2019ರಿಂದ ಮೂರು ವರ್ಷ 10 ತಿಂಗಳು ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ತಾನು ಘೋಷಿಸಿದ್ದ ಕಾಮಗಾರಿಗಳಿಗೆ ಬರೋಬ್ಬರೀ 2 ಲಕ್ಷದ 50 ಸಾವಿರ ಕೋಟಿ ರೂಪಾಯಿ ಮೊತ್ತದ ಅನುದಾನವನ್ನು ಬಾಕಿ ಉಳಿಸಿಕೊಂಡಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ರಾಜ್ಯದ ಅರ್ಥವ್ಯವಸ್ಥೆಯು ಹಿಂದಿನ ಸರ್ಕಾರದ ಅವಧಿಯಲ್ಲಿ ಹದಗೆಟ್ಟಿರುತ್ತದೆ. ಕೇಂದ್ರ ಸಾಂಖ್ಯಿಕ ಕಛೇರಿಯು ಬಿಡುಗಡೆ ಮಾಡಿರುವ ಮುಂಗಡ ಅಂದಾಜುಗಳ ಪ್ರಕಾರ ರಾಜ್ಯದ ಜಿ.ಎಸ್.ಡಿ.ಪಿ ಯು 2022-23ರಲ್ಲಿ ಶೇ. 7.9 ರಷ್ಟು ಬೆಳವಣಿಗೆ ದಾಖಲಿಸಿದೆ. 2021-22 ರಲ್ಲಿ ರಾಜ್ಯದ ಜಿ.ಎಸ್.ಡಿ.ಪಿ ಬೆಳವಣಿಗೆಯು ಶೇ.11 ರಷ್ಟು ದಾಖಲಾಗಿತ್ತು.
2022-23ರ ವಲಯವಾರು ಬೆಳವಣಿಗೆಯನ್ನು ಗಮನಿಸಿದರೆ, ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯಗಳಲ್ಲಿನ ಬೆಳವಣಿಗೆಯು ಶೇ. 5.5, 5.1 ಮತ್ತು 9.2 ರಷ್ಟು ಬೆಳವಣಿಗೆಯನ್ನು ದಾಖಲಿಸಿರುತ್ತದೆ.
ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಅಂದರೆ, 2013-14 ರಿಂದ 2017-18ರವರೆಗೆ ಕೈಗಾರಿಕಾ ವಲಯದಲ್ಲಿ ಶೇ. 8.70 ರಷ್ಟು ಬೆಳವಣಿಗೆ (CAGR) ಹಾಗೂ ಸೇವಾ ವಲಯದಲ್ಲಿ ಶೇ. 9.69 ರಷ್ಟು ಬೆಳವಣಿಗೆ (CAGR) ದಾಖಲಾಗಿರುತ್ತದೆ. ಆದರೆ, 2019-20 ರಿಂದ 2022-23ರ ವರೆಗೆ ಕೈಗಾರಿಕಾ ವಲಯದಲ್ಲಿ ಶೇ. 3.86 ರಷ್ಟು ಬೆಳವಣಿಗೆ (CAGR) ಹಾಗೂ ಸೇವಾ ವಲಯದಲ್ಲಿ ಶೇ. 4.25 ರಷ್ಟು ಬೆಳವಣಿಗೆ (CAGR) ದಾಖಲಾಗಿದ್ದು, ಇದು ಕೋವಿಡ್ನಿಂದ ತತ್ತರಿಸಿದ ರಾಜ್ಯದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಈ ಹಿಂದಿದ್ದ ಸರ್ಕಾರವು ವಿಫಲವಾಗಿರುವುದನ್ನು ಎತ್ತಿ ತೋರಿಸುತ್ತದೆ.
2022-23ರಲ್ಲಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮತ್ತು ತೈಲ ಬೆಲೆಯ ಏರಿಕೆಯನ್ನು ತಡೆಯುವಲ್ಲಿ ಕೇಂದ್ರ ಸರ್ಕಾರವು ವಿಫಲವಾಗಿದೆ. ತೀವ್ರ ಹಣದುಬ್ಬರದಿಂದ ಜನ ಸಾಮಾನ್ಯರು ಕಂಗಾಲಾಗಿದ್ದು, ಅವರನ್ನು ಇಂತಹ ಪ್ರತಿಕೂಲ ವಾತಾವರಣದಿಂದ ರಕ್ಷಿಸುವುದೇ ನಮ್ಮ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಗೆ ಪ್ರೇರಣೆಯಾಗಿದೆ.
2021-22 ರಲ್ಲಿ ರಾಜ್ಯಕ್ಕೆ 22 ಬಿಲಿಯನ್ ಡಾಲರ್ ವಿದೇಶಿ ಬಂಡವಾಳ ಹೂಡಿಕೆ ಹರಿದು ಬಂದಿದ್ದು, 2022-23ರಲ್ಲಿ ಇದು 10 ಬಿಲಿಯನ್ ಡಾಲರ್ಗೆ ಇಳಿದಿದೆ. ರಾಜ್ಯಕ್ಕೆ ಹೆಚ್ಚು ವಿದೇಶಿ ಬಂಡವಾಳ ಹೂಡಿಕೆಯನ್ನು ಸೆಳೆಯಲು ಬೇಕಾದ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನಮ್ಮ ಸರ್ಕಾರವು ಬದ್ಧವಾಗಿದೆ. ರಾಜ್ಯದ ಹಣಕಾಸು ಪರಿಸ್ಥಿತಿ 28. ಹಿಂದಿನ ಸರ್ಕಾರವು ವಿತ್ತೀಯ ಶಿಸ್ತಿನ ನೀತಿಗಳನ್ನು ಗಾಳಿಗೆ ತೂರಿ ಪ್ರಮುಖ ಇಲಾಖೆಗಳಲ್ಲಿ ಬಾರಿ ಸಂಖ್ಯೆಯ ಕಾಮಗಾರಿಗಳಿಗೆ ಮಂಜೂರಾತಿ ನೀಡಿರುತ್ತದೆ. ಹಿಂದಿನ ಸರ್ಕಾರವು ತನ್ನ ಅಧಿಕಾರಾವಧಿಯಲ್ಲಿ ಒಟ್ಟಾರೆ 94,933 ಕೋಟಿ ರೂ.ಗಳ ಮೊತ್ತದ ಕಾಮಗಾರಿಗಳನ್ನು ಜಲಸಂಪನ್ಮೂಲ, ನಗರಾಭಿವೃದ್ಧಿ, ಲೋಕೋಪಯೋಗಿ ಮತ್ತು ಇತರೆ ಇಲಾಖೆಗಳಲ್ಲಿ ಅನುಮೋದಿಸಿರುತ್ತದೆ. ಈ ಮೇಲ್ಕಂಡ ಇಲಾಖೆಗಳಿಗೆ 2022-23ರ ಆಯವ್ಯಯದಲ್ಲಿ ಕೇವಲ 33,616 ಕೋಟಿ ರೂ.ಗಳ ಅನುದಾನವನ್ನು ನೀಡಿದ್ದರೂ ಹಾಗೂ 2021-22ರ ಅಂತ್ಯಕ್ಕೆ 2,05,986 ಕೋಟಿ ರೂ.ಗಳಷ್ಟು ಮೊತ್ತದ ಬಾಕಿ ಕಾಮಗಾರಿಗಳಿದ್ದರೂ ಸಹ ಹಿಂದಿನ ಸರ್ಕಾರವು ಇದನ್ನು ಲೆಕ್ಕಿಸದೇ 49,116 ಕೋಟಿ ರೂ.ಗಳ ಮೊತ್ತದ ಕಾಮಗಾರಿಗಳನ್ನು ವಿವೇಚನಾರಹಿತವಾಗಿ ಅನುಮೋದಿಸಿರುತ್ತದೆ.
2022-23ರ ಅಂತ್ಯಕ್ಕೆ ಬಾಕಿ ಉಳಿಸಿರುವ ಕಾಮಗಾರಿಗಳ ಒಟ್ಟು ಮೊತ್ತವು 2,55,102 ಕೋಟಿ ರೂ.ಗಳಾಗಿದ್ದು, ಇದನ್ನು ಪೂರ್ಣಗೊಳಿಸಲು ಕನಿಷ್ಟ ಆರು ವರ್ಷಗಳು ಬೇಕಾಗಿದ್ದು, ನಮ್ಮ ಸರ್ಕಾರಕ್ಕೆ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ.
ADVERTISEMENT
ADVERTISEMENT