ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಕೈಗೊಳ್ಳಲಾಗಿರುವ ಭಾರತವನ್ನು ಒಗ್ಗೂಡಿಸಿ ಐಕ್ಯತಾ ಯಾತ್ರೆ ಇವತ್ತು ಕರ್ನಾಟಕ ಪ್ರವೇಶಿಸಲಿದೆ.
ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಲ್ಲಿ ಆರಂಭಗೊಂಡಿರುವ 148 ದಿನಗಳ ಪಾದಯಾತ್ರೆ ಕರ್ನಾಟಕದಲ್ಲಿ ಅಕ್ಟೋಬರ್ 20ರಂದು ಕೊನೆಗೊಳ್ಳಲಿದೆ.
ಒಟ್ಟು 3,571 ಕಿಲೋ ಮೀಟರ್ ದೂರ ಸಾಗಲಿರುವ ಪಾದಯಾತ್ರೆ 148 ದಿನ ಅಂದರೆ ಜನವರಿ 30ರಂದು ಮಹಾತ್ಮ ಗಾಂಧಿ ಹುತಾತ್ಮರಾದ ದಿನ ಕಾಶ್ಮೀರದಲ್ಲಿ ಕಾಂಗ್ರೆಸ್ ಪಾದಯಾತ್ರೆ ಪರಿಸಮಾಪ್ತಿ ಆಗಲಿದೆ.
ಎಲ್ಲಿಂದ ಪ್ರವೇಶ..?
ತಮಿಳುನಾಡಿನಲ್ಲಿ 4 ದಿನಗಳ ಪಾದಯಾತ್ರೆ ಮುಗಿಸಿ ಬಳಿಕ ಕೇರಳದಲ್ಲಿ 19 ದಿನಗಳ ಪಾದಯಾತ್ರೆ ಮುಗಿಸಿದ್ದ ಪಾದಯಾತ್ರೆ ಇವತ್ತು ತಮಿಳುನಾಡಿನ ಗುಡಲೂರಿನಿಂದ ವಾಹನ ಮೂಲಕ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಗಡಿಗೆ ಬರಲಿದೆ.
ಕರ್ನಾಟಕದಲ್ಲಿ ಎಷ್ಟು ದಿನ..?
* ಭಾರತ ಒಗ್ಗೂಡಿಸಿ ಪಾದಯಾತ್ರೆ ಕರ್ನಾಟಕದಲ್ಲಿ 21 ದಿನ ಸಾಗಲಿದೆ.
* 511 ಕಿಲೋ ಮೀಟರ್ ದೂರ ಕರ್ನಾಟಕದಲ್ಲಿ ರಾಹುಲ್ ಗಾಂಧಿ ನಡೆಯಲಿದ್ದಾರೆ.
* 7 ಲೋಕಸಭಾ ಕ್ಷೇತ್ರಗಳಾದ ಚಾಮರಾಜನಗರ, ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ ಮೂಲಕ ಸಾಗಿ ರಾಯಚೂರು ಜಿಲ್ಲೆಯಲ್ಲಿ ರಾಹುಲ್ ಗಾಂಧಿ ಅವರ ಪಾದಯಾತ್ರೆ ಕರ್ನಾಟಕದಲ್ಲಿ ಕೊನೆಯಾಗಲಿದೆ.
22 ವಿಧಾನಸಭಾ ಕ್ಷೇತ್ರಗಳಲ್ಲಿ ರಾಹುಲ್ ಹೆಜ್ಜೆ:
ರಾಹುಲ್ ಗಾಂಧಿ ಅವರ ಪಾದಯಾತ್ರೆ ರಾಜ್ಯದ 22 ವಿಧಾನಸಭಾ ಕ್ಷೇತ್ರಗಳಲ್ಲಿ ಸಾಗಲಿದೆ. 7 ಜಿಲ್ಲೆಗಳಲ್ಲಿ ಇರುವ ವಿಧಾನಸಭಾ ಕ್ಷೇತ್ರಗಳು 55. ಇವುಗಳ ಪೈಕಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್ 18 ವಿಧಾನಸಭಾ ಕ್ಷೇತ್ರಗಳನ್ನಷ್ಟೇ ಗೆದ್ದಿತ್ತು.
ಕರ್ನಾಟಕದಲ್ಲಿ ಹೆಚ್ಚು:
ಕಿಲೋ ಮೀಟರ್ ಲೆಕ್ಕದಲ್ಲಿ ರಾಹುಲ್ ಗಾಂಧಿ ಅತೀ ದೂರ ಪಾದಯಾತ್ರೆ ಸಾಗುವುದು ಕರ್ನಾಟಕದಲ್ಲಿ. ಕರ್ನಾಟಕದಲ್ಲಿ 511 ಕಿಲೋ ಮೀಟರ್ ಪಾದಯಾತ್ರೆ ಸಾಗಲಿದ್ದು, ಮುಂದಿನ ವರ್ಷದ ಕೊನೆಯಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ರಾಜಸ್ಥಾನದಲ್ಲಿ 510 ಕಿಲೋ ಮೀಟರ್ ದೂರ ನಡೆಯಲಿದ್ದಾರೆ.
ಮೂರು ಬಾರಿ ವಿರಾಮ:
ಕರ್ನಾಟಕದಲ್ಲಿ ಪಾದಯಾತ್ರೆ ವೇಳೆ ರಾಹುಲ್ ಗಾಂಧಿ ಮೂರು ಬಾರಿ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ.
ಅಕ್ಟೋಬರ್ 4 ಮತ್ತು 5ರಂದು ಮೊದಲ ವಿರಾಮ, ಚಿತ್ರದುರ್ಗದಲ್ಲಿ 2ನೇ ವಿಶ್ರಾಂತಿ, ಬಳ್ಳಾರಿಯಲ್ಲಿ 19ನೇ ದಿನ 3ನೇ ಬಾರಿ ವಿಶ್ರಾಂತಿ ಪಡೆಯಲಿದ್ದಾರೆ.
ಹಳೆ ಮೈಸೂರಿನಿಂದ ಕಲ್ಯಾಣ ಕರ್ನಾಟಕದತ್ತ: ಚುನಾವಣಾ ಪರಿಣಾಮ:
ಕಾಂಗ್ರೆಸ್ ಪಾದಯಾತ್ರೆಯ ಮೊದಲ ರಾಜಕೀಯ ಪರಿಣಾಮ ಏನಾಗಬಹುದು ಎಂಬುದರ ಮೊದಲ ಫಲಿತಾಂಶ ಕರ್ನಾಟಕದಿಂದಲೇ ಸಿಗಲಿದೆ. ಕಾರಣ ಪಾದಯಾತ್ರೆ ಮುಗಿದ ಬಳಿಕ ಮೊದಲ ವಿಧಾನಸಭಾ ಚುನಾವಣೆ ನಡೆಯಲಿರುವ ಮೊದಲ ರಾಜ್ಯ ಕರ್ನಾಟಕ.
2023ರ ವಿಧಾನಸಭಾ ಚುನಾವಣೆಯಲ್ಲಿ ಹಳೆ ಮೈಸೂರು ಭಾಗ ಮತ್ತು ಮಧ್ಯ ಕರ್ನಾಟಕದಲ್ಲಿ ಸೀಟುಗಳ ಸಂಖ್ಯೆ ಹೆಚ್ಚಿಸಿಕೊಳ್ಳುವುದು ಕಾಂಗ್ರೆಸ್ ಗೆ ಇರುವ ದೊಡ್ಡ ಸವಾಲು.
* ಚಾಮರಾಜನಗರ ಜಿಲ್ಲೆಯ 4 ಕ್ಷೇತ್ರಗಳ ಪೈಕಿ 2ರಲ್ಲಿ ಕಾಂಗ್ರೆಸ್ ಗೆದ್ದಿತ್ತು.
* ಮಂಡ್ಯ ಜಿಲ್ಲೆಯ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಒಂದೂ ಸೀಟು ಗೆದ್ದಿಲ್ಲ.
* ಮೈಸೂರು ಜಿಲ್ಲೆಯ 11ರಲ್ಲಿ ಕಾಂಗ್ರೆಸ್ 3 ಸೀಟು ಗೆದ್ದಿತ್ತು.
* ತುಮಕೂರು ಜಿಲ್ಲೆಯ 11ರಲ್ಲಿ 3 ಸೀಟು, ಚಿತ್ರದುರ್ಗ ಜಿಲ್ಲೆಯ 6ರಲ್ಲಿ ಕೇವಲ 1 ಸೀಟು ಗೆದ್ದಿತ್ತು.
* ಬಳ್ಳಾರಿ ಜಿಲ್ಲೆಯ 9ರಲ್ಲಿ 6, ರಾಯಚೂರು ಜಿಲ್ಲೆಯ 7ರಲ್ಲಿ 3 ಸೀಟು ಗೆದ್ದಿತ್ತು.
ಕಾಂಗ್ರೆಸ್ ಕಾರ್ಯಕರ್ತರು ಬ್ಯುಸಿ:
ಕರ್ನಾಟಕದಲ್ಲಿ ಮುಂದಿನ ವರ್ಷದ ಮಾರ್ಚ್, ಏಪ್ರಿಲ್ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನಲೆಯಲ್ಲಿ 2 ವರ್ಷದಿಂದ ಕಾಂಗ್ರೆಸ್ ತಳಮಟ್ಟದಿಂದ ಸಂಘಟನಾತ್ಮಕವಾಗಿ ಬಲಗೊಂಡಿದೆ.
ಕಾಂಗ್ರೆಸ್ ಸದಸ್ಯತ್ವ ಅಭಿಯಾನ, ಮೇಕೆದಾಟು ಪಾದಯಾತ್ರೆ, ಸಿದ್ದರಾಮೋತ್ಸವ, ಸ್ವಾತಂತ್ರ್ಯ ಅಮೃತ ಮಹೋತ್ಸವ ನಡಿಗೆ ಬಳಿಕ ಈಗ ಭಾರತ ಒಗ್ಗೂಡಿಸಿ ಪಾದಯಾತ್ರೆ ನಡೆಯುತ್ತಿದೆ.
ಭಾರತ ಒಗ್ಗೂಡಿಸಿ ಪಾದಯಾತ್ರೆ ಬಳಿಕ ಅಕ್ಟೋಬರ್ ಕೊನೆ ವಾರ ಅಥವಾ ನವೆಂಬರ್ ಆರಂಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ 224 ವಿಧಾನಸಭಾ ಕ್ಷೇತ್ರಗಳಿಗೆ ಬಸ್ ಮೂಲಕ ರಥಯಾತ್ರೆ ಶುರುವಾಗಲಿದೆ.
ಈ ಮೂಲಕ ಕಾಂಗ್ರೆಸ್ ಸಂಘಟನಾತ್ಮಕವಾಗಿ ಮತ್ತಷ್ಟು ಬಲಗೊಳ್ಳುವ ಉಮೇದಿನಲ್ಲಿದೆ.