ನಟ ಅಲ್ಲು ಅರ್ಜುನ್ ಅವರಿಗೆ ತೆಲಂಗಾಣ ಹೈಕೋರ್ಟ್ ನಾಲ್ಕು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಇವತ್ತು ಬೆಳಗ್ಗೆಯಷ್ಟೇ ಹೈದರ್ಬಾದ್ ಪೊಲೀಸರು ಅಲ್ಲು ಅರ್ಜುನ್ ಅವರನ್ನು ಬಂಧಿಸಿದ್ದರು.
ಎರಡು ಗಂಟೆಗಳ ಕಾಲ ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಜುವ್ವಾದಿ ಶ್ರೀದೇವಿಯವರು ಮಧ್ಯಂತರ ಜಾಮೀನು ಮಂಜೂರು ಮಾಡಿದರು.
ʻನಾನು ಮಧ್ಯಂತರ ಜಾಮೀನು ನೀಡುವುದರ ಪರವಾಗಿದ್ದೇನೆ, ಸೀಮಿತ ಅವಧಿಗೆ, ಅರ್ನಬ್ ಗೋಸ್ವಾಮಿ ಪ್ರಕರಣವನ್ನು ಆಧರಿಸಿ. ಬಂಧಿಸಲಾಗಿರುವ ಕಾರಣ ಬಿಡುಗಡೆಗಾಗಿ ಜೈಲು ಅಧೀಕ್ಷಕರಿಗೆ ಬಾಂಡ್ನ್ನು ಸಲ್ಲಿಸಬೇಕುʼ ಎಂದು ನ್ಯಾಯಮೂರ್ತಿಗಳು ಹೇಳಿದರು.
ʻನನಗೆ ಇದು ಚಿಂತೆಯನ್ನುಂಟು ಮಾಡಿದೆ. ಅವರು ನಟನೆಂಬ ಕಾರಣಕ್ಕಾಗಿ ಅವರನ್ನು ಈ ರೀತಿ ಬಂಧಿಸಲು ಸಾಧ್ಯವೇ..? ಈ ಭೂಮಿಯಲ್ಲಿ ಅವರಿಗೂ ಜೀವ ಮತ್ತು ಸ್ವಾತಂತ್ರ್ಯದ ಹಕ್ಕಿದೆ. ಅವರು ನಟನೆಂಬ ಕಾರಣಕ್ಕೆ ಆ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲʼ ಎಂದು ನ್ಯಾಯಮೂರ್ತಿಗಳು ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದರು.
ನಟ ಅಲ್ಲು ಅರ್ಜುನ್ ಪರವಾಗಿ ಹಿರಿಯ ವಕೀಲ ಎಸ್ ನಿರಂಜನ್ ರೆಡ್ಡಿ ವಾದಿಸಿದರು.
ʻಎಫ್ಐಆರ್ನ್ನು ಓದಿದಾಗ ಅಲ್ಲು ಅರ್ಜುನ್ಗೆ ಸಾವಿನ ಬಗ್ಗೆ ಗೊತ್ತಿತ್ತು ಎಂದು ಇದ್ಯಾ..? ಪೊಲೀಸ್ ಠಾಣಾಧಿಕಾರಿ ಕೊಟ್ಟಿರುವ ಎಚ್ಚರಿಕೆಯಲ್ಲೂ ಸಾವಾಗುವ ಸಾಧ್ಯತೆ ಇದೆ ಎಂದು ಇರಲಿಲ್ಲ. ನಿರ್ಲಕ್ಷತೆಯಿಂದ ಸಾವಾಗುವ ಸಾಧ್ಯತೆ ಇತ್ತು.
ರಾಯೀಸ್ ಸಿನಿಮಾದ ಪ್ರೊಮೋಷನ್ ವೇಳೆ ನಟ ಶಾರುಖ್ ಖಾನ್ ರೈಲ್ವೆ ಸ್ಟೇಷನ್ನಲ್ಲಿ ತಮ್ಮ ಬಟ್ಟೆಯನ್ನು ಎಸೆದರು. ಆ ಕಾಲ್ತುಳಿತ ಉಂಟಾಯಿತು. ಪ್ರಕರಣವೂ ದಾಖಲಾಯಿತು. ಆದರೆ ಈ ಘಟನೆಗೆ ನಟ ಶಾರುಖ್ ಖಾನ್ ಅವರನ್ನು ಕ್ರಿಮಿನಲ್ ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿತು.
ಕಾಲ್ತುಳಿತಕ್ಕೆ ಮೃತಪಟ್ಟ ಮಹಿಳೆ ಇದ್ದಿದ್ದು ನೆಲ ಮಹಡಿಯಲ್ಲಿ. ಆಗ ನಟ ಮೊದಲನೇ ಮಹಡಿಯಲ್ಲಿದ್ದರು. ನಟ ಅಲ್ಲು ಅರ್ಜುನ್ ಮಾತ್ರವಲ್ಲ, ಸಿನಿಮಾದ ನಿರ್ಮಾಪಕರು ಕೂಡಾ ನಟ ಅಲ್ಲು ಅರ್ಜುನ್ ಅವರು ಥಿಯೇಟರ್ಗೆ ಭೇಟಿ ನೀಡುತ್ತಾರೆ ಎಂಬ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರುʼ
ʻಥಿಯೇಟರ್ಗೆ ನಟ ಬರುತ್ತಾರೆ ಎಂದು ಎಲ್ಲರಿಗೂ ಗೊತ್ತಿತ್ತು. ಪೊಲೀಸರಿಗೂ ಗೊತ್ತಿತ್ತು. ಈ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ ಅವರು ನಟ ಶಾರುಖ್ ಖಾನ್ ರೀತಿಯಲ್ಲಿ ನಡೆದುಕೊಂಡಿಲ್ಲ. ಭಾರತೀಯ ನಾಗರಿಕ ಸಂಹಿತೆಯ ಕಲಂ 118ರಡಿಯಲ್ಲಿ ಸ್ವಯಂಪ್ರೇರಿತವಾಗಿ ಘಾಸಿ ಉಂಟು ಮಾಡಿದ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಸ್ವಯಂಪ್ರೇರಿತ ಘಾಸಿ ಮಾಡುವುದು ಎಂದರೆ ಅಪಾಯಕಾರಿ ಅಸ್ತ್ರಗಳನ್ನು ಬಳಸುವುದು. ಆದರೆ ಇಲ್ಲಿ ಎಲ್ಲಿ ಅಪಾಯಕಾರಿ ಅಸ್ತ್ರಗಳನ್ನು ಬಳಸಿದ್ದಾರೆ..? ಥಿಯೇಟರ್ಗೆ ನಟ ಅಲ್ಲು ಅರ್ಜುನ್ ಬರುವುದಕ್ಕೂ ಮುಂಚೆಯೇ ಪೊಲೀಸರು ಜನರನ್ನು ಚದುರಿಸ್ತಿದ್ದರು. ಜೊತೆಗೆ ಮೃತ ಪಟ್ಟ ಆ ಮಹಿಳೆ ಮತ್ತು ನಟ ಒಂದೇ ಮಹಡಿಯಲ್ಲಿ ಇರಲಿಲ್ಲʼ ಎಂದು ನಟ ಅಲ್ಲು ಅರ್ಜುನ್ ಅವರ ಪರ ವಕೀಲರು ವಾದಿಸಿದರು.
ADVERTISEMENT
ADVERTISEMENT