ಕೊಡಗಿನಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಮೇಲೆ ಮೊಟ್ಟೆ ಎಸೆದ ಪ್ರಕರಣದಲ್ಲಿ ಬಿಜೆಪಿಯೇ ಹೊಸ ನಾಟಕ ಶುರು ಮಾಡಿತಾ ಎನ್ನುವ ಪ್ರಶ್ನೆಗಳು ಬಿಜೆಪಿಯ ಇತ್ತೀಚಿನ ನಡೆಗಳಿಂದ ಮೂಡಿಬರುತ್ತಿವೆ.
ಮಾಜಿ ಸಿಎಂ ಹಾಗೂ ಪ್ರಸ್ತುತ ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯನವರು ಕೊಡಗಿನ ಮಡಿಕೇರಿಗೆ ನೆರೆಯಿಂದ ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆಗೆ ತೆರಳಿದ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಸಿದ್ದರಾಮಯ್ಯನವರ ಭೇಟಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದರು. ಇದರಲ್ಲಿದ್ದ ಸಂಪತ್ ಎಂಬ ಬಿಜೆಪಿ ಕಾರ್ಯಕರ್ತ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟ ಎಸೆದಿದ್ದ.
ಕೂಡಲೇ ಕಾರ್ಯಪ್ರವೃತ್ತರಾಗಿದ್ದ ಪೊಲೀಸರು ವಿರೋಧ ಪಕ್ಷದನಾಯಕನ ಮೇಲೆ ಮೊಟ್ಟೆ ಎಸೆದ ಸಂಪತ್ ಕುಮಾರ್ ಎನ್ನುವ ವ್ಯಕ್ತಿ ಸೇರಿದಂತೆ 8 ಜನರನ್ನು ಬಂಧಿಸಿದ್ದರು. ಆದರೆ, ಅಂದೇ ರಾತ್ರಿ ಠಾಣೆಗೆ ಧಾವಿಸಿ ಬಂದಿದ್ದ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಆರೋಪಿಗಳಿಗೆ ಜಾಮೀನು ನೀಡಿ ಬಿಡಿಸಿಕೊಂಡು ಹೋಗಿದ್ದರು. ಮರುದಿನ ಆತ ನಮ್ಮ ಕಾರ್ಯಕರ್ತ ಅಲ್ಲ ಎಂಬ ಹೇಳಿಕೆಯನ್ನೂ ನೀಡಿದ್ದರು.
ಆದರೆ, ಇಂದು ಏಕಾಏಕಿ ಮಾಧ್ಯಮದ ಮುಂದೆ ಬಂದಿದ್ದ ಆರೋಪಿ ಸಂಪತ್ ಕುಮಾರ್, ನಾನು ಕಾಂಗ್ರೆಸ್ ಕಾರ್ಯಕರ್ತ. ಸಿದ್ದರಾಮಯ್ಯನವರ ಹಿಂದೂ ವಿರೋಧಿ ಹೇಳಿಕೆಗಳಿಂದ ಬೇಸತ್ತು ಈ ಕೆಲಸ ಮಾಡಿದೆ ಎಂದು ಹೇಳಿಕೆ ನೀಡಿದ್ದ. ಈ ಬೆನ್ನಲ್ಲೇ, ಕಾಂಗ್ರೆಸ್ ಹಾಗೂ ಬಿಜೆಪಿಯ ನಡುವೆ ತೀವ್ರ ವಾಕ್ಸಮರ ನಡೆಯುತ್ತಿದೆ.
ಈ ಮಧ್ಯೆ ಬಿಜೆಪಿಯೇ ತಮ್ಮದೇ ಕಾರ್ಯಕರ್ತ ಹಾಗೂ ಯುವ ಮೋರ್ಚಾದ ಸದಸ್ಯನಾಗಿರುವ ವ್ಯಕ್ತಿಯನ್ನು ಕಾಂಗ್ರೆಸ್ ಕಾರ್ಯಕರ್ತ ಎಂದು ಕರೆಯುವ ಮೂಲಕ ಹೊಸ ನಾಟಕ ಶುರುಮಾಡಿತ್ತಾ ಎನ್ನುವ ಪ್ರಶ್ನೆಗಳು ಮೂಡಿಬಂದಿದೆ. ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳುವಂತೆ ಬಿಜೆಪಿ ಕಾರ್ಯಕರ್ತರೇ ಆರೋಪಿ ಸಂಪತ್ಕುಮಾರ್ಗೆ ಒತ್ತಡ ಹಾಕಿದ್ದರು ಎಂಬ ಮಾಹಿತಿ ಪ್ರತಿಕ್ಷಣ ನ್ಯೂಸ್ಗೆ ತಿಳಿದುಬಂದಿದೆ.
ಆರೋಪಿ ಸಂಪತ್ ಕುಮಾರ್ ಆರ್ಎಸ್ಎಸ್ ಹಾಗೂ ಬಿಜೆಪಿ ಕಾರ್ಯಕರ್ತ ಎನ್ನುವುದಕ್ಕೆ ಸಾಕ್ಷಿಯಾಗಿ ಕಾಂಗ್ರೆಸ್ ಹಲವು ಫೋಟೋಗಳನ್ನು ಬಿಡುಗಡೆ ಮಾಡಿವೆ. ಅಲ್ಲದೇ, ಕೊಡಗಿನ ಕಾಂಗ್ರೆಸ್ ಘಟಕ ಸಂಪತ್ ಕುಮಾರ್ ತಮ್ಮ ಕಾರ್ಯಕರ್ತ ಅಲ್ಲ ಎಂದು ಸುದ್ದಿಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದಾರೆ.
ಇಂದು ಈ ಬಗ್ಗೆ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಸಿದ್ದರಾಮಯ್ಯನವರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಅವರು, ಮೊಟ್ಟೆ ಎಸೆದ ವ್ಯಕ್ತಿ ಕಾಂಗ್ರೆಸ್ ಕಾರ್ಯಕರ್ತನಾಗಿದ್ದರೆ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ರಾತೋರಾತ್ರಿ ಪೊಲೀಸ್ ಠಾಣೆಗೆ ಹೋಗಿ ಬಿಡಿಸಿಕೊಂಡು ಯಾಕೆ ಬರಬೇಕಾಗಿತ್ತು? ಕಾಂಗ್ರೆಸ್ನವನೆಂದು ಹೇಳಿಕೊಂಡರೆ ಮಾತ್ರ ಪೊಲೀಸರಿಂದ ಬಿಡಿಸ್ತೇನೆ ಎಂದು ಷರತ್ತು ಹಾಕಿ ಬಿಡುಗಡೆ ಮಾಡಿದಿರಾ?
‘ಆಪರೇಷನ್ ಕಮಲ’ ಎಂದರೆ ಶಾಸಕರಿಗೆ ಮಾತ್ರ ಎಂದು ತಿಳಿದುಕೊಂಡಿದ್ದೆವು. ಈಗ ಬೀದಿ ಪುಂಡರ ‘ಆಪರೇಷನ್ ಕಮಲ’ ಕೂಡಾ ಬಿಜೆಪಿ ನಡೆಸುತ್ತದೆ ಎಂದು ಮಡಿಕೇರಿಯಲ್ಲಿ ಸಾಬೀತಾಗಿದೆ.
ಬಿಜೆಪಿಯ ಇಂತಹ ನಾಟಕಗಳೆಲ್ಲ ಹಳತಾಗಿದೆ. ಮೊಟ್ಟೆ ಎಸೆದವ ಕಾಂಗ್ರೆಸ್ ಪಕ್ಷದವನಾಗಿದ್ದರೆ ಅವನನ್ನು ಮೊದಲು ಜೈಲಿಗೆ ಕಳಿಸಿ. ನಿಮಗ್ಯಾಕೆ ಅವನ ಹಿತರಕ್ಷಣೆಯ ಉಸಾಬರಿ ಎಂದು ಸಿದ್ದರಾಮಯ್ಯನವರು ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.