ಬಿಜೆಪಿ ಕಾರ್ಯಕರ್ತ ಮತ್ತು ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರನ್ನು ಬಂಧಿಸಬೇಕು ಮತ್ತು ಸಂಪುಟದಿAದ ವಜಾಗೊಳಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ನಿಯೋಗ ರಾಜ್ಯಪಾಲರನ್ನು ಭೇಟಿ ಆಗಿ ಆಗ್ರಹಿಸಿತು.
ಆ ಬಳಿಕ ಮಾತಾಡಿದ ಸಿದ್ದರಾಮಯ್ಯ:
ಬೆಳಗಾವಿ ಗ್ರಾಮೀಣ ಕ್ಷೇತ್ರದ ಗುತ್ತಿಗೆದಾರ, ಬಿಜೆಪಿ ಕಾರ್ಯಕರ್ತ ಸಂತೋಷ್ ಕೆ ಪಾಟೀಲ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಬಗ್ಗೆ ನಿನ್ನೆಯಿಂದ ಎಲ್ಲಾ ಮಾಧ್ಯಮಗಳಲ್ಲಿ ವರದಿಯಾಗಿದೆ. ಗ್ರಾಮೀಣಾಭಿವೃದ್ಧಿ ಸಚಿವರಾದ ಈಶ್ವರಪ್ಪ ಅವರು ಸಂತೋಷ್ ಪಾಟೀಲ್ ಗೆ ಹಳ್ಳಿ ರಸ್ತೆಗಳನ್ನು ನಿರ್ಮಾಣ ಮಾಡಲು ಸೂಚಿಸಿದ್ದಾರೆ. ಇದು ಒಟ್ಟು ರೂ. 4 ಕೋಟಿ ವೆಚ್ಚದ 108 ಕಾಮಗಾರಿಗಳು. ಇವೆಲ್ಲವನ್ನು ಖಾಸಗಿಯವರ ಬಳಿ ಸಾಲ ಮಾಡಿ, ಹೆಂಡತಿ ಒಡವೆಗಳನ್ನು ಅಡವಿಟ್ಟು ಸಾಲ ತಂದು ಗುಣಮಟ್ಟದ ಕೆಲಸ ಮಾಡಿ ಮುಗಿಸಿದ್ದಾನೆ. ಒಬ್ಬ ಮಂತ್ರಿಯಾಗಿ ತಾವೇ ಹೇಳಿ ಮಾಡಿಸಿದ ಕಾಮಗಾರಿಗಳ ವರ್ಕ್ ಆರ್ಡರ್ ಮತ್ತು ಬಿಲ್ ಪಾವತಿ ಮಾಡಲು 40% ಕಮಿಷನ್ ಕೇಳಿದ್ದಾರೆ. ಆತನಿಗೆ ಬಿಲ್ ಹಣ ಪಡೆಯಲು ಬೆಂಗಳೂರಿಗೆ ತಿರುಗಿ ತಿರುಗಿ ಸಾಕಾಗಿದೆ. ಹಲವಾರು ಬಾರಿ ಈಶ್ವರಪ್ಪ ಅವರನ್ನು ಭೇಟಿಮಾಡಿ ಮನವಿ ಮಾಡಿದ್ದಾನೆ. ಇದರ ಜೊತೆಗೆ ಪ್ರಧಾನಿಗಳಿಗೆ ಮತ್ತು ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವರಾದ ಗಿರಿರಾಜ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾನೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದಾನೆ. ಇಷ್ಟೆಲ್ಲ ಮಾಡಿದ್ರೂ ಕೇಳಿದಷ್ಟು ಕಮಿಷನ್ ಕೊಟ್ಟಿಲ್ಲ ಎಂದು ವರ್ಕ್ ಆರ್ಡರ್ ಕೊಟ್ಟಿಲ್ಲ, ಹಣ ಬಿಡುಗಡೆ ಮಾಡಿಲ್ಲ. ತುಂಬ ಸಲ ಈಶ್ವರಪ್ಪ ಅವರನ್ನು ಭೇಟಿಮಾಡಿ ಮಾನವಿ ಮಾಡಿದ್ರೂ, ಈಗ ನನಗೆ ಸಂತೋಷ್ ಪಾಟೀಲ್ ಯಾರು ಅಂತಲೇ ಗೊತ್ತಿಲ್ಲ ಎಂದು ಈಶ್ವರಪ್ಪ ಹೇಳುತ್ತಿದ್ದಾರೆ.
ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣ ಅವರು ಈ ಸರ್ಕಾರ 40% ಕಮಿಷನ್ ಸರ್ಕಾರ. ಕಮಿಷನ್ ಗಾಗಿ ಕಿರುಕುಳ ನೀಡುತ್ತಿದೆ ಎಂದು ಪ್ರಧಾನಿಗಳಿಗೆ ಪತ್ರ ಬರೆದಿದ್ದಾರೆ. ಈ ಸರ್ಕಾರದ ಲೋಕೋಪಯೋಗಿ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ನೀರಾವರಿ ಇಲಾಖೆ, ನಗರಾಭಿವೃದ್ಧಿ ಇಲಾಖೆ ಹೀಗೆ ಯಾವುದೇ ಇಲಾಖೆಗಳಲ್ಲಿ 40% ಕಮಿಷನ್ ಕೊಡದೆ ಯಾವ ಕೆಲಸಗಳು ಆಗಲ್ಲ. ಇದೇ ಕಾರಣಕ್ಕಾಗಿ ನಾನು ಸರ್ಕಾರದ ಭ್ರಷ್ಟಾಚಾರ ಪ್ರಸ್ತಾಪ ಮಾಡಲು ಸದನದಲ್ಲಿ ನಿಲುವಳಿ ಸೂಚನೆ ಮಂಡಿಸಲು ಮನವಿ ನೀಡಿದ್ದೆ, ಆದರೆ ಸಭಾಧ್ಯಕ್ಷರು ನನಗೆ ಪ್ರಾಸ್ತಾವಿಕವಾಗಿ ಮಾತನಾಡಲು ಅವಕಾಶವನ್ನೇ ನೀಡದೆ ಸ್ವಯಂ ಪ್ರೇರಿತರಾಗಿ ನನ್ನ ಮನವಿ ತಿರಸ್ಕರಿಸಿದರು.
7/6/2021 ರಲ್ಲಿ ಕೆಂಪಣ್ಣನವರು ಪ್ರಧಾನಿಗಳಿಗೆ ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಪತ್ರ ಬರೆದಿದ್ದರೂ ಪ್ರಧಾನಿಗಳಾಗಲೀ, ಮುಖ್ಯಮಂತ್ರಿಗಳಾಗಲೀ ಯಾವುದೇ ಕ್ರಮ ಕೈಗೊಂಡಿಲ್ಲ. ತನಿಖೆ ಮಾಡಿಸಿಲ್ಲ. ಈಶ್ವರಪ್ಪ ಅವರು ಸಂತೋಷ್ ಪಾಟೀಲ್ ಅವರ ಬಳಿ 40% ಕಮಿಷನ್ ಕೇಳಿದ್ದಾರೆ. ಅಂದರೆ 4 ಕೋಟಿ ರೂಪಾಯಿ ಕಾಮಗಾರಿಯಲ್ಲಿ 1 ಕೋಟಿ 60 ಲಕ್ಷ ರೂಪಾಯಿ ಕಮಿಷನ್ ಕೊಡಬೇಕು. ಪಾಪ ಒಬ್ಬ ಸಣ್ಣ ಗುತ್ತಿಗೆದಾರ ಇಷ್ಟು ಹಣ ಕೊಡೋಕೆ ಸಾಧ್ಯವ? ಇಂಥಾ ಭ್ರಷ್ಟ ಸರ್ಕಾರ ಕರ್ನಾಟಕದ ಇತಿಹಾಸದಲ್ಲಿ ಯಾವಾಗಲೂ ಬಂದಿಲ್ಲ.
ಸಂತೋಷ್ ಪಾಟೀಲ್ ಅವರು ಉಡುಪಿಗೆ ಹೋಗಿ ಅಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಪ್ರಯತ್ನ ಮಾಡಿದ್ದಾರೆ. ಇದು ಸಾಧ್ಯವಾಗದೆ ಇದ್ದಾಗ ನನ್ನ ಸಾವಿಗೆ ಈಶ್ವರಪ್ಪ ಅವರೇ ನೇರ ಕಾರಣ ಎಂದು ವಾಟ್ಸ್ ಆಪ್ ಮೇಸೇಜ್ ಅನ್ನು ತನ್ನ ಸ್ನೇಹಿತರಿಗೆ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ಡೆತ್ ನೋಟ್ ಅಂತಲೇ ಪರಿಗಣಿಸಬೇಕು. ಈಶ್ವರಪ್ಪ ಅವರನ್ನು ಈ ಕೂಡಲೇ ಬಂಧಿಸಬೇಕು, ಮೃತ ಸಂತೋಷ್ ಪಾಟೀಲ್ ಅವರ ಸಹೋದರ ನೀಡಿರುವ ದೂರಿನಲ್ಲಿ ತನ್ನ ಸಹೋದರನ ಸಾವಿಗೆ ಈಶ್ವರಪ್ಪ ಅವರೇ ನೇರ ಕಾರಣ ಎಂದಿದೆ, ಇದು ಭ್ರಷ್ಟಾಚಾರ ತಡೆ ಕಾಯ್ದೆಯಡಿಯ ಅಪರಾಧವೂ ಹೌದು. ಹಾಗಾಗಿ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13 ರಡಿ ಭ್ರಷ್ಟಾಚಾರ ಪ್ರಕರಣವನ್ನು ದಾಖಲಿಸಬೇಕು, ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಈಶ್ವರಪ್ಪ ಅವರಿಗೆ ಹತ್ತು ವರ್ಷ ಕಾರಾಗ್ರಹ ಶಿಕ್ಷೆ ವಿಧಿಸಲು ಅವಕಾಶ ಇದೆ, ಜೊತೆಗೆ ಇದೊಂದು ಜಾಮೀನು ರಹಿತ ಅಪರಾಧವಾಗಿದೆ. ಕಾನೂನು ಎಲ್ಲರಿಗೂ ಸಮಾನವಾಗಿದೆ.
ನಾವು ಒತ್ತಾಯ ಮಾಡುವುದೇನೆಂದರೆ,
1) ಈಶ್ವರಪ್ಪ ಅವರ ಮೇಲೆ ಸೆಕ್ಷನ್ 306 ರಡಿ ಕೇಸ್ ದಾಖಲಿಸಬೇಕು.
2) ಇದು ಗಂಭೀರ ಅಪರಾಧವಾಗಿರುವುದರಿಂದ ಕೂಡಲೇ ಅವರ ಬಂಧನವಾಗಬೇಕು.
3) ಈ ಕೂಡಲೇ ಈಶ್ವರಪ್ಪ ಅವರನ್ನು ಸಚಿವ ಸಂಪುಟದಿAದ ವಜಾ ಮಾಡಬೇಕು.
ಇವೆಲ್ಲವನ್ನು ರಾಜ್ಯಪಾಲರು ಮಾಡುತ್ತಾರೆ ಎಂಬ ವಿಶ್ವಾಸ ನಮಗಿದೆ, ತಾವು ಮುಖ್ಯಮಂತ್ರಿಗಳ ಬಳಿ ಮಾತನಾಡುತ್ತೇನೆ ಎಂದು ರಾಜ್ಯಪಾಲರು ಭರವಸೆ ನೀಡಿದ್ದಾರೆ.
ಕಾನೂನಿಗಿಂತ ಈಶ್ವರಪ್ಪ ದೊಡ್ಡವರ? ಕಾನೂನಿನ ಪ್ರಕಾರ ಕೈಗೊಳ್ಳಬೇಕಾದ ಕ್ರಮವನ್ನು ಕೈಗೊಳ್ಳಲೇಬೇಕು. ಅದು ಯಾರಾದರೂ ಒಂದೆ.
ಈ ಸರ್ಕಾರಕ್ಕೆ ಮಾನ ಮರ್ಯಾದಿ ಇದ್ದರೆ, ರಾಜ್ಯದ ಜನರ ಪ್ರಾಣ ಕಾಪಾಡಬೇಕು ಎಂಬ ಜವಾಬ್ದಾರಿ ಇದ್ದರೆ ಕೂಡಲೇ ಈಶ್ವರಪ್ಪ ಅವರನ್ನು ಬಂಧಿಸಬೇಕು ಮತ್ತು ಸಂಪುಟದಿAದ ವಜಾ ಮಾಡಬೇಕು ಎಂದು ಆಗ್ರಹಿಸಿದರು.