ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ವಿರುದ್ಧದ ಕಾರ್ಯಾಚರಣೆ ಮುಂದುವರೆಸಿರುವ ಕರ್ನಾಟಕ ಪೊಲೀಸರು ಇಂದು ಮುಂಜಾನೆ 2ನೇ ಹಂತದ ದಾಳಿ ನಡೆಸಿದ್ದು, ಈ ವೇಳೆ ರಾಜ್ಯಾದ್ಯಂತ ಸುಮಾರು 70 ಜನರನ್ನ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯದ 10 ಜಿಲ್ಲೆಗಳಲ್ಲಿ ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಕಚೇರಿಗಳು ಮತ್ತು ಕಾರ್ಯಕರ್ತರ ಮನೆ ಮೇಲೆ ದಾಳಿ ನಡೆಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಹಲವರನ್ನು ಬಂಧಿಸಿದ್ದರು.
ಕಳೆದ ವಾರ ಕಾನೂನು ಮತ್ತು ಸುವ್ಯವಸ್ಥೆಗೆ ಕಾರಣವಾದ 15 ಪಿಎಫ್ಐ ಸದಸ್ಯರ ಬಂಧನದ ವಿರುದ್ಧ ಪ್ರತಿಭಟಿಸಿದ ಸಮಾಜ ವಿರೋಧಿ ನಡವಳಿಕೆಯ ಹಿಂದಿನ ಇತಿಹಾಸ ಹೊಂದಿರುವವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ರಾಜ್ಯ ಪೊಲೀಸರು ಕಳೆದ ವಾರ ಬೆಂಗಳೂರು ಮತ್ತು ಮಂಗಳೂರು ನಗರಗಳು, ದಕ್ಷಿಣ ಕನ್ನಡ ಜಿಲ್ಲೆ, ಶಿವಮೊಗ್ಗ, ಕೊಪ್ಪಳ, ದಾವಣಗೆರೆ, ಉಡುಪಿ, ಮೈಸೂರು ಮತ್ತು ಕಲಬುರಗಿಯಲ್ಲಿ ಪಿಎಫ್ಐ ಸದಸ್ಯರ 18 ಸ್ಥಳಗಳ ಮೇಲೆ ದಾಳಿ ನಡೆಸಿ 15 ಪಿಎಫ್ಐ ಕಾರ್ಯಕರ್ತರನ್ನು ಬಂಧಿಸಿದ್ದರು. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಕಳೆದ ವಾರ ಎನ್ಐಎ ದಾಖಲಿಸಿದ ಐದು ಪ್ರಕರಣಗಳಲ್ಲಿ ಪಿಎಫ್ಐ ವಿರುದ್ಧ ದೇಶವ್ಯಾಪಿ ದಾಳಿಯಲ್ಲಿ ಕರ್ನಾಟಕದಿಂದ ಏಳು ಮಂದಿಯನ್ನು ಬಂಧಿಸಿತ್ತು.
ಪಿಎಫ್ಐ, ಎಸ್ಡಿಪಿಐ ಮೇಲೆ ಉಗ್ರವಾದ, ಭಯೋತ್ಪಾದಕ ಚಟುವಟಿಕೆಗಳಿಗೆ ಧನಸಹಾಯ, ಶಸ್ತ್ರಾಸ್ತ್ರ ತರಬೇತಿ ನೀಡಲು ಶಿಬಿರಗಳ ಆಯೋಜನೆ, ಉಗ್ರವಾದ ಚಟುವಟಿಕೆಗಳಿಗೆ ಪ್ರೆರೇಪಣೆ, ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿಕೊಳ್ಳುವುದು ಸೇರಿದಂತೆ ಹಲವಾರ ಆರೋಪಗಳನ್ನು ಮಾಡಲಾಗಿದೆ.
ಎಷ್ಟು ಕಾರ್ಯಕರ್ತರು ಪೊಲೀಸ್ ವಶಕ್ಕೆ..!
ಬಾಗಲಕೋಟೆಯಲ್ಲಿ 7 ಜನ, ವಿಜಯಪುರದಲ್ಲಿ ಒಬ್ಬರು, ಬೆಳಗಾವಿಯಲ್ಲಿ 7 ಜನ, ಬೀದರ್ನಲ್ಲಿ ಇಬ್ಬರು, ಚಾಮರಾಜನಗರದಲ್ಲಿ ಇಬ್ಬರು, ಯಾದಗಿರಿಯಲ್ಲಿ ಇಬ್ಬರು, ರಾತಯಚೂರಿನಲ್ಲಿ ಇಬ್ಬರು, ಕೊಪ್ಪಳದಲ್ಲಿ ಇಬ್ಬರು ಹಾಗೂ ಕೋಲಾರದಲ್ಲಿ 7 ಜನ ಸೇರಿದಂತೆ ರಾಜ್ಯಾದ್ಯಂತ 70 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.