ಹೆಬ್ಬಾಳ ಬಸ್ ನಿಲ್ದಾಣ ಬಳಿ ರಸ್ತೆ ದಾಟುತ್ತಿದ್ದ ಮೂವರಿಗೆ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದಿದ್ದು, ತೀವ್ರ ಗಾಯಗೊಂಡ ಬಾಲಕಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಸದಾಶಿವನಗರದ ಸೇಂಟ್ ಮೇರಿಸ್ ಶಾಲೆಯ ವಿದ್ಯಾರ್ಥಿನಿ ಶಾಲೆಯಲ್ಲಿ ಓದುತ್ತಿದ್ದ ಬಾಲಕಿ ಅಕ್ಷಯ್ ಬಿ.(13), ಶಾಲೆ ಮುಗಿಸಿ ಮನೆಗೆ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ. ಗಾಯಗೊಂಡಿರುವ ಇನ್ನು ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಹೆಬ್ಬಾಳ ಬಸ್ ನಿಲ್ದಾಣಕ್ಕೆ ಹೊಂದಿಕೊಂಡು ಕೆಳಸೇತುವೆ ಇದ್ದು, ಅದರ ಮೂಲಕವೇ ಪಾದಚಾರಿಗಳು ರಸ್ತೆ ದಾಟುತ್ತಿದ್ದರು. ಆದರೆ, ಭಾನುವಾರ ರಾತ್ರಿ ಸುರಿದ ಮಳೆಯಿಂದಾಗಿ ಕೆಳಸೇತುವೆಯಲ್ಲಿ ನೀರು ನಿಂತುಕೊಂಡಿತ್ತು. ಜನರು ಓಡಾಡುವ ಸ್ಥಿತಿ ಇರಲಿಲ್ಲ. ಹೀಗಾಗಿ, ಜನರೆಲ್ಲರೂ ಪ್ರಮುಖ ರಸ್ತೆಯಲ್ಲೇ ನಡೆದುಕೊಂಡು, ರಸ್ತೆ ದಾಟುತ್ತಿದ್ದರು. ರಸ್ತೆ ದಾಟುವ ವೇಳೆಯಲ್ಲೇ ವೇಗವಾಗಿ ಬಂದ ಲಾರಿ, ಬಾಲಕಿ ಸೇರಿ ಮೂವರಿಗೆ ಗುದ್ದಿತ್ತು. ಜೊತೆಗೆ ಬೈಕ್ಗೂ ಲಾರಿ ಡಿಕ್ಕಿ ಹೊಡೆದಿದ್ದು, ಅದರ ಸವಾರ ಗಾಯಗೊಂಡಿದ್ದಾರೆ. ಕಸದ ಲಾರಿ ಚಾಲಕನ ವೇಗ ಮತ್ತು ಅಜಾಗರೂಕ ಚಾಲನೆಯಿಂದ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆರ್.ಟಿ.ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿನಿ ತಂದೆ ನರಸಿಂಹ ಮೂರ್ತಿ ಬಿಎಂಟಿಸಿ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಗಳು ಓದೋದರಲ್ಲಿ ನಂಬರ್ ಓನ್ ಇದ್ಲು. ಮಧ್ಯಾಹ್ನ ಒಂದು ಗಂಟೆಗೆ ವಿಚಾರ ಗೊತ್ತಾದಾಗ ಸಣ್ಣ ಪುಟ್ಟ ಆಕ್ಸಿಡೆಂಟ್ ಅಂದುಕೊಂಡಿದ್ದೆ. ಇನ್ನೂ ಸ್ವಲ್ಪ ಹೊತ್ತಿಗೆ ಸಾವಿನ ವಿಚಾರ ಕೇಳಿ ಎದೆ ಹೊಡೆದಂತಾಗಿದೆ. 14 ವರ್ಷದ ಮಗಳ ಮರಣೋತ್ತರ ಪರೀಕ್ಷೆಗೆ ನಾನು ಸಹಿ ಹಾಕಬೇಕಾಗಿದೆ. ಅವಳು ನನ್ನ ಬಾಡಿಗೆ ಸಹಿ ಮಾಡಬೇಕಿತ್ತು ಎಂದು ನರಸಿಂಹ ಮೂರ್ತಿಯವರು ಕಣ್ಣೀರು ಹಾಕಿದ್ದಾರೆ.
ಕೆಳಸೇತುವೆಯಲ್ಲಿ ನೀರು ನಿಂತು ಪಾದಚಾರಿಗಳ ಓಡಾಟಕ್ಕೆ ತೊಂದರೆಯಾಗಿದ್ದರಿಂದ ಸ್ಥಳೀಯರು ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದರು. ಆದರೆ, ಬಿಬಿಎಂಪಿ ಸಿಬ್ಬಂದಿ ನೀರು ತೆರವು ಮಾಡಿರಲಿಲ್ಲ. ಬಾಲಕಿ ಸಾವಿಗೆ ಬಿಬಿಎಂಪಿ ಅವರೇ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.