ರೋಹಿತ್ ಚಕ್ರತೀರ್ಥ ಮರು ಪಠ್ಯಪರಿಷ್ಕರಣ ಸಮಿತಿಯ ಅವಾಂತರಗಳು, ಎಡವಟ್ಟುಗಳು ಅಧಿಕೃತವಾಗಿ ಪುಸ್ತಕ ಬಿಡುಗಡೆಯಾದ ಮೇಲೆ ಒಂದೊಂದಾಗಿ ಹೊರಬರುತ್ತಿವೆ.
ಒಕ್ಕಲಿಗ,ಲಿಂಗಾಯತ, ಜೈನ ಹಾಗೂ ಬೌದ್ಧ ಧರ್ಮೀಯರ ಆಕ್ರೋಶಕ್ಕೆ ಗುರಿಯಾಗಿದ್ದ ರೋಹಿತ್ ಚಕ್ರತೀರ್ಥ ಅವರು ಇದೀಗ ದಲಿತರ ಆಕ್ರೋಶಕ್ಕೂ ಗುರಿಯಾಗಿದ್ದಾರೆ.
ಅಂಬೇಡ್ಕರ್ ಅವರ ಬಗ್ಗೆ ಈಗಾಗಲೇ ಜಲತಂತ್ರಜ್ಞ, ರಾಕೆಟ್ ತಂತ್ರಜ್ಞ ಎಂದು ರೋಹಿತ್ ಅವರು ಮೂದಲಿಸಿದ್ದರು. ಇದೀಗ 9 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದ ರಾಜ್ಯಶಾಸ್ತ್ರ ವಿಭಾಗದಲ್ಲಿ ನಮ್ಮ ಸಂವಿಧಾನ ಎಂಬ ಅಧ್ಯಾಯದಲ್ಲಿ ಹಳೆ ಪಠ್ಯಪುಸ್ತಕದಲ್ಲಿ ಇದ್ದ ‘ಸಂವಿಧಾನ ಶಿಲ್ಪಿ’ ಅಂಬೇಡ್ಕರ್ ಎಂಬ ವಾಕ್ಯವನ್ನು ತೆಗೆದು ಹಾಕಿ ಅಂಬೇಡ್ಕರ್ ಅವರಿಗೆ ಮತ್ತೊಮ್ಮೆ ಅವಮಾನ ಮಾಡಿದ್ದಾರೆ.
ರೋಹಿತ್ ಚಕ್ರತೀರ್ಥ ನೇತೃತ್ವದ ಮರು ಪಠ್ಯ ಪರಿಷ್ಕರಣ ಸಮಿತಿ, ಅಂಬೇಡ್ಕರ್ ಅವರಿಗಿದ್ದ ಸಂವಿಧಾನ ಶಿಲ್ಪಿ ಎಂಬ ಬಿರುದನ್ನು ತೆಗೆದುಹಾಕಿದೆ. ಆ ಮೂಲಕ ಅಂಬೇಡ್ಕರ್ ‘ಸಂವಿಧಾನ ಶಿಲ್ಪಿ’ ಅಲ್ಲ ಎಂದು ಹೇಳಿದಂತಿದೆ.
ಆರ್ಎಸ್ಎಸ್ ಸಂವಿಧಾನ ತೆಗೆದುಹಾಕಲು ಪ್ರಯತ್ನಿಸುತ್ತಿದೆ ಎಂಬ ಕಾಂಗ್ರೆಸ್ ಆರೋಪದ ನಡುವೆ ಆರ್ಎಸ್ಎಸ್ ಚಿಂತನೆಯ ರೋಹಿತ್ ಚಕ್ರತೀರ್ಥ ಸಮಿತಿಯ ಈ ಕೆಲಸ ಇಂಬು ನೀಡುವಂತಿದೆ.
ಶುಕ್ರವಾರ ರಾತ್ರಿ ಸರ್ಕಾರ ರೋಹಿತ್ ಚಕ್ರತೀರ್ಥ ಸಮಿತಿಯನ್ನು ಬರ್ಖಾಸ್ತುಗೊಳಿಸಿದೆ. ಆದರೆ, ಸಮಿತಿ ತನ್ನ ಕೆಲಸವನ್ನು ಮುಗಿಸಿ ಶಿಫಾರಸ್ಸು ಮಾಡಿದ ಪಠ್ಯವನ್ನು ಮುದ್ರಣಗೊಳಸಿದ ಮೇಲೆ ಆ ಸಮಿತಿ ಇದ್ದರೆಷ್ಟು, ಬಿಟ್ಟರೆಷ್ಟು ಎನ್ನುವ ಪ್ರಶ್ನೆಯನ್ನು ಜನ ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ. ಈ ಸಮಿತಿ ಶಿಫಾರಸ್ಸು ಮಾಡಿದ ಪಠ್ಯವನ್ನು ಬಿಟ್ಟು ಹಳೆಯ ಪಠ್ಯಪುಸ್ತವನ್ನೇ ಮುಂದುವರೆಸುವಂತೆ ಹೋರಾಟಗಾರರು ಹಾಗೂ ಚಿಂತಕರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.