ಇದು ನಾಲ್ಕಾರು ಶಾಸಕರನ್ನು ಆಯ್ಕೆ ಮಾಡುವ, ಸಚಿವರನ್ನು ಆಯ್ಕೆ ಮಾಡುವ ಚುನಾವಣೆಯಲ್ಲ. ಕರ್ನಾಟಕದ ಭವಿಷ್ಯವನ್ನು ನರೇಂದ್ರ ಮೋದಿ ಕೈಗೆ ನೀಡುವ ಚುನಾವಣೆ ಆಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬನಹಟ್ಟಿಯಲ್ಲಿ ಆಡಿದ ಈ ಮಾತುಗಳು ಕನ್ನಡಿಗರ ಅಸ್ಮಿತೆಯನ್ನು ಕೆಣಕಿದ್ದು, ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರಣಿ ಟ್ವೀಟ್ ಮೂಲಕ ಕಟುವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ವಾರೆ ವ್ಹಾ ಅಮಿತ್ ಶಾಜೀ,
ಇದು ಕರ್ನಾಟಕದ ಭವಿಷ್ಯವನ್ನು ಮೋದಿ ಅವರ ಕೈಯಲ್ಲಿ ಕೊಡುವ ಚುನಾವಣೆ ಎಂಬ ಸತ್ಯವನ್ನೇ ಹೇಳಿದ್ದೀರಿ, ಧನ್ಯವಾದಗಳು ಎಂದು ವ್ಯಂಗ್ಯ ಮಾಡುವ ಮೂಲಕ ಸಿದ್ದರಾಮಯ್ಯ ಚಾಟಿ ಬೀಸಿದ್ದಾರೆ.
ಕನ್ನಡಿಗರಿಗೆ ಇದೆಂಥಾ ಅವಮಾನ…!!
ಕರ್ನಾಟಕದ ಭವಿಷ್ಯವನ್ನು ನೋಡಿಕೊಳ್ಳಲು ಒಬ್ಬ ಕನ್ನಡಿಗನೂ ಇಲ್ಲದಷ್ಟು ನಿಮ್ಮ ಬಿಜೆಪಿ ಪಕ್ಷ ದಿವಾಳಿಯಾಗಿದೆಯೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಕನ್ನಡಿಗರು ಗುಲಾಮರಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಡಿ ನಡೆಯುವ ಚುನಾವಣೆಯಲ್ಲಿ ಮತದಾರರು ಆಯ್ಕೆ ಮಾಡುವುದು ತಮ್ಮ ಸೇವೆ ಮಾಡುವ ಪ್ರತಿನಿಧಿಗಳನ್ನೆ ಹೊರತು, ದೆಹಲಿ ದೊರೆಯ ಸೇವೆ ಮಾಡುವ ಗುಲಾಮರನ್ನಲ್ಲ. ಅಮಿತ್ ಶಾ ಅವರೇ, ಪ್ರಜಾಪ್ರಭುತ್ವ ವ್ಯವಸ್ಥೆಗಷ್ಟೇ ಅಲ್ಲ, ಸ್ವಾಭಿಮಾನಿ ಕನ್ನಡಿಗರಿಗೂ ನೀವು ಅವಮಾನ ಮಾಡಿದ್ದೀರಿ ಎಂದು ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ.
ಗೃಹಸಚಿವ ಅಮಿತ್ ಶಾ ಅವರೇ, ನಮ್ಮ ಬ್ಯಾಂಕುಗಳು, ಬಂದರು, ವಿಮಾನ ನಿಲ್ದಾಣಗಳನ್ನು ಗುಜರಾತಿ ವ್ಯಾಪಾರಿಗಳಿಗೆ ಮಾರಿಬಿಟ್ಟಿರಿ.. ನಮ್ಮ ಹೆಮ್ಮೆಯ ನಂದಿನಿಯನ್ನೂ ಕಬಳಿಸಲು ಹೊಂಚು ಹಾಕುತ್ತಿದ್ದೀರಿ… ಈಗ ಇಡೀ ಕರ್ನಾಟಕವನ್ನೇ ಖರೀದಿಸಲು ಹೊರಟಿದ್ದೀರಾ? ನಿಮ್ಮ ದುರಹಂಕಾರದ ಮಾತುಗಳಿಗೆ ರಾಜ್ಯದ ಸ್ವಾಭಿಮಾನಿ ಕನ್ನಡಿಗರು ಚುನಾವಣೆಯಲ್ಲಿಯೇ ಉತ್ತರ ನೀಡಲಿದ್ದಾರೆ, ಕಾದುನೋಡಿ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಮಾನ್ಯ ಅಮಿತ್ ಶಾ ಅವರೇ ಗೋಲ್ವಾಲ್ಕರ್ ಅವರ ‘ಬಂಚ್ ಆಫ್ ಥಾಟ್ಸ್’ ಓದಿದದರಷ್ಟೇ ಸಾಲದು.. ಬಾಬಾ ಸಾಹೇಬ್ ಅಂಬೇಡ್ಕರರು ಬರೆದಿರುವ ಸಂವಿಧಾನವನ್ನೂ ಪುರುಸೊತ್ತು ಮಾಡಿಕೊಂಡು ಓದಿ. ದೆಹಲಿಯಲ್ಲಿ ಕೂತು ರಾಜ್ಯವನ್ನು ಆಳಲು ಇದು ರಾಜಪ್ರಭುತ್ವ ಅಲ್ಲ, ಇದು ಪ್ರಜಾಪ್ರಭುತ್ವ ತಿಳಿದಿರಲಿ ಎಂಬುದನ್ನು ಸಿದ್ದರಾಮಯ್ಯ ನೆನಪಿಸಿದ್ದಾರೆ.
ಕನ್ನಡದ ಕತ್ತು ಹಿಚುಕಿ ಹಿಂದಿ ಹೇರುವ ನಿಮ್ಮ ಕಟುಕತನ, ನಮ್ಮ ಹಿರೀಕರು ಕಟ್ಟಿ ಬೆಳೆಸಿದ ಸಂಪತ್ತನ್ನು ಕಬಳಿಸುವ ನಿಮ್ಮ ವ್ಯಾಪಾರಿ ಬುದ್ದಿ ಮತ್ತು ಇಲ್ಲಿನ ರಾಜಕೀಯ ನಾಯಕತ್ವವನ್ನೇ ನಾಶ ಮಾಡಿ ನಮ್ಮ ಮೇಲೆ ಸವಾರಿ ಮಾಡುವ ನಿಮ್ಮ ಸರ್ವಾಧಿಕಾರಿ ಧೋರಣೆಯನ್ನು ಕನ್ನಡಿಗರು ಈಗ ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ.
ರಾಜ್ಯ ಬಿಜೆಪಿ ನಾಯಕರು ನಿಮ್ಮ ಅಜ್ಞೆಗೆ ಗೋಣು ಆಡಿಸುವ ಗುಲಾಮರಾಗಿರಬಹುದು.. ಆದರೆ ನೆಲ, ಜಲ, ಭಾಷೆಯ ರಕ್ಷಣೆ ಮತ್ತು ಕನ್ನಡತನದ ಅಸ್ಮಿತೆಯ ಪ್ರಶ್ನೆ ಎದುರಾದಾಗ ನಮ್ಮ ಸ್ವಾಭಿಮಾನಿ ಕನ್ನಡಿಗರು ಜಾತಿ, ಧರ್ಮ, ಪಕ್ಷ, ಪಂಥ ಬಿಟ್ಟು ಬೀದಿಗೆ ಇಳಿದು ರಕ್ಷಿಸಿಕೊಳ್ಳುತ್ತಾರೆ. ಕನ್ನಡಿಗರನ್ನು ಕೆಣಕಿದ್ದೀರಿ, ಅನುಭವಿಸುತ್ತೀರಾ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ಚುನಾವಣೆಯಲ್ಲಿ ಬಿಜೆಪಿಯನ್ನು ಜನ ಸೋಲಿಸಲಿದ್ದಾರೆ ಎಂದು ನೇರವಾಗಿ ಹೇಳಿದ್ದಾರೆ.