ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಅಧಿಕಾರಿಗಳು ದಿನನಿತ್ಯ ನನಗೆ ಹಾಗೂ ನನ್ನ ಸ್ನೇಹಿತರನ್ನು ವಿಚಾರಣೆಗೆ ಕರೆಯುತ್ತಿದ್ದಾರೆ. ಸಿಬಿಐನವರು ನನ್ನ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಆದರೆ, ಇಡಿ ಅವರು ಏನು ಎಫ್ಐಆರ್ ದಾಖಲಿಸಿದ್ದಾರೆ ಎಂದು ಗೊತ್ತಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ತಮಗೆ ಇಡಿ ಸಮನ್ಸ್ ಜಾರಿಮಾಡಿದ ಬಗ್ಗೆ ಮಾದ್ಯಮದವರಿಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ಅವರು, ನಿನ್ನೆಯೂ ಕೆಲವರನ್ನು ಕರೆದು ನನ್ನ ಬಗ್ಗೆ ವಿಚಾರಣೆ ಮಾಡಿದ್ದಾರೆ. ಸೋಮವಾರ ಬರುವಂತೆ ಇಡಿಯವರು ನನ್ನನ್ನು ವಿಚಾರಣೆಗೆ ಕರೆದಿದ್ದಾರೆ. ಭಾರತ ಐಕ್ಯತಾ ಯಾತ್ರೆಗೆ ಪೂರ್ವಸಿದ್ಧತೆ ಹಾಗೂ ಅಧಿವೇಶನ ನಡೆಯುತ್ತಿದ್ದು, ನನಗೆ ನನ್ನದೇ ಆದ ಜವಾಬ್ದಾರಿಗಳಿವೆ. ಹೀಗಾಗಿ ನಮ್ಮ ವಕೀಲರ ಜತೆ ಮಾತನಾಡುತ್ತೇನೆ. ಸಿಬಿಐನಲ್ಲಿ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಿದ್ದು, ಇಡಿಯವರು ಯಾವ ಪ್ರಕರಣ ದಾಖಲಿಸಿದ್ದಾರೋ ಗೊತ್ತಿಲ್ಲ.
ಇಡೀ ರಾಜ್ಯದಲ್ಲಿ ಕೇವಲ ನನ್ನ ವಿರುದ್ಧದ ಪ್ರಕರಣದ ವಿಚಾರಣೆಯನ್ನು ಮಾತ್ರ ಯಡಿಯೂರಪ್ಪನವರ ಸರ್ಕಾರ ಸಿಬಿಐಗೆ ವಹಿಸಿದೆ. ಅಡ್ವೊಕೇಟ್ ಜನರಲ್ ಅವರು ಈ ಪ್ರಕರಣ ಸಿಬಿಐಗೆ ಸೂಕ್ತವಲ್ಲ ಎಂದು ಹೇಳಿದ್ದರೂ ಸಿಬಿಐಗೆ ನೀಡಿದ್ದಾರೆ. ಈ ಪ್ರಕರಣದ ವಿಚಾರವಾಗಿ ನಾನು ಹೈಕೋರ್ಟ್ ಮೆಟ್ಟಿಲೇರಿದ್ದೇನೆ. ಇದನ್ನೂ ಓದಿ : ಡಿಕೆಶಿ ಆಪ್ತರಿಗೆ CBI ವಿಚಾರಣೆಗೆ ಬರಲು ಸೂಚನೆ
ನಾನು ಅವರ ತನಿಖೆಗೆ ಎಲ್ಲ ಸಹಕಾರ ನೀಡುತ್ತೇನೆ. ನನ್ನ ಜತೆ ವ್ಯಾಪಾರ, ವ್ಯವಹಾರ ಮಾಡಿದವರಿಗೆ ಕಿರುಕುಳ ನೀಡಲಾಗುತ್ತಿದ್ದು, ನಮ್ಮ ಕಾರ್ಯಕರ್ತರು ವಿಚಲಿತರಾಗಿದ್ದಾರೆ. ನಾನು ಕಾನೂನು ಬಾಹೀರವಾಗಿ ಯಾವುದೇ ಅಪರಾಧ ಮಾಡಿಲ್ಲ. ಕಾನೂನು ಇದೆ ನೋಡೋಣ ಏನಾಗುತ್ತದೆ ಎಂದು.
ಕಳೆದ ಒಂದು ವಾರದಿಂದ ನಾನು ಯಾತ್ರೆಯ ಎಲ್ಲ ಜಿಲ್ಲೆಗಳ ಪ್ರವಾಸ ಮಾಡುತ್ತಿದ್ದು, ಪಕ್ಷದ ಸಭೆ ಕಾರಣ ಬೆಂಗಳೂರಿಗೆ ಬಂದಿದ್ದೇನೆ. ನಾಳೆ ಮತ್ತೆ ಮಂಡ್ಯ ಹಾಗೂ ಮೈಸೂರು ಪ್ರವಾಸ ಮಾಡಲಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ : Bharat Jodo Yatra : ಡಿಕೆ ಶಿವಕುಮಾರ್ ಸುದ್ದಿಗೋಷ್ಠಿಯ ಬ್ಯಾನರ್ನಲ್ಲಿ ಸಿದ್ದರಾಮಯ್ಯರ ಫೋಟೋ ಮಾಯ