ಪಾರ್ಟಿಯಲ್ಲಿ ಡಿ.ಜೆ ಆಗಿ ಪಾಲ್ಗೊಂಡು ಡ್ರಗ್ಸ್ ಸೇವಿಸಿದ್ದ ಆರೋಪದಡಿ ಬಂಧಿಸಲಾಗಿದ್ದ ಬಾಲಿವುಡ್ ಹಿರಿಯ ನಟ ಶಕ್ತಿ ಕಪೂರ್ ಪುತ್ರ, ನಟಿ ಶ್ರದ್ಧಾ ಕಪೂರ್ ಸಹೋದರ ಸಿದ್ದಾಂತ್ ಕಪೂರ್ ಅವರನ್ನು ಠಾಣೆ ಜಾಮೀನು ಮೇಲೆ ಸೋಮವಾರ ರಾತ್ರಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಟ್ರಿನಿಟಿ ವೃತ್ತದಲ್ಲಿರುವ ದಿ ಪಾರ್ಕ್ ಪಂಚತಾರಾ ಹೋಟೆಲ್ನ ಬಾರ್ನಲ್ಲಿ ಭಾನುವಾರ ರಾತ್ರಿ ಡ್ರಗ್ಸ್ ಪಾರ್ಟಿ ಆಯೋಜಿಸಲಾಗಿತ್ತು. ಈ ಕುರಿತು ಖಚಿತ ಮಾಹಿತಿ ಮೇರೆಗೆ ಹಲಸೂರು ಠಾಣೆ ಪೊಲೀಸರು, ಹೋಟೆಲ್ ಮೇಲೆ ದಾಳಿ ಮಾಡಿದ್ದರು.
ಡ್ರಗ್ಸ್ ಸೇವಿಸಿದ್ದ ಆರೋಪದಡಿ ಸಿದ್ದಾಂತ್ ಸೇರಿದಂತೆ ಐವರನ್ನು ಬಂಧಿಸಿದ್ದರು. ಎಲ್ಲರ ವಿರುದ್ಧ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಠಾಣೆ ಜಾಮೀನು ಮೇಲೆ ಬಿಡುಗಡೆ ಮಾಡಿದ್ದಾರೆಂದು ತಿಳಿದುಬಂದಿದೆ.
”ಸಿದ್ದಾಂತ್ ಸೇರಿದಂತೆ ಐವರಿಗೆ ಠಾಣೆ ಜಾಮೀನು ನೀಡಿ ಕಳುಹಿಸಲಾಗಿದೆ, ಹೆಚ್ಚಿನ ವಿಚಾರಣೆ ಅಗತ್ಯವಿದ್ದರೆ ತನಿಖಾಧಿಕಾರಿ ಮುಂದೆ ಹಾಜರಾಗಬೇಕಾಗುತ್ತದೆ” ಎಂದು ಪೂರ್ವ ವಲಯದ ಡಿಸಿಪಿ ಭೀಮಾಶಂಕರ್ ಗುಳೇದ್ ಹೇಳಿದ್ದಾರೆ.