ಜೂನ್ 10 ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಗೆ ಬಿಜೆಪಿ ತಡರಾತ್ರಿ ಎರಡನೇ ಪಟ್ಟಿ ಪ್ರಕಟಿಸಿದೆ. ಮತ್ತೆ ನಾಲ್ವರು ಅಭ್ಯರ್ಥಿಗಳನ್ನು ಘೋಷಿಸಿದ್ದು, ನೀರಿಕ್ಷೆಯಂತೆ ಕರ್ನಾಟಕದಿಂದ ಮೂರನೇ ಅಭ್ಯರ್ಥಿಯಾಗಿ ಉದ್ಯಮಿ, ಪರಿಷತ್ ಸದಸ್ಯ ಲೆಹರ್ ಸಿಂಗ್ ಸಿರೋಯ್ ಅವರನ್ನು ಕಣಕ್ಕಿಳಿಸಿದೆ. ಈ ಮೂಲಕ ರಾಜ್ಯ ರಾಜಕೀಯವನ್ನು ಬಿಸಿಯೇರುವಂತೆ ಮಾಡಿದೆ.
ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾದ ಇಂದು ಬಿಜೆಪಿಯ ಉಮೇದುವಾರರಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ನಟ ಜಗ್ಗೇಶ್ ಮತ್ತು ಮೂರನೇ ಅಭ್ಯರ್ಥಿಯಾದ ಲೆಹರ್ ಸಿಂಗ್ ಸಿರೋಯ್ ನಾಮಪತ್ರ ಸಲ್ಲಿಸಲಿದ್ದಾರೆ.
ಈಗಾಗಲೇ ಕಾಂಗ್ರೆಸ್ ಪಕ್ಷದ ವತಿಯಿಂದ ಜೈರಾಮ್ ರಮೇಶ್ ಮತ್ತು ಮನ್ಸೂರ್ ಖಾನ್ ನಾಮಪತ್ರ ಸಲ್ಲಿಸಿದ್ದಾರೆ. ಈಗ ಜೆಡಿಎಸ್ ನಡೆ ಕುತೂಹಲ ಮೂಡಿಸಿದೆ. ಉದ್ಯಮಿ ಕುಪೇಂದ್ರ ರೆಡ್ಡಿಗೆ ಟಿಕೆಟ್ ನೀಡುತ್ತಾ? ಅಥವಾ ಬೇರೆಯದ್ದೇ ರಣತಂತ್ರ ಹೆಣೆಯುತ್ತಾ? ಎಂಬ ವಿಚಾರ ಕುತೂಹಲ ಮೂಡಿಸಿದೆ.
ವಿಧಾಸಭೆಯ ಬಲಾಬಲದ ಪ್ರಕಾರ, ರಾಜ್ಯಸಭೆಯ ನಾಲ್ಕು ಸ್ಥಾನಗಳ ಪೈಕಿ ಎರಡು ಸ್ಥಾನಗಳನ್ನು ಬಿಜೆಪಿ, ಒಂದು ಸ್ಥಾನವನ್ನು ಕಾಂಗ್ರೆಸ್ ಸುಲಭವಾಗಿ ಗೆಲ್ಲಲಿದೆ. ಉಳಿದ ಒಂದು ಸ್ಥಾನಕ್ಕಾಗಿ ಒಂದು ಪಕ್ಷ ಇನ್ನೊಂದು ಪಕ್ಷವನ್ನು ಅವಲಂಬಿಸಲೇಬೇಕಿದೆ. 32 ಸದಸ್ಯ ಬಲದ ಜೆಡಿಎಸ್ ಗೆ ಈ ಸ್ಥಾನ ದಕ್ಕಬಾರದು ಎಂಬ ಸಿದ್ದರಾಮಯ್ಯ ಒತ್ತಾಸೆಯ ಕಾರಣದಿಂದ ಕಾಂಗ್ರೆಸ್ ಎರಡನೇ ಅಭ್ಯರ್ಥಿಯನ್ನು ಕಾಣಕ್ಕಿಳಿಸಿದೆ. ಇದು ಜೆಡಿಎಸ್ ಲೆಕ್ಕಾಚಾರವನ್ನೇ ಉಲ್ಟಾ ಮಾಡಿದೆ.
ರಾಜ್ಯಸಭೆ ಚುನಾವಣೆ ಲೆಕ್ಕಾಚಾರ ಏನು?
# ಯಾವುದೇ ಅಭ್ಯರ್ಥಿ ಗೆಲ್ಲಲು 45 ಮತ ಅಗತ್ಯ
# ಪಕ್ಷೇತರರ ಬೆಂಬಲ ಸೇರಿ ಬಿಜೆಪಿ ಬಲ -122
# ಮೊದಲ ಎರಡು ಅಭ್ಯರ್ಥಿಗಳಿಗೆ ತಲಾ 46 ಮತ ಚಲಾವಣೆಗೆ ಬಿಜೆಪಿ ನಿರ್ಧಾರ
# ಬಿಜೆಪಿ ಬಳಿ ಹೆಚ್ಚುವರಿಯಾಗಿ 30 ಮತ ಇರಲಿದ್ದು, ಲೆಹರ್ ಸಿಂಗ್ ಗೆಲುವಿಗೆ 15 ಮತ ಅಗತ್ಯ
# ಶರತ್ ಬಚ್ಚೆಗೌಡ ಬೆಂಬಲ ಸೇರಿ ಕಾಂಗ್ರೆಸ್ ಬಲ 70
# ಮೊದಲ ಅಭ್ಯರ್ಥಿ ಜೈರಾಂ ರಮೇಶ್ ಪರ ಕನಿಷ್ಠ 46 ಮತ ಚಲಾವಣೆಗೆ ಕಾಂಗ್ರೆಸ್ ನಿರ್ಧಾರ
# ಕಾಂಗ್ರೆಸ್ ಬಳಿ ಹೆಚ್ಚುವರಿಯಾಗಿ 24 ಮತ ಇರಲಿವೆ. ಮನ್ಸೂರ್ ಗೆಲುವಿಗೆ 21 ಮತ ಅಗತ್ಯ ಬೀಳಲಿದೆ.
# ಜೆಡಿಎಸ್ ಸದಸ್ಯ ಬಲ 32.. ಸ್ವಂತ ಬಲದ ಮೇಲೆ ಅಭ್ಯರ್ಥಿ ಗೆಲ್ಲಲು ಸಾಧ್ಯವಿಲ್ಲ. ಗೆಲುವಿಗೆ 13 ಮತಗಳ ಕೊರತೆ ಬೀಳಲಿದೆ
# ಜೆಡಿಎಸ್ ಕೂಡಾ ಅಭ್ಯರ್ಥಿ ಇಳಿಸಿದಲ್ಲಿ, ಈ ಚುನಾವಣೆಯಲ್ಲಿ ಅಡ್ಡ ಮತದಾನ ನಡೆಯುವುದು ಖಚಿತ.
# ಶಾಸಕರ ಕುದುರೆ ವ್ಯಾಪಾರ ಕೂಡಾ ನಡೆಯಬಹುದು.
# ಯಾರಿಗೆ ಶಾಸಕರ ಮತ ಸೆಳೆಯುವ ಶಕ್ತಿ ಇರಲಿದೆಯೋ ಆ ಅಭ್ಯರ್ಥಿ ಗೆಲ್ಲಲಿದ್ದಾರೆ.