ಬೆಂಗಳೂರಿನಲ್ಲಿ ಬಾಲಕನನ್ನು ಅಪಹರಿಸಿ 50 ಲಕ್ಷ ರೂಪಾಯಿಗೆ ಡಿಮ್ಯಾಂಡ್ ಮಾಡಿದ್ದ ಪ್ರಕರಣವನ್ನು ಕೆಲವೇ ಗಂಟೆಯಲ್ಲಿಯೇ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಾಲಕನ ಅಪಹರಣದ ವಿಷಯ ತಿಳಿದು ಕಾರ್ಯಪ್ರವೃತ್ತರಾದ ಹೆಣ್ಣೂರು ಠಾಣೆಯ ಪೊಲೀಸರು, ರಾತ್ರೋರಾತ್ರಿ ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಮತ್ತೊಂದೆಡೆ ಬಾಲಕನನ್ನು ರಕ್ಷಿಸಿ ಪೋಷಕರ ಮಡಿಲಿಗೆ ಒಪ್ಪಿಸುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ.
ನೇಪಾಳ ಮೂಲದ ಗೌರವ್ ಸಿಂಗ್ ಬಂಧಿತ ಆರೋಪಿಯಾಗಿದ್ದಾನೆ. ಪ್ರಕರಣದಲ್ಲಿ ಆರೋಪಿಯ ಸಂಬಂಧಿಯಾಗಿರುವ ದುರ್ಗಾ ಹಾಗೂ ಮಂಗಿತಾ ಎಂಬುವರು ಭಾಗಿಯಾಗಿದ್ದು, ಅವರು ತಲೆಮರೆಸಿಕೊಂಡಿದ್ದಾರೆ. ಇವರ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಹೊರಮಾವಿನ ಆಗರದಲ್ಲಿ ಬಾಲಕನ ತಂದೆ-ತಾಯಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಬಾಲಕನ ಅಪ್ಪ ಬಿಎಂಟಿಸಿ ಬಸ್ ಚಾಲಕನಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಮಂಗಳವಾರ ಸಂಜೆ ಮನೆ ಬಳಿ ಬಾಲಕ ಆಟವಾಡುವಾಗ ಮಂಗಿತಾ ಎಂಬ ಮಹಿಳೆ 5ನೇತರಗತಿಯಲ್ಲಿ ಓದುತ್ತಿರುವ 11 ವರ್ಷದ ಬಾಲಕನನ್ನು ಕರೆದುಕೊಂಡು ಹೋಗಿದ್ದಾಳೆ.
ಅಲ್ಲಿಂದ ದುರ್ಗಾ ಎಂಬ ಮಹಿಳೆ ಜಿಗಣಿಯ ಜೆ.ಆರ್.ಫಾರ್ಮ್ ನಲ್ಲಿ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದ ಸಂಬಂಧಿಕ ನೇಪಾಳ ಮೂಲದ ಗೌರವ್ ಸಿಂಗ್ ಬಳಿ ಒಪ್ಪಿಸಿದ್ದಾಳೆ. ಕಿಡ್ನ್ಯಾಪ್ ಮಾಡಿ ಬಾಲಕನನ್ನು ಒತ್ತೆಯಾಳುವನ್ನಾಗಿ ಮಾಡಿಕೊಂಡ ಗೌರವ್ ಪೋಷಕರಿಗೆ ಕರೆ ಮಾಡಿ, ನಿಮ್ಮ ಮಗನನ್ನು ಕಿಡ್ನ್ಯಾಪ್ ಮಾಡಲಾಗಿದೆ. ಮಗನನ್ನು ಸುರಕ್ಷಿತವಾಗಿ ಬಿಡಬೇಕಾದರೆ 50 ಲಕ್ಷ ರೂ. ಕೊಡಬೇಕೆಂದು ಡಿಮ್ಯಾಂಡ್ ಮಾಡಿದ್ದ. ಆತಂಕಗೊಂಡ ಪೋಷಕರು ಹೆಣ್ಣೂರು ಪೊಲೀಸರಿಗೆ ಸುದ್ದಿ ತಿಳಿಸಿದ್ದರು.
ರಾತ್ರಿ 9 ಗಂಟೆಗೆ ಪೊಲೀಸ್ ಠಾಣೆಗೆ ಬಂದು ಪೋಷಕರ ದೂರು ದಾಖಲಿಸಿದ್ದರು. ಫೋನ್ ನಂಬರ್ ಟ್ರೇಸ್ ಮಾಡಿ ಪೊಲೀಸರು ಆರೋಪಿಗಳ ಬೆನ್ನತ್ತಿದರು. ಜಿಗಣಿ ಬಳಿ ಮನೆಯೊಂದರಲ್ಲಿ ಆರೋಪಿಗಳಿರುವ ಮಾಹಿತಿ ಲಭ್ಯವಾಗಿತ್ತು. ನಂತರ ಪೊಲೀಸರು ಕಾಂಪೌಂಡ್ ಒಳಗೆ ನುಗ್ಗಿ ಮಗುವನ್ನು ರಕ್ಷಣೆ ಮಾಡಿದ್ದಾರೆ.
ಕಿಡ್ನಾಪ್ ಆದ ಕೆಲವೇ ಗಂಟೆಗಳಲ್ಲಿ ಕಂದ ಹೆತ್ತವರ ಕೈಸೇರಿದ್ದು, ಮಗು ಕಿಡ್ನಾಪ್ ಮಾಡಿದ ನೇಪಾಳ ಮೂಲದ ವ್ಯಕ್ತಿಗೆ ಮಹಿಳೆ ಮಾರಿದ್ದು, ನೇಪಾಳ ಮೂಲದ ವ್ಯಕ್ತಿಯನ್ನ ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಆರೋಪಿ ಮಹಿಳೆ ಪರಾರಿಯಾಗಿದ್ದಾಳೆ. ಕೆಲವೇ ಗಂಟೆಯಲ್ಲಿಯೇ ಮಗುವನ್ನು ಮರಳಿ ಪೋಷಕರಿಗೆ ಒಪ್ಪಿಸಿದ ಪೊಲೀಸರ ಕಾರ್ಯಕ್ಕೆ ಮಗುವಿನ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.