ಬೆಳಗಾವಿ ನಗರದ ಬಸವ ಕಾಲೊನಿಯಲ್ಲಿ ಗುರುವಾರ ರಾತ್ರಿ ಕತ್ತು ಬಿಗಿದು ಪ್ರೇಯಸಿಯನ್ನು ಕೊಲೆ ಮಾಡಿದ ಭಗ್ನ ಪ್ರೇಮಿಯೊಬ್ಬ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಬೂದಿಗೊಪ್ಪ ನಿವಾಸಿ ರಾಮಚಂದ್ರ ತೆಣಗಿ (27) ಹಾಗೂ ಯರಗಟ್ಟಿ ತಾಲೂಕಿನ ಮದ್ಲೂರು ಮೂಲದ ರೇಣುಕಾ ಪಚ್ಚಣ್ಣವರ (28) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ರೇಣುಕಾ ಅವರ ಕುತ್ತಿಗೆಗೆ ಸ್ಕಿಪ್ಪಿಂಗ್ ವೈರ್ ಬಿಗಿದು ಕೊಲೆ ಮಾಡಿದ ಆರೋಪಿ, ಅದೇ ವೈರಿನಿಂದ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನಗರದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ರೇಣುಕಾ ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಮಚಂದ್ರ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು.
ಇತ್ತೀಚಿಗೆ ರೇಣುಕಾ ರಾಮಚಂದ್ರನಿಂದ ಅಂತರಕಾಯ್ದುಕೊಂಡಿದ್ದಳು. ಇದೇ ಕಾರಣಕ್ಕೆ ಗುರುವಾರ ರಾತ್ರಿ ಅವಳನ್ನು ಭೇಟಿ ಮಾಡಲು ರಾಮಚಂದ್ರ ಬಂದಿದ್ದ, ನಂತರ ಈ ಘಟನೆ ನಡೆದಿದೆ ಎನ್ನಲಾಗಿದೆ.
ಪ್ರೇಮಿಗಳಿಬ್ಬರ ಶವದ ಬಳಿ ಡೆತ್ ನೋಟ್ ಪತ್ತೆಯಾಗಿದ್ದು, “ನನ್ನನ್ನು ಮರೆತುಬಿಡು” ಎಂದು ರೇಣುಕಾ ಹೇಳಿದ್ದರಿಂದ ಮನನೊಂದ ಯುವಕ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಳಗಾಔಇಯ ಎಪಿಎಂಸಿ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಎರಡೂ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.