ತಮ್ಮ ಕಾರಿಗೆ ಬೈಕ್ ಡಿಕ್ಕಿಯಾದ ಘಟನೆಗೆ ಕುರಿತಂತೆ ಜೆಡಿಎಸ್ ನಾಯಕಿ ಭವಾನಿ ರೇವಣ್ಣ ಬಾಯಿಗೆ ಬಂದಂತೆ ಮಾತನಾಡಿದ್ದು ಸಾರ್ವಜನಿಕರ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ತಮ್ಮ ಒಂದೂವರೆ ಕೋಟಿ ರೂಪಾಯಿ ಕಾರಿಗಿಂತಲೂ ವ್ಯಕ್ತಿಯ ಜೀವ ದೊಡ್ಡದಲ್ಲವೆಂಬಂತೆ ಮಾತನಾಡಿದ್ದ ಭವಾನಿ ರೇವಣ್ಣ ಸದ್ಯ ಪ್ರಜ್ಞಾವಂತ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸದ್ಯ ಭವಾನಿ ರೇವಣ್ಣ ಪ್ರಯಾಣ ಮಾಡ್ತಿದ್ದ ಕಾರು ಬೇನಾಮಿನಾ ಅನ್ನೋ ಗುಮಾನಿ ಇದೀಗ ವ್ಯಕ್ತವಾಗಿದ್ದು, ಇದಕ್ಕೆ ಸ್ವತಃ ಆ ಒಂದೂವರೆ ಕೋಟಿ ರೂಪಾಯಿ ಕಾರಿನ ದಾಖಲಾತಿಯೇ ಪುಷ್ಟಿ ನೀಡ್ತಿದೆ.
ಒಂದುವರೆ ಕೋಟಿ ರೂಪಾಯಿ ಕಾರು ಆಶ್ಪ್ರಾ ಇನ್ಫ್ರಾ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಹೆಸರಲ್ಲಿದೆ ಅಂತ ದಾಖಲೆಗಳು ಹೇಳ್ತಿವೆ. ಹಾಗಾದ್ರೆ ಈ ಕಂಪನಿ, ಭವಾನಿ ರೇವಣ್ಣಗೆ ಕಾರು ಯಾಕೆ ಕೊಟ್ಟಿದೆ. ಈ ಕಂಪನಿಗೂ ರೇವಣ್ಣ ಕುಟುಂಬಕ್ಕೂ ಏನು ಸಂಬಂಧ ಅನ್ನೋ ಪ್ರಶ್ನೆಗಳು ಇದೀಗ ರಾಜ್ಯದ ಜನರಲ್ಲಿ ಮೂಡಿದೆ.
ಒಂದೂವರೆ ಕೋಟಿ ಕಾರು, ಪ್ಯಾಸೆಂಜರ್ ಬೇರೆ ಓನರ್ ಬೇರೇನಾ. ಸಿಎಂ ಮನೆಗೆ ಸೋಫಾ ತಂದ್ರೆ ಹೊಟ್ಟೆ ಹುಣ್ಣು ಮಾಡಿಕೊಳ್ಳುವ ಕುಮಾರಸ್ವಾಮಿ, ಮಾಜಿ ಜಿಲ್ಲಾ ಪಂಚಾಯಿತಿಯ ಮೆಂಬರ್, ಶಾಸಕರ ಪತ್ನಿ- ಎಂಎಲ್ಸಿ-ಎಂಪಿ ರಾಜಮಾತೆ ಒಂದೂವರೆ ಕೋಟಿ ಕಾರಿನ ಬೇನಾಮಿ ಓನರ್ ಆಗಿದ್ದರೂ ಕೂಡ ತುಟಿಕ್ ಪಿಟಿಕ್ ಎನ್ನುತ್ತಿಲ್ಲ ಅಂತ ಕಾಂಗ್ರೆಸ್ ಮುಖಂಡ ಮತ್ತು ವಕೀಲ ಸೂರ್ಯ ಮುಕುಂದರಾಜ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪ್ರಶ್ನೆ ಮಾಡಿದ್ದಾರೆ. ಈ ವಿಚಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ಚರ್ಚೆಯಾಗ್ತಿದೆ.