ಅಯೋಧ್ಯೆ : ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಇಂದು(ಜ.22, ಸೋಮವಾರ) ಮಧ್ಯಾಹ್ನ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಪ್ರತಿಷ್ಠಾಪನೆಯ ಮುಖ್ಯ ಯಜಮಾನರಾಗಿದ್ದು, ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿಕೊಡಲಿದ್ದಾರೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೇಳಿದೆ. ಈ ಕಾರ್ಯಕ್ರಮಕ್ಕೆ ಬೇಕಾದ ಎಲ್ಲ ಸಿದ್ಧತೆಯನ್ನು ಪೂರ್ಣಗೊಳಿಸಲಾಗಿದ್ದು, ಆಹ್ವಾನಿತರ ಗಣ್ಯ ಮಾನ್ಯರು ಭಾನುವಾರದಿಂದಲೇ ಅಯೋಧ್ಯೆಗೆ ಬಂದಿಳಿಯುತ್ತಿದ್ದಾರೆ.
ಸೋಮವಾರ ಮಧ್ಯಾಹ್ನ 12.20 ಕ್ಕೆ ಪ್ರತಿಷ್ಠಾಪನಾ ಸಮಾರಂಭ ಪ್ರಾರಂಭವಾಗಲಿದ್ದು, ಮಧ್ಯಾಹ್ನ 1 ಗಂಟೆಯ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ. ವಾರಣಾಸಿಯ ಅರ್ಚಕ ಲಕ್ಷ್ಮೀಕಾಂತ್ ದೀಕ್ಷಿತ್ ಮುಖ್ಯ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ. ಸಮಾರಂಭದ ಕೆಲವು ಆಚರಣೆಗಳು ಜನವರಿ 16 ರಂದು, ಪ್ರಾಣ-ಪ್ರತಿಷ್ಠಾಪನೆಗೆ ಒಂದು ವಾರ ಮೊದಲು ಪ್ರಾರಂಭವಾಗಿದ್ದವು. ಪ್ರಧಾನಿ ನರೇಂದ್ರ ಮೋದಿ ಮತ್ತು ಹಲವಾರು ಗಣ್ಯರು ಭಾಗವಹಿಸಲಿರುವ ಈ ಮೆಗಾ ಕಾರ್ಯಕ್ರಮಕ್ಕೆ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಇಡೀ ಅಯೋಧ್ಯೆ ನಗರದ ಮೇಲೆ ಭದ್ರತಾ ಪಡೆಗಳು ಕಣ್ಗಾವಲು ಇಟ್ಟಿದೆ.
ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಲಕ್ಷಾಂತರ ಭಕ್ತರು ಅಯೋಧ್ಯೆಯಲ್ಲಿ ಸೇರುವ ನಿರೀಕ್ಷೆಯಿದೆ. ಹೀಗಾಗಿ ಏಕಾಏಕಿ ಅಯೋಧ್ಯೆಗೆ ಬರಬೇಡಿ ಎಂದು ಟ್ರಸ್ಟ್ ಮನವಿ ಮಾಡಿದೆ. ವರ್ಚುವಲ್ ಮೂಲಕ ನೋಡುವಂತೆ ಸಲಹೆ ನೀಡಿದೆ. ಈ ಭವ್ಯ ಕಾರ್ಯಕ್ರಮವನ್ನು ದೇಶದ ವಿವಿಧ ವೇದಿಕೆಗಳಲ್ಲಿ ನೇರ ಪ್ರಸಾರವಾಗಲಿದೆ ಎಂದು ಹೇಳಿದೆ.
ಜ.21 ಭಾನುವಾರ ರಾಮ್ ಲಲ್ಲಾ ವಿರಾಜ್ಮಾನ್ ಮೂಲ ವಿಗ್ರಹವನನು ಶಯನ ಆರತಿಯ ಬಳಿಕ ನೂತನ ರಾಮ ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಹನುಮಂತ, ಸಹೋದರರಾದ ಲಕ್ಷ್ಮಣ, ಶತ್ರುಘ್ನ ಮತ್ತು ಭರತನ ಮೂಲ ವಿಗ್ರಹಗಳೂ ದೇವಾಲಯಕ್ಕೆ ಸ್ಥಳಾಂತರವಾದವು. ಅಂದ ಹಾಗೆ ರಾಮ ಮಂದಿರ ವಿವಾದದಲ್ಲಿ ಕೋರ್ಟ್ ಕೇಸ್ ಗೆದ್ದಿದ್ದು ಇದೇ ರಾಮ ಲಲ್ಲಾ ವಿರಾಜ್ಮಾನ್. ಆ ಮೂರ್ತಿಯ ಬದಲಿಗೆ ಇದೀಗ ಕನ್ನಡಿಗ ಅರುಣ್ ಯೋಗಿರಾಜ್ ಕೆತ್ತಿರುವ 51 ಇಂಚು ಎತ್ತರದ ಹೊಸ ರಾಮ ಲಲ್ಲಾ ಅವರ ಹೊಸ ವಿಗ್ರಹವನ್ನು ರಾಮ ದೇವಾಲಯದ ಗರ್ಭಗೃಹದೊಳಗೆ (ಗರ್ಭಗುಡಿ) ಪೀಠದ ಮೇಲೆ ಸ್ಥಾಪಿಸಲಾಗಿದೆ. ಈ ವಿಗ್ರಹಕ್ಕೆ ಈಗ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ.