ಹೊಸ ಸಂಸತ್ ಭವನದ ಗೋಡೆಗಳಲ್ಲಿ ಅರಳಿರುವ ಪೇಂಟಿಂಗ್ಗಳ ಪೈಕಿ ಅಖಂಡ ಭಾರತ ಮುರಲ್ ಪೇಂಟಿಂಗ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಖಂಡ ಭಾರತವನ್ನು ಮತ್ತೆ ಸಾಧಿಸಬೇಕೆಂಬ ಆರ್ಎಸ್ಎಸ್ ಸಂಕಲ್ಪಕ್ಕೆ ಇದು ಕನ್ನಡಿ ಹಿಡಿಯುತ್ತಿದೆ ಎಂದು ಬಲಪಂಥೀಯರು ಸಮರ್ಥನೆ ಮಾಡುತ್ತಿದ್ದಾರೆ.
ಅತೃಪ್ತ ಆತ್ಮಗಳು ಮತ್ತಷ್ಟು ಉರಿದುಕೊಳ್ಳಲು ಹೊಸ ಸಂಸತ್ ಒಳಗಿನ ಈ ಫೋಟೋ ಸಾಕು
ಎಂದು ಬಲಪಂಥೀಯ ಶರಣ್ ಮುಷ್ಟೂರ್ ಎನ್ನುವವರು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಕೆಲವರು ಅಲ್ಲಿಯೇ ತಿರುಗೇಟು ಕೂಡ ನೀಡಿದ್ದಾರೆ.
ಇನ್ನೂ, ಕೆಲವರು
ಅಖಂಡ ಭಾರತ ಪುನಃಸೃಷ್ಟಿ ಅಸಾಧ್ಯ.. ಚೀನಾ, ಪಾಕಿಸ್ತಾನದಂತಹ ನೆರೆಯ ದೇಶಗಳ ಜೊತೆ ಗಡಿವಿವಾದ ಎದುರಿಸುತ್ತಿರುವ ಭಾರತಕ್ಕೆ ಅಖಂಡ ಎಂಬುದು ಕನಸು.. ಸಾಧ್ಯವೇ ಇಲ್ಲದ ಅಖಂಡತೆಯ ಬಗ್ಗೆ ನಿನಾದ ಹೊರಡಿಸುತ್ತಿರುವುದು ಆಶ್ಚರ್ಯ ತಂದಿದೆ. ಇದು ಸುಮ್ನೆ ಆಡಂಬರವಷ್ಟೇ
ಎಂದು ವ್ಯಾಖ್ಯಾನಿಸುತ್ತಿದ್ದಾರೆ.
ಅಖಂಡ ಭಾರತದ ಸಂಕಲ್ಪ ಸುಸ್ಪಷ್ಟ ಎಂದು ಈ ಪೇಂಟಿಂಗ್ ಕುರಿತಾಗಿ ಸಂಸದೀಯ ವ್ಯವಹಾರಗಳ ಸಚಿವಾಲಯ ಟ್ವೀಟ್ ಮಾಡಿರುವುದು ಇಷ್ಟೆಲ್ಲಾ ಚರ್ಚೆಗಳಿಗೆ ಕಾರಣವಾಗಿದೆ.
ಈ ಬಗ್ಗೆ ನ್ಯಾಷನಲ್ ಗ್ಯಾಲರಿ ಆಫರ್ ಮಾಡ್ರೆನ್ ಆರ್ಕಿಟೆಕ್ಚರ್ ಜನರಲ್ ಅದ್ವೈತ್ ಗಡ್ನಾಯಕ್ ವಿವರಣೆ ನೀಡುತ್ತಾ, ಪ್ರಾಚೀನ ಕಾಲದಲ್ಲಿ ಭಾರತೀಯ ಚಿಂತನೆಯ ಪ್ರಭಾವವನ್ನು ವಿವರಿಸುವುದೇ ನಮ್ಮ ಉದ್ದೇಶ. ಇದು ಆಫ್ಘಾನಿಸ್ತಾನದಿಂದ ಆಗ್ನೇಯ ಏಷಿಯಾವರೆಗೂ ವಿಸ್ತರಿಸಿದೆ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯವಾದಿಗಳು ವರ್ಸಸ್ ಲೌಕಿಕವಾದಿಗಳು
ಹಿಂದೂಗಳನ್ನು ಉತ್ತೇಜಿಸುವ ವಿಚಾರಗಳಲ್ಲಿ ಅಖಂಡ ಭಾರತ್ ಅಂಶ ಕೂಡ ಒಂದು.. ಪುರಾತನ ಭಾರತ ದೇಶ-ಅಖಂಡ ಭಾರತ ಎಂಬ ಅಂಶಗಳನ್ನು ಪದೇ ಪದೇ ಆರ್ಎಸ್ಎಸ್, ಬಿಜೆಪಿ ನಾಯಕರು ಪ್ರಸ್ತಾಪಿಸುತ್ತಲೇ ಇರುತ್ತಾರೆ.
ಅಖಂಡ ಭಾರತದ ಲೆಕ್ಕ ನೋಡಿದಲ್ಲಿ ಆಪ್ಘಾನಿಸ್ತಾನ, ಪಾಕಿಸ್ತಾನ, ಭಾರತ, ನೇಪಾಳ, ಬರ್ಮಾ,ಟಿಬೆಟ್, ಭೂತಾನ್, ಬಾಂಗ್ಲಾದೇಶಗಳನ್ನು ಒಂದು ಮಾಡುವ ಬೃಹತ್ ಯೋಜನೆ. ಒಂದು ಕಾಲದಲ್ಲಿ ಇವೆಲ್ಲಾ ಒಂದು ದೇಶವಾಗಿಯೇ ಇದ್ದವು. ಈಗ ಇವುಗಳನ್ನೆಲ್ಲಾ ಮತ್ತೆ ಒಗ್ಗೂಡಿಸಿ ಅಖಂಡ ಭಾರತ ನಿರ್ಮಿಸಬೇಕು ಎನ್ನುವುದು ಬಲಪಂಥೀಯರ ವಾದ.
ಪಾಕಿಸ್ತಾನ, ಭಾರತವನ್ನು ಒಂದು ಮಾಡಿದಲ್ಲಿ ಅಖಂಡ ಭಾರತದ ಕನಸು ನನಸಾಗಲಿದೆ ಎಂದು 1965ರಲ್ಲಿ ಜನಸಂಘ ಒಂದು ತೀರ್ಮಾನವನ್ನು ಮಾಡಿತ್ತು.
ಪ್ರಧಾನಿ ನರೇಂದ್ರ ಮೋದಿ ಕೂಡ ಅವರು ಅಧಿಕಾರಕ್ಕೆ ಬರುವ ಮುನ್ನ ಅಖಂಡ ಭಾರತದ ಬಗ್ಗೆ ಬಿಜೆಪಿಯ ಚಿಂತನೆಗಳ ಬಗ್ಗೆ ಆಗಾಗ ಮಾತನಾಡಿದ್ದು ಉಂಟು.
ಆದರೆ, ಭಾರತ, ಪಾಕಿಸ್ತಾನ, ಆಫ್ಘಾನಿಸ್ತಾನ ಒಂದಾದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಲಿದೆ.. ಹಿಂದೂಗಳು ಅಲ್ಪಸಂಖ್ಯಾತರಾಗುತ್ತಾರೆ.. ಇದೇ ಸಂಭವಿಸಿದಲ್ಲಿ ಹಿಂದೂಸ್ತಾನವನ್ನು ಇಸ್ಲಾಮಿಕ್ ದೇಶವಾಗಿ ಬದಲಾಗುವುದು ತುಂಬಾನೆ ಸುಲಭ ಆಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಆ ದೇಶಗಳ ಮುಸ್ಲಿಮರನ್ನು ಹಿಂದುತ್ವದೆಡೆಗೆ ಮರಳಿಸಿ.. ಆ ಅಖಂಡ ಭಾರತವನ್ನು ಒಂದು ಹಿಂದೂ ರಾಷ್ಟ್ರವನ್ನಾಗಿ ಮಾಡುತ್ತೀರಾ.. ಇದು ಸಾಧ್ಯ ಆಗುತ್ತಾ ಎಂಬ ಪ್ರಶ್ನೆಗಳನ್ನು ಬಿಜೆಪಿ ಮತ್ತು ಆರ್ಎಸ್ಎಸ್ ಮುಂದಿಡುತ್ತಿದ್ದಾರೆ.
ಆದರೆ, ಹಿಂದೂ ರಾಷ್ಟ್ರ ಎಂದು ಪ್ರಕಟಿಸುವುದೆಂದರೇ ಪಾಕಿಸ್ತಾನದ ಮಾದರಿಯಂತೆ ಧರ್ಮದ ಆಧಾರದ ಮೇಲೆ ದೇಶವನ್ನು ಸ್ಥಾಪಿಸುವುದೇ ಆಗಲಿದೆ. ಇದು ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ತರುವಂಥಾದ್ದು ಎಂದು ಲೌಕಿಕವಾದಿಗಳು ವಾದ ಮಂಡಿಸುತ್ತಿದ್ದಾರೆ.
ಹಿಂದೂ ರಾಷ್ಟ್ರವಾದ ಭಾರತವನ್ನು ವಿಶ್ವಗುರು, ಜಾಗತಿಕ ನಾಯಕನನ್ನಾಗಿ ಮಾಡಬೇಕೆಂಬ ಮೋದಿಯ ಕನಸನ್ನು ಶಾಶ್ವತವಾಗಿ ಭೂಸ್ಥಾಪಿತ ಮಾಡಲಿದೆ ಎನ್ನುವ ಮಾತುಗಳನ್ನು ಜಾತ್ಯಾತೀತವಾದಿಗಳು ಮಂಡಿಸುತ್ತಿದ್ದಾರೆ.
ಅಖಂಡ ಭಾರತದ ಪೇಂಟಿಂಗ್ ಔಚಿತ್ಯವನ್ನೇ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸಲಾಗುತ್ತಿದೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನೆ ಕೇಳುತ್ತಿದ್ದಾರೆ.
ಒಂದು ಕಡೆ ಪಾಕಿಸ್ತಾನದೊಂದಿಗೆ ವೈರತ್ವ ಮುಂದುವರೆದಿದೆ. ಮತ್ತೊಂದೆಡೆ. ಚೀನಾ ಜೊತೆ ಗಡಿ ವಿವಾದ ಬಗೆಹರಿಯುತ್ತಿಲ್ಲ. ಭಾರತದ ಗಡಿಯಲ್ಲಿ ಚೀನಾ ಈಗಾಗಲೇ 60 ಶಾಶ್ವತ ಗ್ರಾಮಗಳನ್ನು ಸ್ಥಾಪಿಸಿದೆ.. ಅತ್ಯಾಧುನಿಕ ಮೂಲ ಸೌಕರ್ಯಗಳನ್ನು ಕಲ್ಪಿಸುತ್ತಿದೆ. ಈ ಮೂಲಕ ಭಾರತಕ್ಕೆ ಸವಾಲ್ ಮೇಲೆ ಸವಾಲ್ ಹಾಕುತ್ತಿದೆ. ಈ ಹಂತದಲ್ಲಿ ಅಖಂಡ ಭಾರತದ ನಿನಾದ ಹೊರಡಿಸುವ ಅಗತ್ಯವಿದೆಯೇ? ಅಸಾಧ್ಯವಾದುದನ್ನು ಸುಸಾಧ್ಯ ಮಾಡುವುದಾಗಿ ಹೇಳಿಕೊಂಡು ಪ್ರಚಾರ ಗಿಟ್ಟಿಸುವುದೇ ಇದರ ಹಿಂದಿನ ಉದ್ದೇಶ ಇದ್ದಂತಿದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.