ADVERTISEMENT
ಝೈದ್ ಖಾನ್ ನಾಯಕನಾಗಿ ನಟಿಸಿರುವ ಬನಾರಸ್ ಚಿತ್ರ ಬಿಡುಗಡೆಗೆ ಇನ್ನು ಐದು ದಿನ ಮಾತ್ರ ಬಾಕಿ ಉಳಿದುಕೊಂಡಿದೆ. ಈ ಚಿತ್ರ ನವೆಂಬರ್ ೪ರಂದು ದೇಶಾದ್ಯಂತ ತೆರೆಗಾಣಲಿದೆ. ಇದುವರೆಗೂ ಅತ್ಯಂತ ವ್ಯವಸ್ಥಿತವಾಗಿ ಪ್ಯಾನಿಂಡಿಯಾ ಮಟ್ಟದಲ್ಲಿ ಬನಾರಸ್ನ್ನು ಮುನ್ನೆಲೆಗೆ ತರಲಾಗಿದೆ.
ಇದೀಗ ಕಡೇಯ ಕ್ಷಣಗಳಲ್ಲಿ ಸಂಚಲನ ಮೂಡಿಸುವ ಸಲುವಾಗಿ ಝೈದ್ ಊರಿಂದೂರಿಗೆ ಬನಾರಸ್ ಯಾತ್ರ ಆರಂಭಿಸಿದ್ದಾರೆ. ಇಂದು ಬೆಳಗ್ಗೆ 8.30ಕ್ಕೆ ಸರಿಯಾಗಿ, ಬೆಂಗಳೂರಿನ ಟೌನ್ ಹಾಲ್ನಿಂದ ಈ ಯಾತ್ರೆ ಆರಂಭವಾಗಿದೆ.
ಅಲ್ಲಿಂದ ಹೊರಟ ಬನಾರಸ್ ಯಾತ್ರೆ ಆ ನಂತರದಲ್ಲಿ ಮೈಸೂರ್ ರಸ್ತೆಯತ್ತ ಸಾಗಿ ಬಂದು, ಗಾಳಿ ಆಂಜನೇಯ ದೇವಸ್ಥಾನಕ್ಕೆ ಝೈದ್ ತೆರಳಿ ವಂದಿಸಿದ ತರುವಾಯ ರಾಜರಾಜೇಶ್ವರಿನಗರ, ಕೆಂಗೇರಿ ಹಾದಿಯಲ್ಲಿ ಮುಂದುವರೆಯಿತು.
ಅಂಚೆಪುರ, ಕಂಬಿಪಾಳ್ಯ ಮಾರ್ಗವಾಗಿ ಸಾಗಿದ ಈ ಬೃಹತ್ ಬನಾರಸ್ ಯಾತ್ರೆ ಬಿಡದಿಯ ಶಶಿ ತಟ್ಟೆ ಇಡ್ಲಿ ಹೊಟೇಲಿನ ಬಳಿ ಜಮಾವಣೆಗೊಂಡಿತ್ತು. ಅಲ್ಲಿಯೇ ಝೈದ್ ಖಾನ್, ಬೆಂಬಲಿಸಿದ ಎಲ್ಲರೊಂದಿಗೂ ತಿಂಡಿ ಮುಗಿಸಿಕೊಂಡವರೇ ರಾಮನಗರ ಜಿಲ್ಲೆಯತ್ತ ಪಯಣ ಬೆಳೆಸಿದ್ದರು. ಅಲ್ಲಿಯೂ ಅಪಾರ ಪ್ರಮಾಣದಲ್ಲಿ ಪ್ರೇಕ್ಷಕರು, ಅಭಿಮಾನಿಗಳ ಸಮ್ಮುಖದಲ್ಲಿ ಬನಾರಸ್ ಪ್ರಚಾರದ ನಿಮಿತ್ತವಾಗಿ ರೋಡ್ ಶೋ ನಡೆಸಲಾಯಿತು.
ಆ ಬಳಿಕ ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನಕ್ಕೂ ಝೈದ್ ದರ್ಶನ ಪಡೆದುಕೊಂಡರು. ನಂತರ ಬನಾರಸ್ ಯಾತ್ರೆ ಚೆನ್ನಪಟ್ಟಣಕ್ಕೆ ತೆರಳಿತ್ತು. ಅಲ್ಲಿ ಅದ್ದೂರಿಯಾಗಿ ರೋಡ್ ಶೋ ನೆರವೇರಿತು. ಝೈದ್ ಅಲ್ಲಿಯೂ ದೇವಸ್ಥಾನ ಮತ್ತು ದರ್ಗಾಗಳಿಗೆ ಭೇಟಿ ನೀಡಿದರು. ಅಲ್ಲೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಹೊಸ ಕಚೇರಿಯೊಂದರ ಆರಂಭ ಸಮಾರಂಭದಲ್ಲಿ ಭಾಗಿಯಾದರು. ಚನ್ನಪಟ್ಟಣದಲ್ಲಿಯೇ ಮಧ್ಯಾಹ್ನದ ಊಟ ಮುಗಿಸಿಕೊಂಡು ಮತ್ತೆ ಬನಾರಸ್ ಯಾತ್ರೆಗೆ ಚಾಲನೆ ಸಿಕ್ಕಿತ್ತು.
ಮದ್ದೂರಿನಿಂದ ಹಾದು ಹೋಗಿ ಮಂಡ್ಯಕ್ಕೆ ತೆರಳಿ ಅಲ್ಲಿಯೂ ಝೈದ್ ಸಾರಥ್ಯದಲ್ಲಿ ರೋಡ್ ಶೋ ನಡೆಯಿತು. ಅಲ್ಲಿನ ದೇವಸ್ಥಾನ ದರ್ಗಾಗಳಿಗೂ ಭೇಟಿಯಿತ್ತ ಝೈದ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಐದು ಗಂಟೆ ಸುಮಾರಿಗೆ ಶ್ರೀರಂಗಪಟ್ಟಣಕ್ಕೆ ತೆರಳಿ ಅಲ್ಲಿಂದ ಸೀದಾ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋಗಿ, ತಾಯಿಯ ಆಶೀರ್ವಾದ ಪಡೆದುಕೊಂಡ ಬಳಿಕ ಮೈಸೂರು ನಗರದಲ್ಲಿ ಅದ್ದೂರಿಯಾಗಿ ರೋಡ್ ಶೋ ನಡೆದಿದೆ.
ಬಳಿಕ 8.30ರ ಸುಮಾರಿಗೆ ಒಂದು ಸುತ್ತಿನ ಬೆಂಗಳೂರು-ಮೈಸೂರು ಯಾತ್ರೆ ಮುಗಿಸಿಕೊಂಡಿರುವ ಝೈದ್ ತಮ್ಮ ತಂಡ, ಅಭಿಮಾನಿಗಳೊಂದಿಗೆ ಬೆಂಗಳೂರಿಗೆ ಮರಳಿದ್ದಾರೆ. ಹೀಗೆ ಬನಾರಸ್ ಯಾತ್ರೆ ಹೋದಲ್ಲೆಲ್ಲ ಜನಜಂಗುಳಿ ನೆರೆದು ಝೈದ್ರನ್ನು ಸ್ವಾಗತಿಸಿದ್ದಾರೆ. ಈ ಪ್ರತಿಕ್ರಿಯೆ ಚಿತ್ರ ತಂಡಕ್ಕೆ ಹೊಸಾ ಭರವಸೆ ತಂದುಕೊಟ್ಟಿದೆ.
ADVERTISEMENT