ಹೈದರ್ಬಾದ್. ತೆಲಂಗಾಣ ರಾಜಧಾನಿ. ಹೈದರ್ಬಾದ್ ಲೋಕಸಭಾ ಕ್ಷೇತ್ರದ ಚುನಾವಣೆ ಈ ಬಾರಿ ಎಂದಿಗಿಂತಲೂ ರೋಚಕವಾಗಿದೆ.
1984ರ ಲೋಕಸಭಾ ಚುನಾವಣೆ ಬಳಿಕ ಹೈದರ್ಬಾದ್ ಲೋಕಸಭಾ ಕ್ಷೇತ್ರ ಓವೈಸಿ ಕುಟುಂಬದ ಬಿಗಿ ಹಿಡಿತದಲ್ಲೇ ಇದೆ.
ಮುಸ್ಲಿಂ ಬಾಹುಳ್ಯದ ಈ ಲೋಕಸಭಾ ಕ್ಷೇತ್ರದಲ್ಲಿ 1984ರಲ್ಲಿ ಅಸಾದುದ್ದೀನ್ ಓವೈಸಿ ತಂದೆ ಸುಲ್ತಾನ್ ಸಲಾಹುದ್ದೀನ್ ಓವೈಸಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ಇದಾದ ಬಳಿಕ ಎಐಎಂಐಎಂ ಪಕ್ಷದಿಂದ ಸ್ಪರ್ಧಿಸಿ 1999ರವರೆಗೆ ಐದು ಲೋಕಸಭಾ ಚುನಾವಣೆಗಳನ್ನು ಗೆದ್ದರು.
ನಂತರ ಸುಲ್ತಾನ್ ಸಲಾಹುದ್ದೀನ್ ಓವೈಸಿ ಮಗ ಅಸಾದುದ್ದೀನ್ ಓವೈಸಿ ಈ ಲೋಕಸಭಾ ಕ್ಷೇತ್ರದಿಂದ 2004, 2009, 2014, 2019ರ ಚುನಾವಣೆಯಲ್ಲಿ ನಿರಂತರವಾಗಿ ಆಯ್ಕೆಯಾಗಿದ್ದಾರೆ.
ಹೈದರ್ಬಾದ್ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ವಿಧಾನಸಭಾ ಕ್ಷೇತ್ರಗಳು 7. ಇವುಗಳಲ್ಲಿ 6 ವಿಧಾನಸಭಾ ಕ್ಷೇತ್ರಗಳಲ್ಲಿ ಎಐಎಂಐಎಂ ಪಕ್ಷದ ಶಾಸಕರೇ ಆಯ್ಕೆಯಾಗಿದ್ದಾರೆ. ಗೋಶಾಮಹಲ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಆಯ್ಕೆಯಾಗಿದ್ದಾರೆ.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅಸಾದುದ್ದೀನ್ ಓವೈಸಿ ವಿರುದ್ಧ ತೆಲಂಗಾಣದಲ್ಲಿ ಇದೇ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಮಹಿಳಾ ಅಭ್ಯರ್ಥಿಯನ್ನು ಅಂತಿಮಗೊಳಿಸಿದೆ. ಬಿಜೆಪಿ ಕೂಡಾ ಮಹಿಳಾ ಅಭ್ಯರ್ಥಿಗೆ ಟಿಕೆಟ್ ನೀಡಿದೆ.
ಓವೈಸಿ ವಿರುದ್ಧ ಸುಪ್ರೀಂಕೋರ್ಟ್ ವಕೀಲೆಯೂ ಆಗಿರುವ ತೆಲಂಗಾಣ ವಕ್ಫ್ಬೋರ್ಡ್ನ ಸಿಇಒ ಆಗಿರುವ ಸೈಯದ್ ಖಾಜಾ ಮೊಯಿನುದ್ದೀನ್ ಅವರ ಪತ್ನಿ ಶಹನಾಜ್ ತಬ್ಸಸಮ್ ಅವರಿಗೆ ಟಿಕೆಟ್ ಅಂತಿಮಗೊಳಿಸಿದೆ. ಹೈದರ್ಬಾದ್ನಲ್ಲಿರುವ ವಿರಿಂಚಿ ಆಸ್ಪತ್ರೆಯ ಮಾಲಕಿ ಮಾಧವಿ ಲತಾ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.
2022ರಲ್ಲಿ ನಡೆದಿದ್ದ ಬೃಹತ್ ಹೈದರ್ಬಾದ್ ಪಾಲಿಕೆ ಚುನಾವಣೆಯಲ್ಲಿ ಬಿಆರ್ಎಸ್ 43, ಬಿಜೆಪಿ 44 ಮತ್ತು ಓವೈಸಿ ಪಕ್ಷ 44 ವಾರ್ಡ್ಗಳನ್ನು ಗೆದ್ದುಕೊಂಡಿತ್ತು.
2016ರ ಚುನಾವಣೆಯಲ್ಲಿ ಕೇವಲ 4 ವಾರ್ಡ್ಗಳನ್ನು ಗೆದ್ದಿದ್ದ ಬಿಜೆಪಿ 2022ರಲ್ಲಿ 44 ವಾರ್ಡ್ಗಳನ್ನು ಗೆದ್ದಿದ್ದು ದೊಡ್ಡ ಸಾಧನೆಯೇ. ಹೈದರ್ಬಾದ್ ಹೆಸರನ್ನು ಭಾಗ್ಯನಗರ ಎಂದು ಬದಲಾಯಿಸುವ ಘೋಷಣೆಯನ್ನೂ ಬಿಜೆಪಿ ಮಾಡಿತ್ತು.
2023ರ ಡಿಸೆಂಬರ್ನಲ್ಲಿ ನಡೆದ ತೆಲಂಗಾಣ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ನೋಡಿದರೆ ಹೈದರ್ಬಾದ್ ಲೋಕಸಭಾ ಕ್ಷೇತ್ರದಲ್ಲಿ ಎಐಎಂಐಎಂ ಅಭ್ಯರ್ಥಿಗಳು ಪಡೆದಿದ್ದ ಒಟ್ಟು ಮತ 4 ಲಕ್ಷದ 23 ಸಾವಿರ ಅಂದರೆ ಶೇಕಡಾ 42.7ರಷ್ಟು. ಬಿಜೆಪಿ ಅಭ್ಯರ್ಥಿಗಳು ಪಡೆದಿದ್ದ ಒಟ್ಟು ಮತ 2 ಲಕ್ಷದ 21 ಸಾವಿರ ಅಂದರೆ ಶೇಕಡಾ 22.4ರಷ್ಟು ಮತ್ತು ಬಿಆರ್ಎಸ್ ಅಭ್ಯರ್ಥಿಗಳು ಪಡೆದಿದ್ದ ಒಟ್ಟು ಮತಗಳು 1 ಲಕ್ಷದ 71 ಸಾವಿರ ಅಂದರೆ ಶೇಕಡಾ 17.3ರಷ್ಟು ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಪಡೆದಿದ್ದ ಒಟ್ಟು ಮತ 1 ಲಕ್ಷದ 1 ಸಾವಿರದಷ್ಟು ಅಂದರೆ ಶೇಕಡಾ 10.2ರಷ್ಟು.
ತೆಲಂಗಾಣದಲ್ಲಿ ಬಿಆರ್ಎಸ್ ಮತ್ತು ಎಐಎಂಐಎಂ ಹೊಂದಾಣಿಕೆಯಲ್ಲಿರುವ ಕಾರಣ ಮತ್ತು ಹೈದರ್ಬಾದ್ನಲ್ಲಿ ಬಿಆರ್ಎಸ್ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕಾರಣ ಸದ್ಯದ ಸನ್ನಿವೇಶದಲ್ಲಿ ಅಸಾದುದ್ದೀನ್ ಓವೈಸಿ ಸೋಲು ಕಷ್ಟವೇ ಸರಿ.
ADVERTISEMENT
ADVERTISEMENT