ತೆಲಂಗಾಣ ರಾಜ್ಯದಲ್ಲಿ ಆಡಳಿತ ಪಕ್ಷ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ನಾಲ್ವರು ಶಾಸಕರನ್ನು ಆಪರೇಷನ್ ಕಮಲಕ್ಕೆ ಯತ್ನಿಸಿದ್ದರ ಸಂಬಂಧ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಮತ್ತು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ ಎಲ್ ಸಂತೋಷ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸೈಬರ್ಬಾದ್ ನಗರದ ಮೊಯಿನ್ಬಾದ್ ಪೊಲೀಸ್ ಠಾಣೆಯಲ್ಲಿ ಆಪರೇಷನ್ ಕಮಲ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳದ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಈ ಮೂಲಕ ಆಪರೇಷನ್ ಕಮಲ ಹಗರಣದ ಆರೋಪಿಗಳ ಸಂಖ್ಯೆ ಏಳಕ್ಕೆ ಏರಿಕೆ ಆಗಿದೆ.
ಬೊಮ್ಮರಬೆಟ್ಟು ಲಕ್ಷ್ಮೀ ಜನಾರ್ದನ ಸಂತೋಷ್ ( ಬಿ ಎಲ್ ಸಂತೋಷ್), ಕೇರಳ ರಾಜ್ಯದ ಭಾರತ್ ಧರ್ಮ ಜನಸೇನಾ ಹಾಗೂ ಕೇರಳ ಎನ್ಡಿಎ ಘಟಕದ ಅಧ್ಯಕ್ಷ ತುಷಾರ್ ವೆಲ್ಲಪಲ್ಲಿ, ಕೇರಳ ಮೂಲದ ವೈದ್ಯ ಜಗ್ಗು ಕೋಟಿಲಿಲ್, ವಕೀಲ ಭೂಸರಪು ಶ್ರೀನಿವಾಸ್ ಇವರನ್ನು ಆರೋಪಿಗಳನ್ನಾಗಿ ಪರಿಗಣಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಐಟಿ ಪೊಲೀಸರು ಎಸಿಬಿ ಕೋರ್ಟ್ಗೆ ಮಾಹಿತಿ ನೀಡಿದ್ದಾರೆ.
ಈ ಹಿಂದೆ ಆಪರೇಷನ್ ಕಮಲದ ದಲ್ಲಾಳಿಗಳಾದ ರಾಮಚಂದ್ರಭಾರತಿ, ಉದ್ಯಮಿ ಕೆ ನಂದಕುಮಾರ್ ಮತ್ತು ಸಿಮಿಯಾಜಿ ಸ್ವಾಮೀಜಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈಗ ಈ ಮೂವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಬಿ ಎಲ್ ಸಂತೋಷ್ಗೆ ಮತ್ತೆ ಸಮನ್ಸ್:
ನವೆಂಬರ್ 21ರಂದು ವಿಚಾರಣೆಗೆ ಹಾಜರಾಗದೇ ಗೈರಾಗಿದ್ದ ಬಿ ಎಲ್ ಸಂತೋಷ್ಗೆ ಎಸ್ಐಟಿ ಪೊಲೀಸರು ಎರಡನೇ ನೋಟಿಸ್ ಜಾರಿಗೊಳಿಸಿದ್ದಾರೆ. ನವೆಂಬರ್ 26 ಅಥವಾ 28ರಂದು ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ.
ಅಪರಾಧ ದಂಡ ಸಂಹಿತೆಯ 41 ಎ ಕಲಂನ ಅಡಿಯಲ್ಲಿ ನವೆಂಬರ್ 16ರಂದು ಸಂತೋಷ್ಗೆ ನೋಟಿಸ್ ನೀಡಲಾಗಿತ್ತು. ನವೆಂಬರ್ 21ರಂದು ಬೆಳಗ್ಗೆ 10.30ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಒಂದು ವೇಳೆ ವಿಚಾರಣೆಗೆ ಗೈರಾದರೆ ಬಂಧಿಸುವ ಎಚ್ಚರಿಕೆಯನ್ನೂ ಪೊಲೀಸರು ನೀಡಿದ್ದರು.
ಬಂಧನಕ್ಕೆ ತಡೆ, ಎರಡನೇ ಸಮನ್ಸ್ಗೆ ಸೂಚನೆ:
ಆಪರೇಷನ್ ಕಮಲ ತನಿಖೆಯ ಮೇಲ್ವಿಚಾರಣೆ ನಡೆಸುತ್ತಿರುವ ತೆಲಂಗಾಣ ರಾಜ್ಯ ಹೈಕೋರ್ಟ್ನ ಏಕಸದಸ್ಯ ಪೀಠ ಸಂತೋಷ್ ಅವರನ್ನು ಬಂಧಿಸದಂತೆ ನವೆಂಬರ್ 19ರಂದು ಎಸ್ಐಟಿಗೆ ಸೂಚಿಸಿತ್ತು. ಆದರೆ ವಿಚಾರಣೆಗೆ ಸಹಕರಿಸುವಂತೆ ಸಂತೋಷ್ ಅವರಿಗೆ ಆದೇಶಿಸಿತ್ತು.
ಆದರೆ ಮೊದಲ ಸಮನ್ಸ್ ಸ್ವೀಕರಿಸಿದ್ದರೂ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಸಂತೋಷ್ ವಿರುದ್ಧ ಎಸ್ಐಟಿ ಮತ್ತೆ ಹೈಕೋರ್ಟ್ ಮೊರೆ ಹೋಗಿತ್ತು. ಈ ಹಿನ್ನೆಲೆಯಲ್ಲಿ ಎರಡನೇ ಸಮನ್ಸ್ ನೀಡುವಂತೆ ಸೂಚಿಸಿರುವ ಹೈಕೋರ್ಟ್ ಬಂಧನಕ್ಕೆ ನೀಡಿರುವ ತಡೆಯನ್ನು ಮುಂದುವರಿಸಿದೆ.
ADVERTISEMENT
ADVERTISEMENT