ವಾರಣಾಸಿಯ ಜ್ಞಾನವಾಪಿ ಮಸೀದಿಯ ದಕ್ಷಿಣದ ನೆಲಮಾಳಿಗೆಯಲ್ಲಿ ಹಿಂದೂಗಳಿಗೆ ಪ್ರಾರ್ಥನೆ ಮತ್ತು ಪೂಜೆ ನಡೆಸಲು ಜನವರಿ 31 ರಂದು ಜಿಲ್ಲಾ ನ್ಯಾಯಾಲಯ ನೀಡಿದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಲು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ. ಈ ಮೂಲಕ ಜ್ಞಾನವಾಪಿ ಕೇಸ್ನಲ್ಲಿ ಹಿಂದೂಗಳಿಗೆ ಮತ್ತೆ ಜಯ ಲಭಿಸಿದೆ.
ಜ್ಞಾನವಾಪಿಯಲ್ಲಿ ಪೂಜೆಗೆ ತಡೆ ಕೋರಿ ಮುಸ್ಲಿಂ ಕಮಿಟಿ ಸಲ್ಲಿಸಿದ ಅರ್ಜಿಯನ್ನು ವಾರಣಾಸಿ ಕೋರ್ಟ್ ವಜಾಗೊಳಿಸಿದೆ. ಜಿಲ್ಲಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ ಮುಸ್ಲಿಂ ಕಮಿಟಿಗೆ ತನ್ನ ಮನವಿಗಳನ್ನು ತಿದ್ದುಪಡಿ ಮಾಡಲು ಹೈಕೋರ್ಟ್ ಇಂದು ಫೆಬ್ರವರಿ 6 ರವರೆಗೆ ಕಾಲಾವಕಾಶವನ್ನು ನೀಡಿದೆ.
ಏತನ್ಮಧ್ಯೆ ಉತ್ತರ ಪ್ರದೇಶ ಸರ್ಕಾರಕ್ಕೆ ಜ್ಞಾನವಾಪಿ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದನ್ನು ಖಚಿತಪಡಿಸಿಕೊಳ್ಳಲು ಕೋರ್ಟ್ ತಿಳಿಸಿದೆ. ಕೇಸ್ಗೆ ಸಂಬಂಧಿಸಿದಂತೆ ವಾರಣಾಸಿ ನ್ಯಾಯಾಲಯದ ಜನವರಿ 31 ರ ಆದೇಶವನ್ನು ಪ್ರಶ್ನಿಸಿ ಅಂಜುಮನ್ ಇಂತೇಜಾಮಿಯಾ ಮಸಾಜಿದ್ ಸಮಿತಿ ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.
ಜನವರಿ 31 ರಂದು ಕೋರ್ಟ್ ನೀಡಿದ ಆದೇಶದಂತೆ ಮಸೀದಿಯ ನೆಲಮಾಳಿಗೆಯಲ್ಲಿ ಹಿಂದೂಗಳಿಗೆ ಪ್ರಾರ್ಥನೆಗಳನ್ನು ನಡೆಸಲು ಅನುಮತಿಸಲಾಗಿದೆ.