ಮಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು, ದೇಶದ ಮೂಲೆ ಮೂಲೆಗಳಲ್ಲಿ ಸಂಭ್ರಮ ಮನೆ ಮಾಡಿದೆ. ಅದೇ ರೀತಿ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠೆಗೆ ತುಳುನಾಡಿನ ಸುಳ್ಯ ತಾಲೂಕಿನ ಸಂಸ್ಕೃತ ವಿದ್ವಾಂಸರೊಬ್ಬರು ಆಯ್ಕೆಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಕೆಮನಬಳ್ಳಿಯ ಶಾರದಾ ಮತ್ತು ಗೋಪಾಲಕೃಷ್ಣ ಭಟ್ ಅವರ ಪುತ್ರ ಪ್ರಸ್ತುತ ತಿರುಪತಿಯ ರಾಷ್ಟ್ರೀಯ ಸಂಸ್ಕ್ರತ ವಿ.ವಿಯ ಪರಮಚಾರ್ಯ ಗುರುಕುಲದ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ. ಕೆ. ಗಣಪತಿ ಭಟ್ ಅವಕಾಶ ಪಡೆದುಕೊಂಡವರು.
ಜನವರಿ 22ರಂದು ಅಯೋಧ್ಯೆಯಲ್ಲಿ ಪ್ರತಿಷ್ಠೆಗೊಳ್ಳಲಿರುವ ರಾಮಲಲ್ಲಾ ವಿಗ್ರಹದ ಧಾರ್ಮಿಕ ವಿಧಿ ವಿಧಾನಗಳು ಜ. 16ರಿಂದ ಆರಂಭಗೊಂಡಿದ್ದು, ಕಾಶಿಯ ಖ್ಯಾತ ವಿದ್ವಾಂಸ ಗಣೇಶ್ವರ ಶಾಸ್ತ್ರಿ ದ್ರಾವಿಡ್ ಮತ್ತು ಪೂಜ್ಯ ಲಕ್ಷ್ಮೀಕಾಂತ್ ದೀಕ್ಷಿತ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿವೆ.
1962ರಲ್ಲಿ ಜನಿಸಿದ ಡಾ.ಕೆ.ಗಣಪತಿ ಭಟ್ ಜಾಲ್ಸೂರು ಗ್ರಾಮದ ಕೆಮನಬಳ್ಳಿಯ ಸ.ಕಿ.ಪ್ರಾ. ಶಾಲೆಯಲ್ಲಿ 4ನೇ ತರಗತಿವರೆಗೆ, ಅಡ್ಕಾರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವರೆಗೆ ಶಿಕ್ಷಣ ಪೂರೈಸಿದರು. ಪ್ರೌಢ ಶಿಕ್ಷಣವನ್ನು ಪೆರ್ನಾಜೆಯ ಪ್ರೌಢಶಾಲೆಯಲ್ಲಿ ಪಡೆದರು. 1978ರಲ್ಲಿ ಕಾಂಚಿ ಕಾಮಕೋಟಿ ವಿದ್ಯಾಪೀಠದಲ್ಲಿ ಋಗ್ವೇದದಲ್ಲಿ ಪದವಿ ಶಿಕ್ಷಣ ಪಡೆದರು. ಸಂಸ್ಕೃತದಲ್ಲಿ ಪದವಿ ಶಿಕ್ಷಣದ ಬಳಿಕ ಮಂತ್ರಾಲಯ ಶ್ರೀ ರಾಘವೇಂದ್ರ ಮಠದಲ್ಲಿ ಶಾಸ್ತ್ರ ಆಧ್ಯಯನ ವಿಷಯದಲ್ಲಿ ಎಂ.ಎ. ಪದವಿ ಪಡೆದರು. ಬಳಿಕ ತಿರುಪತಿ ರಾಷ್ಟ್ರೀಯ ಸಂಸ್ಕೃತ ವಿ.ವಿ.ಯಲ್ಲಿ ಪಿ.ಎಚ್.ಡಿ ಪದವಿ, ಮದ್ರಾಸ್ ವಿ.ವಿ.ಯಲ್ಲಿ ಸಂಸ್ಕೃತ ವೇದಾಂತ ಮತ್ತು ನ್ಯಾಯಶಾಸ್ತ್ರ ವಿಷಯದಲ್ಲಿ ಮತ್ತೊಂದು ಎಂ.ಎ ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದಿರುವ ಗಣಪತಿ ಭಟ್ ಭಾರತ ಸರಕಾರ ನಡೆಸಿದ ಯುಜಿಸಿ ಪರೀಕ್ಷೆಯಲ್ಲಿ ತೇರ್ಗಡೆಯಾದರು.
ಶಿಕ್ಷಣದ ಮೂಲಕ ಸಂಸ್ಕೃತ ಪಾಂಡಿತ್ಯ ಸಂಪಾದಿಸಿದ ಡಾ. ಗಣಪತಿ ಭಟ್ ಕಾಲಡಿಯ ಶಂಕರಾಚಾರ್ಯ ವಿ.ವಿ.ಯಲ್ಲಿ ೮ ವರ್ಷ ಉಪನ್ಯಾಸಕರಾಗಿ ಬೋಧನೆ, ತಿರುಪತಿ ರಾಷ್ಟ್ರೀಯ ಸಂಸ್ಕ್ರತ ವಿ.ವಿ.ಯಲ್ಲಿ ಪ್ರೊಫೆಸರ್ ಆಗಿ, ಪರೀಕ್ಷಾಂಗ ಕುಲಸಚಿವರಾಗಿ, ಪ್ರಸ್ತುತ ತಿರುಪತಿ ವಿ.ವಿ.ಯ ಪರಮಚಾರ್ಯ ಗುರುಕುಲದ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.