ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೊರೋನಾ ಭೀತಿ ಶುರುವಾಗಿದ್ದು, ಇಂದು ಒಂದೇ ದಿನ 44 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಈ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ಟೆಸ್ಟಿಂಗ್ ಹೆಚ್ಚಿಸಲು ತೀರ್ಮಾನಿಸಿದೆ.
ಈ ಮೂಲಕ ಕೊರೋನಾ ಸಕ್ರಿಯ ಪ್ರಕರಣಗಳ ಸಂಖ್ಯೆ ಕರ್ನಾಟಕದಲ್ಲಿ 79ಕ್ಕೆ ಏರಿಕೆಯಾಗಿದ್ದು, ಇಂದು ಆಸ್ಪತ್ರೆಯಿಂದ 35 ಮಂದಿ ಡಿಸ್ಜಾರ್ಜ್ ಆಗಿದ್ದಾರೆ.
ಸದ್ಯ ಕರ್ನಾಟಕದಲ್ಲಿ ಕೊರೋನಾ ಪಾಸಿಟಿವಿಟಿ ಪ್ರಮಾಣ ಶೇ.6.09ರಷ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ನೆರೆಯ ಕೇರಳದಲ್ಲಿ ಕೋವಿಡ್-19 ಜೆಎನ್1 ರೂಪಾಂತರಿ ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೈಗೊಳ್ಳಬೇಕಾದ ಅಗತ್ಯ ಮುಂಜಾಗ್ರತೆ ಹಾಗೂ ಪೂರ್ವಭಾವಿ ಕ್ರಮಗಳ ಕುರಿತು ರಾಜ್ಯ ಆರೋಗ್ಯ ಇಲಾಖೆ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಕೇರಳ ಹಾಗೂ ತಮಿಳುನಾಡು ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿ ಭಾಗದ ಜಿಲ್ಲೆಗಳಲ್ಲಿ ಅಗತ್ಯ ಸಂಖ್ಯೆಯ ಪರೀಕ್ಷೆ ನಡೆಸಿ, ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಔಷಧ, ಆಕ್ಸಿಜನ್, ಬೆಡ್ ವ್ಯವಸ್ಥೆ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಅಲ್ಲದೇ ಕೋವಿಡ್ ಟೆಸ್ಟ್ ಹೆಚ್ಚಿಸಲು ಅಧಿಕಾರಿಗಳು, ಸಿಬ್ಬಂದಿಗೆ ಸೂಚಿಸಲಾಗಿದೆ.
ಇನ್ನು ವಿಶ್ವದಲ್ಲಿ JN1 ವೈರಸ್ ನವೆಂಬರ್ ನಲ್ಲಿ 10% ಹರಡುವಿಕೆ ಇತ್ತು. ಈಗ ಡಿಸೆಂಬರ್ ವೇಳಗೆ 30% ಆಗಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಮಾಹಿತಿ ನೀಡಿದ್ದಾರೆ.