ಮಂಗಳೂರು: ಕರಾವಳಿ ಬಿಜೆಪಿಯ ಭದ್ರಕೋಟೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಕಾಂಗ್ರೆಸ್ ಹಿಡಿತದಿಂದ ತಪ್ಪಿ ಹಲವು ವರ್ಷಗಳೇ ಕಳೆದಿವೆ. ಸದ್ಯ, ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ನಳಿನ್ ಕುಮಾರ್ ಕಟೀಲ್ ಸಂಸದರಾಗಿರುವ ದಕ್ಷಿಣ ಕನ್ನಡದಲ್ಲಿ ಹೊಸ ಮುಖವನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ನೋಡುವುದಾದರೆ, ಕ್ಯಾಪ್ಟನ್ ಬ್ರಿಜೇಶ್ ಚೌಟಾ ಅವರು ಬಿಜೆಪಿ ಟಿಕೆಟ್ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ನಳಿನ್ ಕುಮಾರ್ ಕಟೀಲ್ ಅವರು ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದಾರೆ. ಆದರೆ ಈ ಬಾರಿ ಅವರಿಗೆ ಟಿಕೇಟ್ ಕೈ ತಪ್ಪುವ ಸಾಧ್ಯೆತೆ ಇದೆ ಎನ್ನಲಾಗುತ್ತಿದೆ. ಕರಾವಳಿ ಬಿಜೆಪಿ ಕಾರ್ಯಕರ್ತರು ಹಾಗೂ ಸಂಘಟನೆ ಕಾರ್ಯಕರ್ತರು ಕಟೀಲ್ ಮೇಲೆ ಒಲವು ಹೊಂದಿಲ್ಲ. ಕಾರ್ಯಕರ್ತರ ಅಭಿಪ್ರಾಯವನ್ನು ಕಡೆಗಣಿಸಿ ಕಟೀಲ್ಗೆ ಟಿಕೆಟ್ ನೀಡಿದರೆ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಲ್ಲಾದ ಬಂಡಾಯದ ಬಿಸಿ ಲೋಕಸಭಾ ಚುನಾವಣೆಯಲ್ಲಿ ಮರುಕಳಿಸುವ ಸಾಧ್ಯತೆ ಇದೆ.
ಬಿಜೆಪಿ ಭದ್ರಕೋಟೆಯಲ್ಲಿ ವ್ಯಕ್ತಿಗಿಂತ ಪಕ್ಷದ ಶಕ್ತಿಯೇ ದೊಡ್ಡದು. ಯಾರನ್ನೇ ನಿಲ್ಲಿಸಿದರೂ ಗೆಲುವು ನಿಶ್ಚಿತ ಅನ್ನೋ ವಿಶ್ವಾಸ ಬಿಜೆಪಿ ನಾಯಕರಲ್ಲಿದೆ. ಹೀಗಾಗಿಯೇ ಈ ಬಾರಿ ಅಭ್ಯರ್ಥಿ ಬದಲಾವಣೆ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಸಾಕಷ್ಟು ಮುಖಂಡರುಗಳು ಟಿಕೆಟ್ ಲಾಬಿ ಮಾಡಲಾರಂಭಿಸಿದ್ದಾರೆ. ಬ್ರಿಜೇಶ್ ಚೌಟಾ ಅವರು ಟಿಕೆಟ್ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ.
ಬ್ರಿಜೇಶ್ ಚೌಟಾ ಅವರು ಕಳೆದ ಬಾರಿ ಕೂಡ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ನ ಪ್ರಭಲ ಆಕಾಂಕ್ಷಿಯಗಿದ್ದರು. ಆರ್ಎಸ್ಎಸ್ ಹಿನ್ನೆಲೆಯುಳ್ಳ ಚೌಟಾ ಅವರು ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಸಂಘ ಪರಿವಾರದ ರಾಷ್ಟ್ರೀಯ ಪ್ರಮುಖರೊಂದಿಗೆ ನಿಖಟ ಸಂಪರ್ಕವೂ ಹೊಂದಿದ್ದಾರೆ. ಇತ್ತ ಕಾರ್ಯಕರ್ತರ ಒಲವು ಇಲ್ಲದಿದ್ದರೂ ನಳಿನ್ ಕುಮಾರ್ ಕಟೀಲ್ ಅವರ ಬೆನ್ನಿಗೆ ಬಿ.ಎಲ್.ಸಂತೋಷ್ ನಿಂತಿದ್ದಾರೆ.