ಬೆಂಗಳೂರಿನ ಒಟ್ಟು 44 ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ.
ಬೆಂಗಳೂರು ದಕ್ಷಿಣ ವಲಯದಲ್ಲಿರುವ 44 ಶಾಲೆಗಳು, ಉತ್ತರ ವಲಯದ 11 ಶಾಲೆಗಳಿಗೆ ಬೆದರಿಕೆ ಹಾಕಲಾಗಿದೆ. ಮುಜಾಹಿದ್ದೀನ್ ಹೆಸರಲ್ಲಿ ಬೆದರಿಕೆ ಹಾಕಲಾಗಿದೆ.
ಬಾಂಬ್ ಬೆದರಿಕೆ ಕರೆ ಹಿನ್ನೆಲೆಯಲ್ಲಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗುತ್ತಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಕೂಡಾ ಸಭೆಯಲ್ಲಿದ್ದಾರೆ.
ಕುಮಾರಸ್ವಾಮಿ ಪ್ರತಿಕ್ರಿಯೆ:
ಶಾಲೆಗಳಿಗೆ ಅನಾಮಧೇಯ ವ್ಯಕ್ತಿಗಳು ಬಾಂಬ್ ಬೆದರಿಕೆ ಒಡ್ಡಿರುವುದು ಕಳವಳಕಾರಿ. ಮಕ್ಕಳು, ಪೋಷಕರು ತೀವ್ರವಾಗಿ ಕಳವಳಗೊಂಡಿದ್ದು, ಅವರಲ್ಲಿ ಭೀತಿ ಸೃಷ್ಟಿಸಿ, ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವ ದುರುದ್ದೇಶದಿಂದಲೇ ದುಷ್ಟಶಕ್ತಿಗಳು ಇಂತಹ ಹುನ್ನಾರ ನಡೆಸಿರಬಹುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ರಾಜ್ಯ @INCKarnataka ಸರಕಾರವು ಯಾವುದೇ ಕಾರಣಕ್ಕೂ ಈ ಘಟನೆಯನ್ನು ಲಘುವಾಗಿ ಪರಿಗಣಿಸಬಾರದು. ಪೋಷಕರು ಮಕ್ಕಳನ್ನು ಧೈರ್ಯವಾಗಿ ಶಾಲೆಗಳಿಗೆ ಕಳಿಸುವಂತಹ ಸುರಕ್ಷತೆ, ಭದ್ರತೆಯ ಖಾತರಿಯನ್ನು ನೀಡಬೇಕು.
ಈ ಬೆದರಿಕೆಗಳ ಬಗ್ಗೆ ಅಮೂಲಾಗ್ರ ತನಿಖೆ ನಡೆಸಿ, ಇದರ ಹಿಂದೆ ಯಾರಿದ್ದಾರೆ? ಮೂಲ ಯಾವುದು ಎನ್ನುವುದನ್ನು ಪತ್ತೆ ಹಚ್ಚಿ ದುಷ್ಟರ ಹೆಡೆಮುರಿ ಕಟ್ಟಬೇಕು. ಈ ಬಗ್ಗೆ ಕೇಂದ್ರ ಸರಕಾರದ ನೆರವು ಪಡೆಯುವ ಬಗ್ಗೆ ರಾಜ್ಯ ಸರಕಾರ ಮೀನಾಮೇಷ ಎಣಿಸಬಾರದು.