ಬೃಹತ್ ಬೆಂಗಳೂರಿನ ರಸ್ತೆಯಲ್ಲಿ 14 ಸಾವಿರ ಗುಂಡಿಗಳನ್ನು ಮುಚ್ಚಿದ್ದು, ಇನ್ನೂ 15 ಸಾವಿರ ಗುಂಡಿಗಳು ಬಾಕಿ ಇದ್ದು, ಮಳೆಯ ಕಾರಣದಿಂದ ಗುಂಡಿ ಮುಚ್ಚುವುದು ವಿಳಂಬ ಆಗುತ್ತಿದೆ ಎಂದಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೆಂಗಳೂರಲ್ಲಿ ಪ್ರಧಾನಿ ಮೋದಿ ಓಡಾಡಿದ್ದ ರಸ್ತೆಗಳ ಅಭಿವೃದ್ಧಿಗೆ 23 ಕೋಟಿ ಖರ್ಚು ಮಾಡಿದೆ.
ಪ್ರಧಾನಿ ನರೇಂದ್ರ ಮೋದಿಯವರು ಜೂನ್ 20ರಂದು ಬೆಂಗಳೂರಿಗೆ ಭೇಟಿ ನೀಡಿದ್ದರು. ಬೆಂಗಳೂರಲ್ಲಿ ಪ್ರಧಾನಿ ಇದ್ದಿದ್ದು ಕೇವಲ ನಾಲ್ಕು ಗಂಟೆ ಮಾತ್ರ. ಆದರೆ ಪ್ರಧಾನಿ ಮೋದಿಗಾಗಿ ಅವರು ಸಂಚರಿಸುವ ಮಾರ್ಗದಲ್ಲಿ ಹೊಸ ರಸ್ತೆ ನಿರ್ಮಾಣ ಮತ್ತು ಮರು ಅಭಿವೃದ್ಧಿಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಖರ್ಚು ಮಾಡಿದ್ದು ಬರೋಬ್ಬರೀ 23 ಕೋಟಿ ರೂಪಾಯಿ.
ಅದೂ ಈ ಕಾಮಗಾರಿಯನ್ನು ಅತ್ಯಂತ ಆದ್ಯತೆ ಮೇರೆಗೆ ಕೈಗೆತ್ತಿಕೊಂಡು ಒಂದೇ ವಾರದಲ್ಲಿ ಕಾಮಗಾರಿ ಮುಗಿಸಿದೆ.
ಕೆಂಗೇರಿಯಿAದ ಕೊಮ್ಮಘಟ್ಟ 7 ಕಿಲೋ ಮೀಟರ್ ರಸ್ತೆ, ಮೈಸೂರು ರಸ್ತೆಯಲ್ಲಿ ಕೇವಲ 150 ಮೀಟರ್, ಹೆಬ್ಬಾಳ ಫ್ಲೆöÊಓವರ್ 2.5 ಕಿಲೋ ಮೀಟರ್, ತುಮಕೂರು ರಸ್ತೆಯಲ್ಲಿ ಕೇವಲ 900 ಮೀಟರ್ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ 3.6 ಕಿಲೋ ಮೀಟರ್ ರಸ್ತೆಯನ್ನು ದುರಸ್ತಿ ಮಾಡಲಾಗಿದೆ.
ಒಟ್ಟು 13 ಕಿಲೋ ಮೀಟರ್ ರಸ್ತೆಯನ್ನು ಕೇವಲ ಒಂದು ವಾರದಲ್ಲಿ ಬಿರುಸಿನಲ್ಲಿ ದುರಸ್ತಿ ಮಾಡಲಾಗಿದೆ.
ರಸ್ತೆಯ ಜೊತೆಗೆ ಬೀದಿ ದೀಪ, ರಸ್ತೆಗೆ ಬಣ್ಣ ಬಳಿಯುವುದನ್ನೂ ಕೂಡಾ ಪಾಲಿಕೆ ಆದ್ಯತೆ ಆಧಾರದಲ್ಲಿ ಮಾಡಿದೆ.
ಪ್ರಧಾನಮಂತ್ರಿಯವರ ಭೇಟಿ ಬಗ್ಗೆ 15 ದಿನಗಳ ಹಿಂದೆಯಷ್ಟೇ ಗೊತ್ತಾಯಿತು. ಪಾಲಿಕೆ ಆಯುಕ್ತ ವಿವೇಚನಾ ನಿಧಿಯಡಿ ಹಣವನ್ನು ಬಳಕೆ ಮಾಡಲಾಗಿದೆ.