ಬೆಸ್ಕಾಂ ಯಡವಟ್ಟಿಗೆ ಮಹಿಳೆಯೊಬ್ಬರು ಬಲಿಯಾದ ದಾರುಣ ಘಟನೆ ಪಾವಗಡ ತಾಲೂಕಿನ ಕೆಂಚಮ್ಮನಹಳ್ಳಿಯಲ್ಲಿ ನಡೆದಿದೆ.
ಕೆಂಚಮನಹಳ್ಳಿಯ ಬಳಿ ನೆಲಮಟ್ಟದಲ್ಲಿ 11ಕೆವಿ ವಿದ್ಯುತ್ ತಂತಿ ನೇತಾಡುತ್ತಿತ್ತು. ಈ ಬಗ್ಗೆ ಗ್ರಾಮಸ್ಥರು ಹಲವು ಬಾರಿ ದೂರು ನೀಡಿದರೂ ಬೆಸ್ಕಾಂ ಸೆಕ್ಷನ್ ಎಂಜಿನಿಯರ್ ರಾಮಾಂಜಿನೇಯ ತಲೆ ಕೆಡಿಸಿಕೊಂಡಿರಲಿಲ್ಲ. ಫೋನ್ ಮಾಡಿದ ರೈತರನ್ನು ಬ್ಲಾಕ್ ಲಿಸ್ಟ್ ಗೆ ಹಾಕುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ವಿದ್ಯುತ್ ಲೈನ್ ಸರಿಪಡಿಸದೇ ಬೆಸ್ಕಾಂ ನಿರ್ಲಕ್ಷ್ಯ ತೋರಿದ ಪರಿಣಾಮ ಇಂದು ತುಂಬು ಜೀವವೊಂದು ಬಲಿ ಆಗಿದೆ.
ಹೊಲದಲ್ಲಿದ್ದ ಎಮ್ಮೆಗಳನ್ನು ಮನೆಗೆ ಹೊಡೆದುಕೊಂಡು ವಾಪಾಸ್ ಆಗುವಾಗ ಎರಡು ಮಕ್ಕಳ ತಾಯಿ 26ವರ್ಷದ ಮಂಗಳಗೌರಮ್ಮಗೆ 11ಕೆವಿ ವಿದ್ಯುತ್ ತಂತಿ ತಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಆಕೆಯನ್ನು ಲಿಂಗದಹಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮಂಗಳಗೌರಮ್ಮ ಇಹಲೋಕ ತ್ಯಜಿಸಿದ್ದಾರೆ.
ಮೃತರ ತಂದೆ ಪೊನ್ನಸಮುದ್ರ ಗ್ರಾಮದ ಸ್ಟಾರ್ ಬೊಮ್ಮಯ್ಯ, ಮೃತರ ಪತಿ ನ್ಯಾಯ ಕೇಳಲು ಬೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿದರೆ, ಉತ್ತರ ನೀಡಲಾಗದೇ ಜಾರಿಕೊಂಡಿದ್ದಾರೆ. ಹೊಣೆಗಾರಿಕೆಯಿಂದ ನುಣುಚಿಕೊಂಡಿದ್ದಾರೆ. ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆ ಖಂಡಿಸಿ, ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಮೃತರ ಸಂಬಂಧಿಗಳು ಶವದ ಸಮೇತ ಪಾವಗಡದ ಬೆಸ್ಕಾಂ ಕಚೇರಿ ಮುಂದೆ ಆಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ.
ನ್ಯಾಯ ಸಿಗುವವರೆಗೂ ಶವ ಎತ್ತಲು ಬಿಡಲ್ಲ, ಅಂತ್ಯಕ್ರಿಯೆಯನ್ನು ನಡೆಸಲ್ಲ ಎಂದು ಕುಟುಂಬಸ್ಥರು ಪಟ್ಟು ಹಿಡಿದು ಕುಳಿತಿದ್ದಾರೆ. ಮಂಗಳವಾರ ಬೆಳಗ್ಗೆ ಪಾವಗಡ ಪಟ್ಟಣದಲ್ಲಿ ರಸ್ತೆ ತಡೆ ನಡೆಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲು ತೀರ್ಮಾನಿಸಿದ್ದಾರೆ.
ದುರಂತ ನಡೆದು ಹಲವು ಗಂಟೆ ಕಳೆದರೂ ತಾಲ್ಲೂಕು ತಹಶೀಲ್ದಾರ್ ಆಗಲಿ, ಸ್ಥಳೀಯ ಶಾಸಕರಾದ ವೆಂಕಟರಮಣಪ್ಪ ಆಗಲಿ, ಮಾಜಿ ಶಾಸಕ ತಿಮ್ಮರಾಯಪ್ಪ ಆಗಲಿ, ಅಥವಾ ಇತರೆ ನಾಯಕರಾಗಲಿ ಸ್ಪಂದಿಸಿಲ್ಲ. ಸ್ಥಳಕ್ಕೆ ಬಂದಿಲ್ಲ.ಇದಕ್ಕೆ ಸ್ಥಳೀಯರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ತಿಂಗಳ ಹಿಂದಷ್ಟೇ ಕೆಂಚಮ್ಮನಹಳ್ಳಿಯಲ್ಲಿ ಬೆಸ್ಕಾಂ ಇಲಾಖೆ ವಿದ್ಯುತ್ ಅದಾಲತ್ ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಇದೆ 11ಕೆವಿ ವಿದ್ಯುತ್ ತಂತಿ ನೆಲ ಮಟ್ಟದಲಿ ನೇತಾಡುತ್ತಿರುವ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳು ದೂರು ನೀಡಿದ್ದರು. ಆದರೂ ಬೆಸ್ಕಾಂ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ.