ಅಲ್ ಖೈದಾ ( Al Qaeda ) ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಶಂಕೆಯಲ್ಲಿ ಇಬ್ಬರು ಶಂಕಿತ ಉಗ್ರರನ್ನು ಅಸ್ಸಾಂನ ಗೋಲ್ಪಾರಾ ಪೊಲೀಸರು ಬಂಧಿಸಿದ್ದಾರೆ.
ಅಲ್ ಖೈದಾ ( Al Qaeda ) ಹಾಗೂ ಅನ್ಸಾರುಲ್ಲಾ ಬಾಂಗ್ಲಾ ಉಗ್ರ ಸಂಘಟನೆಗಳೊಂದಿಗೆ ಈ ಶಂಕಿತರು ನಂಟು ಹೊಂದಿದ್ದರು ಎಂಬ ಅನುಮಾನ ವ್ಯಕ್ತವಾಗಿದೆ.
ಟಿಂಕುನಿಯಾ ಶಾಂತಿಪುರ ಮಸೀದಿಯ ಇಮಾಮ್ ಅಬ್ದುಸ್ ಸುಭಾನ್, ತಿಲಪರ ನಾತುನ್ ಮಸೀದಿಯ ಇಮಾಮ್ ಜಲಾಲುದ್ದೀನ್ ಶೇಖ್ ಬಂಧಿತ ಆರೋಪಿಗಳಾಗಿದ್ದು, ಹಲವು ಗಂಟೆಗಳ ವಿಚಾರಣೆ ಬಳಿಕ ಅವರನ್ನು ವಶಕ್ಕೆ ಪಡೆಯಲಾಗಿದೆ.
ಗೋಲ್ಪಾರಾ ಜಿಲ್ಲೆಯ ಎಸ್ ಪಿ ವಿವಿ ರಾಕೇಶ್ ರೆಡ್ಡಿ ಈ ಬಗ್ಗೆ ಮಾತನಾಡಿದ್ದು, ಜಿಹಾದಿ ಶಕ್ತಿಗಳೊಂದಿಗೆ ಸಂಪರ್ಕ ಹೊಂದಿ ಬಂಧನಕ್ಕೊಳಗಾಗಿದ್ದ ಅಬ್ಬಾಸ್ ಅಲಿ ಎಂಬಾತನಿಂದ ವಿಚಾರಣೆ ವೇಳೆಯಲ್ಲಿ ಈ ಇಬ್ಬರ ಬಗ್ಗೆ ಜುಲೈ ನಲ್ಲಿ ಮಾಹಿತಿ ಸಿಕ್ಕಿತ್ತು. ವಿಚಾರಣೆ ವೇಳೆ ಇವರು ಅಸ್ಸಾಂ ನಲ್ಲಿ ಅಸ್ಸಾಂನಲ್ಲಿ AQIS/ABT ಯ ಬಾರ್ಪೇಟಾ ಮತ್ತು ಮೊರಿಗಾಂವ್ ಮಾಡ್ಯೂಲ್ಗಳೊಂದಿಗೆ ನೇರವಾಗಿ ಸಂಪರ್ಕ ಹೊಂದಿದ್ದು ಬಯಲಾಗಿತ್ತು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ :ಅಲ್ ಖೈದಾ ಮುಖ್ಯಸ್ಥನನ್ನು ಹೊಡೆದುರುಳಿಸಿದ ಅಮೇರಿಕಾ ಸೇನೆ
ಆರೋಪಿಗಳ ಮನೆಗಳ ಮೇಲೆ ನಡೆದ ಶೋಧಕಾರ್ಯಾಚರಣೆಯಲ್ಲಿ ಅಲ್ ಖೈದಾ, ಜಿಹಾದಿ ಶಕ್ತಿಗಳಿಗೆ ಸಂಬಂಧಿಸಿದ ಪೋಸ್ಟರ್, ಪುಸ್ತಕ ಸೇರಿದಂತೆ ದೋಷಾರೋಪಣೆಗೆ ಪೂರಕವಾದ ವಸ್ತುಗಳು ಪತ್ತೆಯಾಗಿದ್ದು, ಈ ವಸ್ತುಗಳು, ಮೊಬೈಲ್ ಫೋನ್, ಸಿಮ್ ಕಾರ್ಡ್, ಐಡಿ ಕಾರ್ಡ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಂಗ್ಲಾದೇಶದಿಂದ ಬರುತ್ತಿದ್ದ ಜಿಹಾದಿ ಭಯೋತ್ಪಾದಕರಿಗೆ ಗೋಲ್ಪಾರಾದಲ್ಲಿ ಉಳಿದುಕೊಳ್ಳಲು ಈ ಆರೋಪಿಗಳು ಎಲ್ಲಾ ರೀತಿಯ ನೆರವು ನೀಡುತ್ತಿದ್ದರು ಎಂಬ ಆರೋಪವೂ ಇದೆ.