ADVERTISEMENT
ವಿಧಾನಸಭೆ ಚುನಾವಣೆಗೆ ಕೆಲವೇ ದಿನ ಮೊದಲು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಒಳಮೀಸಲಾತಿಯನ್ನು ಜಾರಿ ಮಾಡುವ ನಿರ್ಧಾರ ತೆಗೆದುಕೊಂಡಿತ್ತು. ಇದು ಚುನಾವಣೆಯಲ್ಲಿ ಬಿಜೆಪಿ ಪಾಲಿಗೆ ದುಬಾರಿಯಾಗಿ ಪರಿಣಮಿಸಿತ್ತು.
ಒಳಮೀಸಲಾತಿ ಸುದ್ದಿ ಹೊರಬಿದ್ದ ದಿನದಿಂದಲೂ ಅದನ್ನು ಖಂಡತುಂಡವಾಗಿ ವಿರೋಧ ಮಾಡಿದ್ದು ಬಂಜಾರ ಸಮುದಾಯ. ಶಿಕಾರಿಪುರದ ಪ್ರತಿಭಟನೆಯಂತೂ ವಿಕೋಪಕ್ಕೆ ಹೋಗಿತ್ತು. ಅದೆಷ್ಟೋ ಕಡೆ ಬಿಜೆಪಿ ಅಭ್ಯರ್ಥಿಗಳನ್ನು ತಮ್ಮ ತಾಂಡಗಳಿಗೂ ಬಿಟ್ಕೊಂಡಿರಲಿಲ್ಲ. ಮತದಾನದ ಸಂದರ್ಭದಲ್ಲಿಯೂ ಇದೇ ರೋಷವನ್ನು ಸಮುದಾಯ ಮುಂದುವರೆಸಿತ್ತು. ಪರಿಣಾಮ ಬಿಜೆಪಿ ಹೀನಾಯವಾಗಿ ಸೋಲು ಕಂಡಿತ್ತು.
ಈ ಚುನಾವಣೆಯಲ್ಲಿ ಕಾಂಗ್ರೆಸ್ ಪರ ನಿಂತಿದ್ದ ಲಂಬಾಣಿ ಸಮುದಾಯಕ್ಕೆ ಸಿದ್ದರಾಮಯ್ಯ ಸರ್ಕಾರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಹೊಂದಿತ್ತು. ಆದರೆ, ಆರಂಭದಲ್ಲಿಯೇ ಬಂಜಾರ ಸಮುದಾಯಕ್ಕೆ ಕಾಂಗ್ರೆಸ್ ನಿರಾಸೆ ಮಾಡಿದೆ. ಸಿದ್ದರಾಮಯ್ಯ ಸಂಪುಟದಲ್ಲಿ ಬಂಜಾರ ಸಮುದಾಯಕ್ಕೆ ಕಾಂಗ್ರೆಸ್ ಹೈಕಮಾಂಡ್ ಮಣೆ ಹಾಕಿಲ್ಲ. ಇದು ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.
ಲಂಬಾಣಿ ಸಮುದಾಯದ ಏಕೈಕ ಕಾಂಗ್ರೆಸ್ ಶಾಸಕ ರುದ್ರಪ್ಪ ಲಮಾಣಿಗೆ ಕಡೆ ಕ್ಷಣದಲ್ಲಿ ಸಚಿವ ಸ್ಥಾನ ಮಿಸ್ ಆಗಿದೆ. ರುದ್ರಪ್ಪ ಲಮಾಣಿ ಮೂರನೇ ಬಾರಿಗೆ ಹಾವೇರಿ ಮೀಸಲು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಆದರೂ, ಸಿದ್ದರಾಮಯ್ಯ ಸಂಪುಟದಲ್ಲಿ ಅವಕಾಶ ಸಿಕ್ಕಿಲ್ಲ. ಇದನ್ನು ಖಂಡಿಸಿ ಬೆಂಗಳೂರು, ಹಾವೇರಿ ಸೇರಿದಂತೆ ರಾಜ್ಯದ ವಿವಿಧೆಡೆ ಬಂಜಾರ ಸಮುದಾಯ ಪ್ರತಿಭಟನೆ ನಡೆಸಲಿದೆ. ಈಗಾಗಲೇ ಸೋಷಿಯಲ್ ಮೀಡಿಯಾಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಬಂಜಾರ ಸಮುದಾಯದ ಎಂಎಲ್ಸಿ ಪ್ರಕಾಶ್ ರಾಥೋಡ್ ಅವರನ್ನು ಪರಿಷತ್ ಮುಖ್ಯ ಸಚೇತಕರನ್ನಾಗಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಸಮಾಧಾನ ಹೇಳುತ್ತಿದೆ. ಆದರೆ, ಇದರಿಂದ ಸಮುದಾಯಕ್ಕೆ ತೃಪ್ತಿ ಆಗಿಲ್ಲ
ADVERTISEMENT