ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ನಿರ್ಧಾರವನ್ನು ಸುಪ್ರೀಂಕೋರ್ಟ್ನ ಐವರು ನ್ಯಾಯಮೂರ್ತಿಗಳ ಪೀಠ ಎತ್ತಿ ಹಿಡಿಯುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರಕ್ಕೆ ಕಾನೂನು ಹೋರಾಟದಲ್ಲಿ ಅತೀ ದೊಡ್ಡ ಗೆಲುವು ಸಿಕ್ಕಿದೆ. ಜೊತೆಗೆ ಲೋಕಸಭಾ ಚುನಾವಣೆ ವೇಳೆ ಮೋದಿ ನೇತೃತ್ವದಲ್ಲಿ ಬಿಜೆಪಿ ಭಾರತದ ನಾಗರಿಕರಿಗೆ ಕೊಟ್ಟಿದ್ದ ಎರಡೂ ಪ್ರಮುಖ ಭರವಸೆಗಳನ್ನು ಈಡೇರಿಸುವ ಮೂಲಕ ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿಗೆ ಇನ್ನಷ್ಟು ಶಕ್ತಿ ಸಿಕ್ಕಿದೆ.
2019ರ ಏಪ್ರಿಲ್ನಲ್ಲಿ ಲೋಕಸಭಾ ಚುನಾವಣೆ ವೇಳೆಗೆ ಬಿಜೆಪಿ ಘೋಷಿಸಿದ್ದ ಚುನಾವಣಾ ಪ್ರಣಾಳಿಕೆಯಲ್ಲಿದ್ದ ಪ್ರಮುಖ ಅಂಶ ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ ವಿಧಿ 370ರ ರದ್ದು ಮತ್ತು ಜಮ್ಮು-ಕಾಶ್ಮೀರದ ಶಾಶ್ವತ ನಾಗರಿಕರಿಗೆ ವಿಶೇಷ ಹಕ್ಕುಗಳನ್ನು ನೀಡಿದ್ದ ಸಂವಿಧಾನದ ವಿಧಿ ೩೫ಎ ರದ್ದು ಪ್ರಮುಖವಾಗಿತ್ತು.
ಜನಸಂಘ ಕಾಲದಿಂದಲೂ ವಿಶೇಷ ಸ್ಥಾನಮಾನ ರದ್ದತಿ ಹೋರಾಟ ಮಾಡಿದ್ದಾಗಿಯೂ ಕಳೆದ ಐದು ವರ್ಷಗಳಲ್ಲಿ (2014ರಿಂದ) ಜಮ್ಮು-ಕಾಶ್ಮೀರದಲ್ಲಿ ಶಾಂತಿ ಮತ್ತು ಸ್ಪಷ್ಟ ಹಾಗೂ ದೃಢ ನೀತಿಗಾಗಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದ ಬಿಜೆಪಿ, ಸಂವಿಧಾನದ ವಿಧಿ 370ನ್ನು ರದ್ದುಪಡಿಸುವ ಬಗ್ಗೆ ನಮ್ಮ ನಿಲುವನ್ನು ಪುನರುಚ್ಚರಿಸುತ್ತೇವೆ ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಿಸಿತ್ತು.
ಇದಾದ ಬಳಿಕ ಆಗಸ್ಟ್ 5, 2019ರಂದು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ರದ್ದುಪಡಿಸುವ ನಿರ್ಧಾರವನ್ನು ಘೋಷಿಸಿತು. ನಾಲ್ಕು ವರ್ಷಗಳ ಬಳಿಕ ಪ್ರಧಾನಿ ಮೋದಿ ಸರ್ಕಾರದ ಈ ಐತಿಹಾಸಿಕ ನಿರ್ಧಾರಕ್ಕೆ ವಾದ-ಪ್ರತಿವಾದದ ಬಳಿಕ ಭಾರತದ ಸರ್ವೋಚ್ಛ ನ್ಯಾಯಾಲಯದ ಸಂವಿಧಾನಿಕ ಪೀಠವೇ ಮುದ್ರೆ ಒತ್ತುವ ಮೂಲಕ ಬಿಜೆಪಿಗೆ ದೊಡ್ಡ ಗೆಲುವು.
ರಾಮಮಂದಿರ:
ರಾಷ್ಟ್ರಮಂದಿರ ಎಂದು ಬಿಜೆಪಿ ಕರೆದಿರುವ ರಾಮಮಂದಿರ ಜನವರಿ 22ರಂದು ಉದ್ಘಾಟನೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರು ರಾಮಮಂದಿರವನ್ನು ಲೋಕಾರ್ಪಣೆ ಮಾಡಲಿದ್ದಾರೆ. ರಾಮನ ಜನ್ಮಸ್ಥಳ ಆಯೋಧ್ಯೆಯಲ್ಲಿ ರಾಮಮಂದಿರ ಕಟ್ಟೇ ಕಟ್ತೀವಿ ಎನ್ನುವುದು ದೀರ್ಘಕಾಲದಿಂದ ಬಿಜೆಪಿ ಮಾಡಿಕೊಂಡು ಬಂದಿದ್ದ ಚುನಾವಣಾ ಭರವಸೆ. ಆ ಘೋಷಣೆ ಈಗ ನಿಜರೂಪದಲ್ಲಿ ಅನುಷ್ಠಾನಗೊಳ್ಳುತ್ತಿದೆ.
2019ರ ನವೆಂಬರ್ 9ರಂದು ಸುಪ್ರೀಂಕೋರ್ಟ್ನ ಸಂವಿಧಾನಿಕ ಪೀಠ ಆಯೋಧ್ಯೆಯಲ್ಲಿ ರಾಮಮಂದಿರ ಕಟ್ಟುವುದಕ್ಕೆ ಅವಕಾಶ ಮಾಡಿಕೊಟ್ಟ ಐತಿಹಾಸಿಕ ತೀರ್ಪನ್ನು ನೀಡಿತ್ತು. ಈ ತೀರ್ಪಿನ ಬಳಿಕ ೨೦೨೦ರ ಆಗಸ್ಟ್ ೫ರಂದು ಪ್ರಧಾನಿ ನರೇಂದ್ರ ಮೋದಿಯವರು ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಜನಸಂಘ ಕಾಲದಿಂದಲೂ ಕಮಲ ಪಾಳಯಕ್ಕೆ ಈ ಎರಡೂ ವಿಷಯಗಳು ಚುನಾವಣಾ ವಿಷಯವಾಗಿತ್ತು. ರಾಮಮಂದಿರ ಯಾವಾಗ ಕಟ್ತೀರಿ ಎಂದು ಆಗಾಗ್ಗೇ ಕುಚೋದ್ಯಕ್ಕೂ ಒಳಗಾಗ್ತಿತ್ತು ಬಿಜೆಪಿ. ಆದರೆ ಮೋದಿಯವರ ನಾಯಕತ್ವದಲ್ಲಿ ಬಿಜೆಪಿ ದೀರ್ಘಕಾಲದಿಂದ ಭಾರತದ ಜನತೆಗೆ ತಾನು ಪದೇ-ಪದೇ ನೀಡುತ್ತಿದ್ದ ಈ ಎರಡೂ ಘೋಷಣೆಗಳನ್ನು ಜಾರಿಗೊಳಿಸಲು ಸಾಧ್ಯವಾಗಿದ್ದು ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅತೀ ದೊಡ್ಡ ಶಕ್ತಿ ನೀಡಲಿದೆ.