ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಮುನಿಯಾಲ್ ಉದಯ್ ಕುಮಾರ್ ಶೆಟ್ಟಿ ಅವರಿಗೆ ಟಿಕೆಟ್ ಸಿಗಬಹುದು ಎಂಬ ಬಗ್ಗೆ ಕೆಲ ದಿನಗಳ ಹಿಂದೆ ಪ್ರತಿಕ್ಷಣ ವರದಿ ಮಾಡಿತ್ತು. ಆದರೆ ಮುನಿಯಾಲ್ ಅವರಿಗೆ ಈ ಬಾರಿ ಟಿಕೆಟ್ ಸಿಗದೇ ಇದ್ದರೂ ಅಚ್ಚರಿಯೇನಿಲ್ಲ.
ಮೂಲಗಳ ಪ್ರಕಾರ ಮುನಿಯಾಲ್ ಅವರ ವಿಷಯದಲ್ಲಿ ಕಾಂಗ್ರೆಸ್ಗೆ ಹಲವು ಆತಂಕಗಳು ಮತ್ತು ಮುನಿಯಾಲ್ ಅವರಿಗೆ ಟಿಕೆಟ್ ಕೊಟ್ಟರೆ ಬಿಜೆಪಿ ಶಾಸಕ ಸುನಿಲ್ ಕುಮಾರ್ ಅಥವಾ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೆ ಲಾಭ ಆಗಬಹುದು ಎಂಬ ಆತಂಕ ಕಾಂಗ್ರೆಸ್ನ್ನು ಕಾಡುತ್ತಿದೆ.
1. ಮೂರು ಬಾರಿ ಅವಕಾಶ, ಮೂರು ಬಾರಿಯೂ ಸಮಯ ಕೇಳಿದ ಮುನಿಯಾಲ್:
ಒಂದೂವರೆ ವರ್ಷದ ಹಿಂದೆಯೇ ಕಾರ್ಕಳದಲ್ಲಿ ಕಾಂಗ್ರೆಸ್ ಈ ಬಾರಿ ಮುನಿಯಾಲ್ ಉದಯ್ ಕುಮಾರ್ ಶೆಟ್ಟಿ ಅವರಿಗೆ ಟಿಕೆಟ್ ಕೊಡುವ ಬಗ್ಗೆ ಯೋಚನೆ ಮಾಡಿತ್ತು. ಈ ಬಗ್ಗೆ ಖುದ್ದು ಮುನಿಯಾಲ್ ಅವರ ಬಳಿಯೇ ಕಾಂಗ್ರೆಸ್ ನಾಯಕರು ಚರ್ಚೆಯನ್ನೂ ನಡೆಸಿದ್ದರು.
ಆದರೆ ಆಗ ಮುನಿಯಾಲ್ ತಮಗೆ ಆರು ತಿಂಗಳು ಸಮಯ ನೀಡುವಂತೆ, ಆರು ತಿಂಗಳಲ್ಲಿ ತಮ್ಮ ರಾಜಕೀಯ ನಿರ್ಧಾರ ತಿಳಿಸುವುದಾಗಿ ಕಾಂಗ್ರೆಸ್ ನಾಯಕರ ಬಳಿ ಸಮಯ ಕೇಳಿದ್ದರು.
ಇದಾದ ಬಳಿಕ ಮೂರು ತಿಂಗಳ ಹಿಂದೆ ಮತ್ತೆ ಉದಯ್ ಕುಮಾರ್ ಶೆಟ್ಟಿ ಅವರನ್ನು ಕಾಂಗ್ರೆಸ್ ಸಂಪರ್ಕಿಸಿತ್ತು. ಆದರೆ ಆಗಲೂ ಸಮಯವಾಕಾಶ ಕೇಳಿದ್ದರು.
ಇತ್ತ, ಕಾಂಗ್ರೆಸ್ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಮುನಿಯಾಲ್ ಅವರಿಗೆ ಕ್ಷೇತ್ರದಲ್ಲಿ ಕೆಲವು ಪೂರಕ ಅಂಶಗಳಿವೆ ಎಂಬ ಮಾಹಿತಿ ಸಿಕ್ಕಿದ್ದರಿಂದ ಬೆಂಗಳೂರಲ್ಲಿ ನಡೆದಿದ್ದ ಕಾಂಗ್ರೆಸ್ನ ಹಿರಿಯ ನಾಯಕರ ಸಭೆಯ ಬಳಿಕ ಮತ್ತೆ ಕಾಂಗ್ರೆಸ್ ಮುನಿಯಾಲ್ ಅವರನ್ನು ಸಂಪರ್ಕ ಮಾಡಿತ್ತು.
ಆದರೆ ಮೂರನೇ ಬಾರಿಯೂ ಮತ್ತೆ ಸ್ಪರ್ಧೆಯ ಬಗ್ಗೆ ನಿರ್ಧರಿಸಲು ಸಮಯ ನೀಡುವಂತೆ ಮುನಿಯಾಲ್ ಕಾಂಗ್ರೆಸ್ ನಾಯಕರಿಗೆ ಹೇಳಿದರು. ಆ ಮೂರನೇ ಮಾತುಕತೆ ನಡೆದು ಹಲವು ದಿನಗಳಾದರೂ ಇನ್ನೂ ಮುನಿಯಾಲ್ ಅವರ ಕಡೆಯಿಂದ ಕಾಂಗ್ರೆಸ್ ನಾಯಕರಿಗೆ ಸಂದೇಶ ರವಾನೆ ಆಗಿಲ್ಲ.
ಪದೇ ಪದೇ ಸಂಪರ್ಕಿಸಿದರೂ ಮುನಿಯಾಲ್ ಉದಯ್ ಕುಮಾರ್ ಶೆಟ್ಟಿ ಸಮಯ ದೂಡುವ ನಿರ್ಧಾರದಿಂದ ಇವರಿಗೆ ಟಿಕೆಟ್ ಕೊಡಬೇಕೇ ಬೇಡವೇ ಎಂಬ ಬಗ್ಗೆ ಪ್ರಶ್ನೆಗಳು ಕಾಂಗ್ರೆಸ್ ನಾಯಕರನ್ನು ಕಾಡುತ್ತಿವೆ.
2. ಕಾಂಗ್ರೆಸ್ ಪಕ್ಷದ ಕಡೆ ತಲೆ ಹಾಕದ ಮುನಿಯಾಲ್:
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದ ಬಳಿಕ ಉಡುಪಿ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾಗಿದ್ದ ಮುನಿಯಾಲ್ ಅವರು ಕಾರ್ಕಳದಲ್ಲಿ ಕಾಂಗ್ರೆಸ್ ಸಂಘಟನೆಯಲ್ಲೇ ತೊಡಗಿಸಿಕೊಂಡಿಲ್ಲ. ಪಕ್ಷದ ಸಭೆ, ಸಮಾರಂಭ, ಸಮಾವೇಶಗಳಿಂದ ಐದು ವರ್ಷಗಳಿಂದ ಮುನಿಯಾಲ್ ಅವರು ಸಂಪೂರ್ಣ ದೂರ ಉಳಿದಿದ್ದಾರೆ.
ಹೀಗಾಗಿ ಮುನಿಯಾಲ್ ಅವರು ಇನ್ನೂ ಕಾಂಗ್ರೆಸ್ನಲ್ಲಿದ್ದಾರೋ ಅಥವಾ ಪಕ್ಷ ಬಿಟ್ಟಿದ್ದಾರೋ ಎನ್ನುವುದೇ ಕಾರ್ಕಳದಲ್ಲಿ ಗೊಂದಲ.
3. ಬಿಜೆಪಿ ಸೇರಿದ ಮುನಿಯಾಲ್ ಬೆಂಬಲಿಗರು:
ಮುನಿಯಾಲ್ ಜೊತೆಗೆ ಗುರುತಿಸಿಕೊಂಡಿದ್ದ ಬೆಂಬಲಿಗರು ಕಳೆದ ವಿಧಾನಸಭಾ ಚುನಾವಣೆ ಬಳಿಕ ಒಬ್ಬೊಬ್ಬರಾಗಿಯೇ ಬಿಜೆಪಿ ಸೇರಿಕೊಂಡರು.
4. ಬಿಜೆಪಿಗೆ ಸೇರಲು ಪ್ರಯತ್ನಿಸಿದ್ದ ಮುನಿಯಾಲ್:
ಉಡುಪಿ ಮಾಜಿ ಶಾಸಕ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಬಿಜೆಪಿ ಸೇರಿದ ಬಳಿಕ ಮುನಿಯಾಲ್ ಅವರು ಕೂಡಾ ಬಿಜೆಪಿ ಸೇರುವ ಬಗ್ಗೆ ಪ್ರಯತ್ನಿಸಿದ್ದರು. ಇದರ ಸಲುವಾಗಿಯೇ ಕಾರ್ಕಳದ ಹಲವು ಭಾಗಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರ ಜೊತೆಗೆ ಸಭೆ ಕರೆದಿದ್ದರೂ ಆ ಸಭೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇತ್ತ ಆ ಸಭೆಗಳಲ್ಲಿ ಭಾಗವಹಿಸಿದ್ದ ಮುನಿಯಾಲ್ ಅವರ ಕೆಲ ಹಿತೈಷಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರುವ ನಿರ್ಧಾರಕ್ಕೆ ಬೆಂಬಲ ಸೂಚಿಸಲಿಲ್ಲ.
ಹೀಗಾಗಿ ಕೊನೆಗೆ ಅನಿವಾರ್ಯವಾಗಿ ಮುನಿಯಾಲ್ ಬಿಜೆಪಿ ಸೇರುವ ನಿರ್ಧಾರದಿಂದ ಹಿಂದೆ ಸರಿಯಬೇಕಾಯಿತು.
5. ಸಚಿವ ಸುನಿಲ್ ಕುಮಾರ್ ಜೊತೆಗೆ ಆತ್ಮೀಯತೆ:
ಮುನಿಯಾಲ್ ಅವರ ವಿರುದ್ಧ ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯ (ED) ದಾಳಿ ಮಾಡಿಸಿದ್ದೇ ಸಚಿವ ಸುನಿಲ್ ಕುಮಾರ್ ಎಂಬ ಆರೋಪ ಇದೆ.
ತಮ್ಮ ರಾಜಕೀಯ ಎದುರಾಳಿ ಪಕ್ಷದ ಪ್ರಭಾವಿ ಸಚಿವರೊಬ್ಬರು ತಮ್ಮನ್ನು ರಾಜಕೀಯವಾಗಿ ಮುಗಿಸಲು ದಾಳಿ ಮಾಡಿದರು ಎಂಬ ಆರೋಪದ ನಡುವೆಯೂ ಈ ದಾಳಿಯ ಬಳಿಕ ಮುನಿಯಾಲ್ ಅವರು ಕಾಂಗ್ರೆಸ್ಗಿಂತಲೂ ಸಚಿವ ಸುನಿಲ್ ಕುಮಾರ್ ಅವರ ಜೊತೆಗೆ ಆತ್ಮೀಯತೆ ಹೆಚ್ಚಿಸಿಕೊಂಡಿದ್ದು ಕಾರ್ಕಳದಲ್ಲಿ ಅಚ್ಚರಿ ಮೂಡಿಸಿತ್ತು.
ಬಿಜೆಪಿ ಸರ್ಕಾರದ ವಿರುದ್ಧ ಶೇಕಡಾ 40ರಷ್ಟು ಕಮಿಷನ್ ಆರೋಪ ಬಂದಾಗ ಸುದ್ದಿಗೋಷ್ಠಿ ನಡೆಸಿದ್ದ ಮುನಿಯಾಲ್ ಅವರು ಉಡುಪಿ ಜಿಲ್ಲೆಯಲ್ಲಿ ಅಂಥದ್ದೇನು ಇಲ್ಲ ಎನ್ನುವ ಮೂಲಕ ಬಿಜೆಪಿ ಸರ್ಕಾರದ ಪರವಾಗಿ ವಕಾಲತ್ತು ವಹಿಸಿದ್ದರು.
6. ಉದ್ಯಮದ ಕಾರಣದಿಂದ ಮುನಿಯಾಲ್ ಹಿಂಜರಿಕೆ:
ಸಚಿವ ಸುನಿಲ್ ಕುಮಾರ್ ಅಥವಾ ಕ್ಷೇತ್ರದಲ್ಲಿ ಬಿಜೆಪಿಯ ವಿರುದ್ಧ ಪ್ರಬಲ ಸ್ಪರ್ಧೆ ಕೊಡುವುದಕ್ಕೆ ಸದ್ಯದ ಸನ್ನಿವೇಶದಲ್ಲಿ ಮುನಿಯಾಲ್ ಅವರು ಸಿದ್ಧರಿಲ್ಲ. ಒಂದು ವೇಳೆ ಬಿಜೆಪಿಯನ್ನು ಎದುರು ಹಾಕಿಕೊಂಡರೆ ಗುತ್ತಿಗೆದಾರರಾಗಿರುವ ತಮ್ಮ ಉದ್ಯಮಕ್ಕೆ ಹಿನ್ನಡೆ ಆಗಬಹುದು ಎಂಬ ಆತಂಕ ಮುನಿಯಾಲ್ ಅವರದ್ದು.
7. ಬಿಜೆಪಿ ಶಾಸಕರ ಆಪ್ತ ಉದ್ಯಮಿಯ ಜೊತೆಗೆ ನಂಟು:
ಇತ್ತ ದಕ್ಷಿಣ ಕನ್ನಡದ ಪ್ರಭಾವಿ ಬಿಜೆಪಿ ಶಾಸಕರೊಬ್ಬರ ಆಪ್ತ ಉದ್ಯಮಿಗೂ ಮುನಿಯಾಲ್ ಅವರಿಗೂ ನಿರಂತರ ಸಂಪರ್ಕ ಕಾರಣ ಮುನಿಯಾಲ್ ಅವರ ರಾಜಕೀಯ ನಡೆಗಳು ಅನುಮಾನಕ್ಕೆ ಕಾರಣವಾಗಿದೆ.
8. ಕೊನೆ ಕ್ಷಣದಲ್ಲಿ ಕೈ ಕೊಟ್ಟರೆಂಬ ಆತಂಕ:
ಮುನಿಯಾಲ್ ಅವರಿಗೆ ಕಾಂಗ್ರೆಸ್ ಟಿಕೆಟ್ನ ಆಫರ್ ಕೊಟ್ಟಿರುವುದು ನಿಜ. ಆದರೆ ಕಾಂಗ್ರೆಸ್ಗೆ ಕಾಡ್ತಿರುವ ದೊಡ್ಡ ಆತಂಕ ಕೊನೆ ಕ್ಷಣದಲ್ಲಿ ಚುನಾವಣೆಯಲ್ಲಿ ಮುನಿಯಾಲ್ ಸುನಿಲ್ ಕುಮಾರ್ ಅವರ ನಿಂತರೆ ಕಥೆ ಏನು ಎನ್ನುವುದು. ಕಾರ್ಕಳ ಕಾಂಗ್ರೆಸ್ನಲ್ಲಿ ಕಾರ್ಯಕರ್ತರು ಮತ್ತು ನಾಯಕರು ಇದೇ ಮಾತುಗಳನ್ನಾಡುತ್ತಿದ್ದಾರೆ.
9. ರಾಜಕೀಯ ನಿಷ್ಠೆಯ ಕೊರತೆ:
ರಾಜಕೀಯ ಆಕಾಂಕ್ಷೆಯನ್ನು ಹೊಂದಿರುವ ಮುನಿಯಾಲ್ ಅವರಿಗೆ ರಾಜಕಾರಣಿಗೆ ಇರಬೇಕಾದ ದೀರ್ಘಕಾಲದ ರಾಜಕೀಯ ನಿಷ್ಠೆ ಮತ್ತು ಸ್ಪಷ್ಟತೆ ಇಲ್ಲದೇ ಇರುವುದು ಅವರ ಹಿನ್ನಡೆಗೆ ಕಾರಣವಾಗಬಹುದು.
ಕಳೆದ ಬಾರಿ ಟಿಕೆಟ್ ಕೈ ತಪ್ಪಿದಾಗ ಬಹಿರಂಗವಾಗಿಯೇ ಅಸಮಾಧಾನಗೊಂಡು ಪ್ರತಿಭಟಿಸಿದ್ದ ಮುನಿಯಾಲ್ ಆ ಬಳಿಕ ಕಾರ್ಕಳದಲ್ಲಿ ಕಾಂಗ್ರೆಸ್ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳಲಿಲ್ಲ ಮತ್ತು ಬಿಜೆಪಿ ಸೇರುವ ಪ್ರಯತ್ನವನ್ನೂ ಮಾಡಿದ್ದರು. ಕರೆದು ಟಿಕೆಟ್ ಕೊಡುತ್ತಾರೆ ಎಂಬ ಭಾವನೆ ಮುನಿಯಾಲ್ ಅವರಿಗೆ ರಾಜಕೀಯ ನಿಷ್ಠೆ ಮತ್ತು ಬದ್ಧತೆಯ ಕೊರತೆಯನ್ನು ಬಿಂಬಿಸುತ್ತಿದೆ ಎನ್ನುವುದು ಕಾರ್ಕಳ ಕಾಂಗ್ರೆಸ್ ಕಾರ್ಯಕರ್ತರ ಅಭಿಪ್ರಾಯ.
10. ಕಾಂಗ್ರೆಸ್ ನಾಯಕ ಎಂದು ಗುರುತಿಸಿಕೊಳ್ಳಲೂ ಹಿಂದೇಟು:
ಐದು ವರ್ಷಗಳಲ್ಲಿ ಮುನಿಯಾಲ್ ಅವರು ತಾವು ಹೊರಡಿಸಿರುವ ಪೋಸ್ಟರ್ಗಳಲ್ಲಿ ಎಲ್ಲೂ ಕೂಡಾ ತಾವು ಕಾಂಗ್ರೆಸ್ ಮುಖಂಡರೆಂದಾಗಲೀ, ಕಾಂಗ್ರೆಸ್ ಪದಾಧಿಕಾರಿ ಎಂದಾಗಲೀ ಗುರುತಿಸಿಕೊಂಡಿಲ್ಲ.
11. ಕಾಂಗ್ರೆಸ್ ಮತಗಳೇ ದೂರ ಆಗಬಹುದು ಆತಂಕ:
ಮುನಿಯಾಲ್ ಅವರಿಗೆ ಟಿಕೆಟ್ ಕೊಟ್ಟರೆ ಕಾಂಗ್ರೆಸ್ನ ನಿಷ್ಠ ಮತಗಳೂ ಕಾಂಗ್ರೆಸ್ನಿಂದ ದೂರವಾಗಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ಪಾಲಾಗಬಹುದು ಎನ್ನುವ ಆತಂಕವೂ ಕಾಂಗ್ರೆಸ್ನ್ನು ಕಾಡುತ್ತಿದೆ.
ಅನುಕಂಪ ಗಿಟ್ಟಿಸಿಕೊಳ್ಳುವ ಪ್ರಯತ್ನ:
ಕಾಂಗ್ರೆಸ್ನಿಂದಲೇ ದೂರ ಇರುವ ಮುನಿಯಾಲ್ ಅವರು ಕಳೆದ ಬಾರಿಯಂತೆ ಈ ಬಾರಿಯೂ ಅನುಕಂಪಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂಬುದು ಕಾರ್ಕಳ ಕಾಂಗ್ರೆಸ್ಸಿಗರ ಮಾತು.
ಒಂದು ವೇಳೆ ಕಾಂಗ್ರೆಸ್ ಟಿಕೆಟ್ ಬೇಕಾಗಿದ್ದಲ್ಲಿ ಕಾಂಗ್ರೆಸ್ ಮೂರು ಬಾರಿ ಕೇಳಿರುವಾಗ ಇಷ್ಟೊತ್ತಿಗೆ ಮುನಿಯಾಲ್ ಅವರು ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ಮುಂಚೂಣಿಯಲ್ಲಿರುತ್ತಿದ್ದರು. ಆದರೆ ಇದುವರೆಗೆ ಮುನಿಯಾಲ್ ಪಕ್ಷ ಸಂಘಟನೆಯಲ್ಲಿ ಗುರುತಿಸಿಕೊಂಡಿಲ್ಲ.
ಆದರೆ ಈ ಬಾರಿಯೂ ಟಿಕೆಟ್ ಕೈ ತಪ್ಪಿದರೆ ಕಾಂಗ್ರೆಸ್ನಿಂದಲೇ ಎಂಬ ಅನುಕಂಪ ಸೃಷ್ಟಿಸುವ ಪ್ರಯತ್ನವನ್ನು ಮುನಿಯಾಲ್ ಅವರು ಮಾಡುತ್ತಿದ್ದಾರೆ ಎಂಬುದು ಕಾರ್ಕಳ ಕಾಂಗ್ರಸ್ಸಿಗರ ಮಾತು.
ADVERTISEMENT
ADVERTISEMENT