ಮುಸ್ಲಿಂ ಮಹಿಳೆಯರಿಗೆ ಅತ್ಯಾಚಾರ ಬೆದರಿಕೆ ಹಾಕಿದ್ದ ಮಹರ್ಷಿ ಶ್ರೀ ಲಕ್ಷ್ಮಣ್ ದಾಸ್ ಉದಾಸಿ ಆಶ್ರಮದ ಭಜರಂಗ ಮುನಿ ದಾಸ್ ಅವರನ್ನು ಉತ್ತರ ಪ್ರದೇಶ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಆ ಹಿಂದೆ ದ್ವೇಷ ಭಾಷಣವನ್ನು ಮಾಡಿದ್ದ ಬಜರಂಗ ಮುನಿ ಸೀತಾಪುರದಲ್ಲಿ ಮುಸ್ಲಿಂ ಮಹಿಳೆಯರಿಗೆ ಅತ್ಯಾಚಾರ ಬೆದರಿಕೆ ಹಾಕಿದ್ದರು. ಇದೇ ಪ್ರಕರಣದಲ್ಲಿ ಪೊಲೀಸರು ಮುನಿಯನ್ನು ಸೀತಾಪುರದಲ್ಲಿ ಬಂಧಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
ಸೀತಾಪುರದ ಖೈರಾಬಾದ್ ಪಟ್ಟಣದ ಮಹರ್ಷಿ ಶ್ರೀ ಲಕ್ಷ್ಮಣ್ ದಾಸ್ ಉದಾಸೀನ್ ಆಶ್ರಮದ ಮಹಂತರಾದ ಭಜರಂಗ ಮುನಿ ದಾಸ್ ಅವರು ಏಪ್ರಿಲ್ 2 ರಂದು ಮುಸ್ಲಿಮರ ವಿರುದ್ಧ ದ್ವೇಷಪೂರಿತ ಭಾಷಣ ಮಾಡಿದ್ದರು. ಏಪ್ರಿಲ್ 2ರಂದು ಬಜರಂಗ ಮುನಿ ಅವರು ಮಾಡಿದ್ದ ಭಾಷಣವು 2 ನಿಮಿಷಗಳ ವಿಡಿಯೊದಲ್ಲಿ ದಾಖಲಾಗಿತ್ತು. ಮುಸ್ಲಿಂ ಮಹಿಳೆಯರ ಮೇಲೆ ಅತ್ಯಾಚಾರ ನಡೆಸುವ ಬೆದರಿಕೆ ಹಾಕುವ ಮಾತುಗಳು ಅದರಲ್ಲಿ ಕೇಳಿಬಂದಿದ್ದವು. ಅದರ ವೀಡಿಯೊ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
#Breaking Sitapur hatemonger Bajrang Muni Das accused of giving rape threats to minority women arrested by @Uppolice under section 354,509,298. pic.twitter.com/LZwwCyFDfe
— Sanjay Jha (@JhaSanjay07) April 13, 2022
ಆ ಮಾತುಗಳಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೇರಿದಂತೆ ಹಲವರಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು. ಅವರನ್ನು ಬಂಧಿಸುವಂತೆ ಆಯೋಗವು ಆಗ್ರಹಿಸಿತ್ತು ಹಾಗೂ ಅಂಥ ಹೇಳಿಕೆಗಳಿಗೆ ಪೊಲೀಸರು ಮೌನ ಪ್ರೇಕ್ಷಕರಾಗಬಾರದು ಎಂದು ಹೇಳಿತ್ತು.
ಅನಂತರ ಬಜರಂಗ ಮುನಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ದ್ವೇಷ ಪೂರಿತ ಭಾಷಣ ಮತ್ತು ಅನುಚಿತ ಹೇಳಿಕೆಗಳ ಕುರಿತು ಐಪಿಸಿ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾದ ಬೆನ್ನಲ್ಲೇ ಖೈರಾಬಾದ್ನ ಮಹರ್ಷಿ ಶ್ರೀ ಲಕ್ಷ್ಮಣ ದಾಸ್ ಉದಾಸೀನ್ ಆಶ್ರಮದ ಮುಖ್ಯಸ್ಥ ಬಜರಂಗ ಮುನಿ ದಾಸ್ ಅವರ ಕ್ಷಮೆಯಾಚನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ‘ನನ್ನ ಹೇಳಿಕೆಯನ್ನು ತಪ್ಪು ರೀತಿಯಲ್ಲಿ ಪ್ರಸ್ತುತ ಪಡಿಸಲಾಗಿದೆ. ನಾನು ಆ ಬಗ್ಗೆ ಬೇಷರತ್ತಾಗಿ ಕ್ಷಮೆಯಾಚಿಸುತ್ತೇನೆ’ ಎಂದಿರುವುದು ವಿಡಿಯೊದಲ್ಲಿದೆ.