6ರಿಂದ 8ನೇ ತರಗತಿಗಳಿಗೆ ರಾಜ್ಯ ಸರ್ಕಾರ 15 ಸಾವಿರ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಇವತ್ತಿನಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭ ಆಗಿದೆ. ಏಪ್ರಿಲ್ 22 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ. ಮೇ ತಿಂಗಳ 21 ಮತ್ತು 22ರಂದು ಎರಡು ದಿನ ಸಿಇಟಿ ಪರೀಕ್ಷೆ ನಡೆಯಲಿದೆ.
15 ಸಾವಿರ ಶಿಕ್ಷಕರ ಹುದ್ದೆಗಳ ಪೈಕಿ ಕಲ್ಯಾಣ ಕರ್ನಾಟಕದಲ್ಲಿ 5 ಸಾವಿರ ಹುದ್ದೆಗಳನ್ನೂ ಉಳಿದ ಶೈಕ್ಷಣಿಕ 28 ಜಿಲ್ಲೆಗಳಲ್ಲಿ 10 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಇನ್ನು ಒಟ್ಟು 15 ಸಾವಿರ ಶಿಕ್ಷಕರ ಪೈಕಿ ಅಂಗ್ಲಭಾಷೆ – 1,807, ಗಣಿತ, ವಿಜ್ಞಾನ – 6,500, ಸಮಾಜ ವಿಜ್ಞಾನ -4,693, ಜೀವ ವಿಜ್ಞಾನ – 2,000 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಆದರೆ ಈ 15 ಸಾವಿರ ಹುದ್ದೆಗಳ ಭರ್ತಿಯಲ್ಲಿ ಕನ್ನಡ ಶಿಕ್ಷಕರ ಭರ್ತಿಗೆ ಸರ್ಕಾರ ಆದೇಶ ಹೊರಡಿಸಿಲ್ಲ. ಈ ಬಗ್ಗೆ ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರಿಗೆ ಪತ್ರ ಬರೆದಿದ್ದಾರೆ.
`ಆಂಗ್ಲಭಾಷೆ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಜೀವ ವಿಜ್ಞಾನ ವಿಷಯಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಇಲ್ಲಿ ಕನ್ನಡ ವಿಷಯವನ್ನು ಸೇರಿಸಿಲ್ಲ. ಹಿಂದೆಯೂ ಹೀಗೆ ಆಗಿತ್ತೆಂದೂ ಸಮಾಜ ವಿಜ್ಞಾನದ ಅಧ್ಯಾಪಕರಿಗೇ ಕನ್ನಡ ಬೋಧನೆ ಮಾಡಲು ಹೇಳಲಾಗಿತ್ತೆಂದೂ ತಿಳಿದುಬಂದಿದ್ದು, ಇದು ನಿಜವಾಗಿದ್ದರೆ ಅನುಚಿತ ಮತ್ತು ಅನ್ಯಾಯ. ಕನ್ನಡ ಅಧ್ಯಾಪಕರಿಗೆ ಅವಕಾಶ ಕಲ್ಪಿಸದಿರುವುದು ಅಚ್ಚರಿಯ ಸಂಗತಿಯಾಗಿದೆ’ ಎಂದು ಪತ್ರದಲ್ಲಿ ತಿಳಿಸಿರುವ ಬರಗೂರು ಅವರು, `ಸರ್ಕಾರ ಮತ್ತು ಶಿಕ್ಷಣ ಇಲಾಖೆ ಕೂಡಲೇ ಕನ್ನಡಕ್ಕಾದ ಅನ್ಯಾಯವನ್ನು ಸರಿಪಡಿಸಬೇಕು, ಕನ್ನಡ ಅಧ್ಯಾಪಕರ ಹುದ್ದೆಗಳಿಗೆ ಪ್ರತ್ಯೇಕವಾಗಿ ಅರ್ಜಿಗಳನ್ನು ಆಹ್ವಾನಿಸಬೇಕು. ಕನ್ನಡ ವಿಷಯವನ್ನು ಕನ್ನಡ ಐಚ್ಛಿಕ ಪದವೀಧರರಾದ ಅರ್ಹ ಅಭ್ಯರ್ಥಿಗಳು ಬೋಧಿಸುವಂತಾಗಬೇಕು’ ಎಂದು ಆಗ್ರಹಿಸಿದ್ದಾರೆ.