಕ್ಷಕ್ಕೆ ಸಾರಥ್ಯ ವಹಿಸಿದರು. ಶೂನ್ಯ ವೇಳೆಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ಶಾಲೆಗಳಲ್ಲಿ ಮಧ್ಯಾನ್ಹದ ಬಿಸಿ ಊಟವನ್ನು ಪುನಃ ಆರಂಭಿಸಲು ಒತ್ತಾಯ ಮಾಡಿದರು.
ಆದರೆ ಈ ಉತ್ಸಾಹ ಒಂದು ದಿನಕ್ಕೆ ಸೀಮಿತನಾ? ಅಥವಾ ಇದೇ ಉತ್ಸಾಹ ಮುಂದುವರೆಯುತ್ತಾ ಎಂಬುದು ಕುತೂಹಲಕಾರಿ ವಿಚಾರ