ಬಸವರಾಜ ಬೊಮ್ಮಾಯಿ (Basavaraj Bommai) ಅವರು ಮುಖ್ಯಮಂತ್ರಿ ಆದ ಬಳಿಕ ಕರ್ನಾಟಕ ರಾಜಕೀಯದಲ್ಲಿ ಭಾರೀ ಸದ್ದು ಮಾಡಿದ್ದ ಬಿಟ್ಕಾಯಿನ್ ಹಗರಣ (Bit Coin Scam) ಸಂಬಂಧ ವಿಶೇಷ ತನಿಖಾ ತಂಡ (SIT) ಈ ಹಿಂದೆ ಹಗರಣದ ತನಿಖೆ ಮಾಡಿದ್ದ ಬೆಂಗಳೂರು ನಗರದ ಅಪರಾಧ ಪತ್ತೆ ದಳ (Bengaluru CCB) ಪೊಲೀಸ್ ಅಧಿಕಾರಿಗಳ ತಂಡದ ವಿರುದ್ಧವೇ ಎಫ್ಐಆರ್ (FIR) ದಾಖಲಿಸಿದೆ.
ಆಗಸ್ಟ್ 9ರಂದು ಬೆಂಗಳೂರು ನಗರದ ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ಸಿಐಡಿ (CID) ಡಿವೈಎಸ್ಪಿ ಕೆ ರವಿಶಂಕರ್ ಅವರು ನೀಡಿದ ದೂರಿನ ಮೇರೆ ಎಫ್ಐಆರ್ ದಾಖಲಿಸಲಾಗಿದೆ.
ಐಪಿಸಿ ಕಲಂ 204, 120ಬಿ, 409 ಮತ್ತು 426 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಅಪರಾಧ ನಡೆದ ದಿನವನ್ನು ನವೆಂಬರ್ 9,2020ರಿಂದ ಡಿಸೆಂಬರ್ 16,2020ರವರೆಗೆ ಎಂದು ಎಫ್ಐಆರ್ನಲ್ಲಿ ದಾಖಲಿಸಲಾಗಿದೆ. ಕಾಟನ್ಪೇಟೆಯಲ್ಲಿರುವ ಸಿಸಿಬಿ ಕಚೇರಿಯಲ್ಲಿ ಕೃತ್ಯ ನಡೆದಿದೆ ಎಂದು ಎಫ್ಐಆರ್ನಲ್ಲಿ ಹೇಳಲಾಗಿದೆ.
ವಿಧಿವಿಜ್ಞಾನ ಪ್ರಯೋಗಾಲದ ವರದಿ ಜುಲೈ 19ರಂದು ಲಭ್ಯವಾದ ಹಿನ್ನೆಲೆಯಲ್ಲಿ ಮತ್ತು ಆ ವರದಿಯಲ್ಲಿನ ಅಂಶಗಳನ್ನು ಅಪರಾಧಿಕ ಕೃತ್ಯ ಜರುಗಿರುವುದನ್ನು ಖಾತ್ರಿಪಡಿಸಿಕೊಂಡು ದೂರು ನೀಡಲು ವಿಳಂಬವಾಗಿರುತ್ತದೆ ಎಂದು ಎಫ್ಐಆರ್ನಲ್ಲಿ ಹೇಳಲಾಗಿದೆ.
ಜುಲೈ 18ರಂದು ಸಿಐಡಿಯಲ್ಲೇ ಇರುವ ವಿಶೇಷ ತನಿಖಾ ತಂಡ ಬಿಟ್ಕಾಯಿನ್ ಹಗರಣದ ತನಿಖೆಯನ್ನು ಕೈಗೆತ್ತಿಕೊಂಡಿತ್ತು. ಎರಡು ಮ್ಯಾಕ್ಬುಕ್ಸ್, ಪೆನ್ಡ್ರೈವ್ಗಳು, ಒಂದು ಹಾರ್ಡ್ ಡಿಸ್ಕ್ ಮತ್ತು ಹಲವು ದಾಖಲಾತಿಗಳನ್ನು ಎಸ್ಐಟಿ ವಶಕ್ಕೆ ಪಡೆದಿತ್ತು.
ಕಳೆದ ತಿಂಗಳ ಜುಲೈ 23 ಲಭ್ಯವಾದ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯನ್ನು ಆಧರಿಸಿ ಎಫ್ಐಆರ್ ದಾಖಲಿಸಲಾಗಿದೆ. 2020ರ ನವೆಂಬರ್ 9ರಿಂದ ಡಿಸೆಂಬರ್ 16ರವರೆಗೆ ಸಿಸಿಬಿಯಲ್ಲಿನ ಪೊಲೀಸ್ ಅಧಿಕಾರಿಗಳೇ ಹಗರಣದ ಆರೋಪಿಯನ್ನು ರಕ್ಷಿಸುವ ಸಲುವಾಗಿ ಸಿಸಿಬಿ ಕಚೇರಿ ಮತ್ತು ಹಲವು ಕಡೆಗಳಲ್ಲಿ ತಾವೇ ಸಾಕ್ಷ್ಯಗಳನ್ನು ಇರಿಸಿ ಕ್ರಿಮಿನಲ್ ಒಳಸಂಚು ಮಾಡಿದ್ದಾರೆ ಎಂದು ಎಫ್ಐಆರ್ನಲ್ಲಿ ಆರೋಪಿಸಲಾಗಿದೆ.
ADVERTISEMENT
ADVERTISEMENT