ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಲೋಕಪಾಲ ಕಾಯ್ದೆಗಾಗಿ ಉಪವಾಸ ಸತ್ಯಾಗ್ರಹ ಮಾಡಿ ಮನೆಮಾತಾಗಿದ್ದ ಅಣ್ಣಾ ಹಜಾರೆ (Anna Hazare) ಗುಡುಗಿದ್ದಾರೆ. ಅಲ್ಲದೇ, ಕೇಜ್ರಿವಾಲ್ ಅವರಿಗೆ ಅಧಿಕಾರದ ಅಮಲು ಏರುತ್ತಿದೆ ಎಂದು ಅಣ್ಣಾ ಟೀಕಿಸಿದ್ದಾರೆ.
ದಿಲ್ಲಿಯ ವಿವಾದಾತ್ಮಕ ಲಿಕ್ಕರ್ ನೀತಿ ವಿಚಾರವಾಗಿ ಕಿಡಿಕಾರಿರುವ ಅಣ್ಣಾ ಹಜಾರೆ, ಮದ್ಯದಂತೆಯೇ ಅಧಿಕಾರ ಕೂಡ ಅಮಲೇರಿಸುತ್ತದೆ. ನೀವು ಅಧಿಕಾರದ ಮದಕ್ಕೆ ಒಳಗಾಗಿರುವಂತೆ ಕಾಣಿಸುತ್ತಿದೆ ಎಂದು ಕೇಜ್ರಿವಾಲ್ ವಿರುದ್ಧ ಕಿಡಿಕಾರಿದ್ದಾರೆ.
ನೀವು ಮುಖ್ಯಮಂತ್ರಿ ಆದ ಸಂದರ್ಭದಿಂದ ನಿಮಗೆ ಇದೇ ಮೊದಲ ಬಾರಿ ನಾನು ಪತ್ರ ಬರೆಯುತ್ತಿದ್ದೇನೆ. ನಿಮ್ಮ ಸರ್ಕಾರದ ಲಿಕ್ಕರ್ ನೀತಿ ಕುರಿತಾದ ಇತ್ತೀಚಿನ ವರದಿಗಳಿಂದ ನನಗೆ ನೋವಾಗಿದೆ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.
ಇದನ್ನೂ ಓದಿ : ವಿಶ್ವದ ಮೊದಲ ‘ಸಿಹಿ ಭಯೋತ್ಪಾದಕ’ ನಾನು- ಟಾಂಗ್ ಕೊಟ್ಟ ಅರವಿಂದ್ ಕೇಜ್ರಿವಾಲ್
ನಿಮ್ಮ ‘ಸ್ವರಾಜ್’ ಪುಸ್ತಕದಲ್ಲಿ ನೀವು ಲಿಕ್ಕರ್ ನೀತಿಗಳ ಕುರಿತು ಆದರ್ಶಾತ್ಮಕ ಸಂಗತಿಗಳನ್ನು ಬರೆದಿದ್ದಿರಿ. ಅದರಲ್ಲಿ ನೀವು ನನ್ನಿಂದ ಮುನ್ನುಡಿ ಬರೆಸಿದ್ದಿರಿ ಎಂದಿದ್ದಾರೆ. ಮುಖ್ಯಮಂತ್ರಿಯಾದ ಬಳಿಕ ನೀವು ಆದರ್ಶಗಳನ್ನು ಮರೆತಿದ್ದೀರಿ ಎಂದು ಅಣ್ಣಾ ಹಜಾರೆ (Anna Hazare) ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದಿಲ್ಲಿಯಲ್ಲಿ ನಗರದ ಪ್ರತಿ ಮೂಲೆಯಲ್ಲಿಯೂ ಮದ್ಯದಂಗಡಿಗಳನ್ನು ತೆರೆಯಲಾಗುತ್ತಿದೆ. ಜನರು ಅಧಿಕಾರಕ್ಕಾಗಿ ಹಣ ಮತ್ತು ಹಣಕ್ಕಾಗಿ ಅಧಿಕಾರದ ಚಕ್ರದೊಳಗೆ ಸಿಲುಕಿರುವಂತೆ ಕಾಣಿಸುತ್ತಿದೆ. ಮಹತ್ವದ ಚಳವಳಿ ಮೂಲಕ ಹುಟ್ಟಿಕೊಂಡ ಪಕ್ಷಕ್ಕೆ ಇದು ಶೋಭೆ ತರುವುದಿಲ್ಲ ಎಂದಿದ್ದಾರೆ.
2011ರಲ್ಲಿ ಅಣ್ಣಾ ಹಜಾರೆ ನೇತೃತ್ವದಲ್ಲಿ ಭ್ರಷ್ಟಾಚಾರ ವಿರುದ್ಧ ಬೃಹತ್ ಚಳವಳಿ ನಡೆದಿತ್ತು. ಆಮ್ ಆದ್ಮಿ ಪಕ್ಷದ ಉಗಮಕ್ಕೆ ಈ ಹೋರಾಟ ತಳಹದಿ ಒದಗಿಸಿತ್ತು. ಚುನಾವಣಾ ರಾಜಕಾರಣದಿಂದ ದೂರವೇ ಉಳಿಯುವುದಾಗಿ ಹೇಳಿದ್ದ ಅಣ್ಣಾ ಹಜಾರೆ, ಹೊಸದಾಗಿ ಜನ್ಮತಾಳಿದ ಎಎಪಿಗೆ ತಮ್ಮ ಆಶೀರ್ವಾದ ಇದೆ ಎಂದಿದ್ದರು. ಆದರೆ, ಅದರ ಬಳಿಕ ಅವರು ಅನೇಕ ಬಾರಿ ಎಎಪಿಯನ್ನು ಟೀಕಿಸಿದ್ದರು. ಇದಕ್ಕೆ ಕೇಜ್ರಿವಾಲ್ ಅಥವಾ ಅವರ ಪಕ್ಷ ನೇರ ಉತ್ತರ ನೀಡಿರಲಿಲ್ಲ.
ಇದನ್ನೂ ಓದಿ : ನಾಳೆ ಪಂಜಾಬ್ ಸಿಎಂ ಭಗವಂತ್ ಮನ್ ಮದುವೆ – ಅರವಿಂದ್ ಕೇಜ್ರಿವಾಲ್ ಹಾಜರಿ