ಬೆಂಗಳೂರಿನ ತಿಲಕ ನಗರದಲ್ಲಿ ಫುಡ್ ಡೆಲಿವರಿ ಹುಡುಗರೊಂದಿಗೆ ವಾಸವಿದ್ದ ಶಂಕಿತ ಉಗ್ರ ಅಖ್ತರ್ ಹುಸೇನ್ ಲಷ್ಕರ್ ಎಂಬಾತನನ್ನು ಇಂದು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈತನ ವಿಚಾರಣೆ ನಡೆಯುತ್ತಿದೆ ಎಂದು ತಿಳಿದುಬಂದಿದೆ. .
ಅಸ್ಸಾಂ ರಾಜ್ಯದ ಅಖ್ತರ್ ತಿಲಕ್ ನಗರದ ಬಹುಮಹಡಿ ಕಟ್ಟಡದ 3ನೇ ಮಹಡಿಯಲ್ಲಿ ಪುಡ್ ಡೆಲಿವರಿ ಹುಡುಗರೊಂದಿಗೆ ವಾಸವಿದ್ದ. ಶಂಕಿತನ ಬಗ್ಗೆ ಕೇಂದ್ರ ಗುಪ್ತದಳದಿಂದ ಮಾಹಿತಿ ಬಂದಿತ್ತು. ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು, ರಾತ್ರಿ ಮನೆ ಮೇಲೆ ದಾಳಿ ಮಾಡಿ ಶಂಕಿತ ಉಗ್ರನನ್ನು ವಶಕ್ಕೆ ಪಡೆದಿದ್ದಾರೆ.
ಭಯೋತ್ಪಾದನಾ ಕೃತ್ಯದಲ್ಲಿ ತೊಡಗಿದ್ದ ಅಖ್ತರ್, ಉತ್ತರ ಭಾರತದಿಂದ ಪರಾರಿಯಾಗಿ ಬೆಂಗಳೂರಿಗೆ ಬಂದು ನೆಲೆಸಿದ್ದ. ಈತನನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಿದ ಬಳಿಕವೇ ಮತ್ತಷ್ಟು ಮಾಹಿತಿ ಸಿಗಲಿದೆ ಎಂದು ಸಿಸಿಬಿ ಮೂಲಗಳು ಹೇಳಿವೆ.
ಕೆಲ ದಿನಗಳ ಹಿಂದೆಯಷ್ಟೇ ಓಕಳಿಪುರದಲ್ಲಿ ಶಂಕಿತ ಉಗ್ರ ತಾಲಿಬ್ ಹುಸೇನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು