ವರದಿ: ಅಕ್ಷಯ್ ಕುಮಾರ್
ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೊಂದು ವರ್ಷ ಬಾಕಿ. ರಾಜ್ಯದ ಮೂರು ಪ್ರಭಾವಿ ರಾಜಕೀಯ ಪಕ್ಷಗಳ ಜೊತೆಗೆ ಇತರೆ ಸಣ್ಣಪುಟ್ಟ ರಾಜಕೀಯ ಪಕ್ಷಗಳೂ ಗೆಲ್ಲುವ ಕಸರತ್ತುಗಳನ್ನು, ತಾಲೀಮುಗಳನ್ನು ಆರಂಭಿಸಿವೆ. ಈ ನಡುವೆ ಬದಲಾಗಿರುವ ಜೆಡಿಎಸ್ ಮತ್ತದರ ನಾಯಕ ಕುಮಾರಸ್ವಾಮಿಯವರ ನಡೆ-ನುಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಇದು ಕೇವಲ ಅಚ್ಚರಿಯಾಗಿ ಉಳಿಯದೇ ಮುಂದಿನ ವರ್ಷ ರಾಜ್ಯ ರಾಜಕೀಯದಲ್ಲಿ ಯಾರೂ ನಿರೀಕ್ಷೆ ಮಾಡಿರದ, ದೊಡ್ಡದೊಂದು ಬದಲಾವಣೆಗೂ ಮೂಲ ಆಗಬಹುದು. ಈ ಬದಲಾವಣೆಯನ್ನು ಸ್ವತಃ ಜೆಡಿಎಸ್ ಕಾರ್ಯಕರ್ತರೇ ನಿರೀಕ್ಷೆ ಮಾಡಿರಲಿಕ್ಕಿಲ್ಲ.
ಹಿಜಾಬ್ ವಿವಾದದಿಂದ ಹಿಡಿದು ಸರ್ವಜನಾಂಗಗಳ ಶಾಂತಿಯ ತೋಟವಾಗಿದ್ದ ಕರ್ನಾಟಕದಲ್ಲಿ ಆಡಳಿತ ಪಕ್ಷ ಬಿಜೆಪಿ ಮತ್ತದರ ಸಹವರ್ತಿ ಸಂಘಟನೆಗಳು ಕೋಮುದ್ವೇಷದ ವಿಷ ಬೀಜವನ್ನು ಹಬ್ಬಿಸುತ್ತಿರುವ ಹೊತ್ತಲ್ಲಿ ಈಗ ಇದ್ದಕಿದ್ದಂತೆ ಜೆಡಿಎಸ್ ನಾಯಕ, ಒಂದು ಬಾರಿ ಬಿಜೆಪಿ ಮೈತ್ರಿಯಿಂದಲೂ, ಇನ್ನೊಂದು ಬಾರಿ ಕಾಂಗ್ರೆಸ್ ಮೈತ್ರಿಯಿಂದಲೂ ಎರಡು ಬಾರಿ ಮುಖ್ಯಮಂತ್ರಿ ಆಗಿರುವ ಕುಮಾರಸ್ವಾಮಿ ತಮ್ಮ ನಡೆ-ನುಡಿಗಳನ್ನು ಕೆಲವು ದಿನಗಳಿಂದ ಬದಲಾಯಿಸಿಕೊಂಡಿದ್ದಾರೆ.
ಹಿಜಾಬ್ ವಿವಾದದ ಬಗ್ಗೆ ಮಾತಾಡಲು ಹಿಂಜರಿಯುತ್ತಿದ್ದ, `ಅಂತಹ ವಿಷಯಗಳ ಬಗ್ಗೆ ಚರ್ಚೆ ಮಾಡಬಾರದು ಎಂದು ಅಭಿಮಾನಿಗಳು ನನ್ನ ಕಿವಿಯಲ್ಲಿ ಬಂದು ಹೇಳಿದ್ದರು’ ಎನ್ನುವವರೆಗೆ ಅಂತರ ಕಾಯ್ದುಕೊಳ್ಳುವ ಯತ್ನ ಮಾಡಿದ್ದ ಕುಮಾರಸ್ವಾಮಿ ಈಗ ಧರ್ಮ ರಾಜಕಾರಣದ ಗುಲ್ಲೆಬ್ಬಿಸಿ ಅದರ ಹಿಂದೆ ಬೆನ್ನು ಬಿಡದ ಬೇತಾಳನಂತೆ ಬಿದ್ದಿರುವ ಬಿಜೆಪಿ ವಿರುದ್ಧ ಮುಗಿಬಿದ್ದಿದ್ದಾರೆ. ವಿರೋಧಪಕ್ಷಗಳ ವಿರೋಧ ಪಕ್ಷ (ಅಂದರೆ ಕಾಂಗ್ರೆಸ್ಗಷ್ಟೇ ವಿರೋಧಪಕ್ಷ, ಬಿಜೆಪಿಗಲ್ಲ) ಎಂಬ ಆರೋಪದ ಹಣೆಪಟ್ಟಿ ಕಟ್ಟಿಕೊಂಡಿದ್ದ ಜೆಡಿಎಸ್ ಈಗ ಬಿಜೆಪಿ ಜೊತೆಗೆ ಕಾಳಗಕ್ಕಿಳಿದಿದೆ.
ಆದರೆ ಜೆಡಿಎಸ್ ಮತ್ತದರ ನಾಯಕ ಕುಮಾರಸ್ವಾಮಿಯವರ ಈ ಅನಿರೀಕ್ಷಿತ ಬದಲಾವಣೆ ಬಿಜೆಪಿ-ಜೆಡಿಎಸ್ ಇಬ್ಬರೂ ಸೇರಿಕೊ0ಡು ಮಾಡುತ್ತಿರುವ ಚುನಾವಣಾ ಒಳತಂತ್ರಗಾರಿಕೆಯೂ ಹೌದಾಗಿರಬಹುದು ಎಂಬ ಮಾತು ಕೇಳಿಬಂದಿದೆ. ಹಾಗಾದರೆ ಬಿಜೆಪಿ-ಜೆಡಿಎಸ್ ನಡುವೆ ನಡೆಯುತ್ತಿದೆ ಎನ್ನಲಾಗಿರುವ ಈ ಒಳತಂತ್ರಗಾರಿಕೆಯ ಲೆಕ್ಕಾಚಾರಗಳು ಏನು..?
1. ವಿಧಾನಸಭಾ ಚುನಾವಣೆಯ ಬಳಿಕ ಬಿಜೆಪಿ-ಜೆಡಿಎಸ್ ಮೈತ್ರಿ..?
ಒಳತಂತ್ರಗಾರಿಕೆಯ ಮೊದಲ ಭಾಗವೇ ಚುನಾವಣೋತ್ತರ ಮೈತ್ರಿ ಲೆಕ್ಕಾಚಾರ. ವರದಿಗಳ (ಬಿಜೆಪಿ ಆಂತರಿಕ ಸಮೀಕ್ಷೆ) ಪ್ರಕಾರ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬರುವ ಸಾಧ್ಯತೆ ತುಂಬಾ ಕಡಿಮೆ. ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳು 70-90ರ ಅಸುಪಾಸಿನಲ್ಲಿ ಸೀಟುಗಳನ್ನು ಗೆಲ್ಲಬಹುದು ಎಂಬ ಊಹೆ ಇದೆ. ಆಗ ಅನಿವಾರ್ಯವಾಗಿ ಜೆಡಿಎಸ್ ಮೈತ್ರಿ ಬೇಕೇ ಬೇಕು. 2018ರ ಚುನಾವಣೆಯಲ್ಲಿ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ (ಬಹುಮತ ಸಿಕ್ಕಿರಲಿಲ್ಲ) ಹೊರಹೊಮ್ಮಿದರೂ ಫಲಿತಾಂಶ ಬಂದ ದಿನವೇ ಕಾಂಗ್ರೆಸ್-ಜೆಡಿಎಸ್ ದಿಢೀರ್ ಮೈತ್ರಿ ಘೋಷಿಸಿಕೊಂಡು ಸರ್ಕಾರ ರಚಿಸಿಕೊಂಡಿದ್ದರಿAದ ಅಧಿಕಾರ ಹಿಡಿಯುವ ಮೊದಲ ಪ್ರಯತ್ನದಲ್ಲೇ ಬಿಜೆಪಿಗೆ ಮುಖಭಂಗವಾಯಿತು. ಆದರೆ 2023ರಲ್ಲಿ ಕಾಂಗ್ರೆಸ್ಗೆ ಇಂಥಾ ಒಂದು ಅವಕಾಶವೂ ಸಿಗದಂತೆ ನೋಡಿಕೊಳ್ಳುವುದು ಬಿಜೆಪಿಯ ರಣತಂತ್ರ. ಹೀಗಾಗಿ ಅತಂತ್ರ ವಿಧಾನಸಭೆ ರಚನೆ ಆದ ಪಕ್ಷದಲ್ಲಿ (ಬಹುತೇಕ ಇದೇ ಸ್ಥಿತಿ ಬರಬಹುದು ಎಂದು ಅಂದಾಜಿಸಲಾಗುತ್ತಿದೆ) ಆಗ ಜೆಡಿಎಸ್ ಬೆಂಬಲ ಪಡೆದು ಸರ್ಕಾರ ರಚನೆ ಮಾಡುವುದು ಬಿಜೆಪಿಯ ಲೆಕ್ಕಾಚಾರಗಳಲ್ಲಿ ಒಂದು ಎನ್ನಲಾಗಿದೆ. ಅಂದರೆ ಯಾರ ಜೊತೆಗೂ ಮೈತ್ರಿ ಮಾಡಿಕೊಳ್ಳಲ್ಲ ಎನ್ನುತ್ತಿರುವ ಕುಮಾರಸ್ವಾಮಿಯವರು 2023ರಲ್ಲಿ ಮತ್ತೆ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡರೂ ಅಚ್ಚರಿ ಅಲ್ಲ. ಈಗ ಪರಸ್ಪರ ಮುಗಿಬೀಳುತ್ತಿರುವವರು 2023ರ ಚುನಾವಣಾ ಫಲಿತಾಂಶ ಬರುತ್ತಿದ್ದಂತೆ ಮಿತ್ರರಾಗಬಹುದು, ದೋಸ್ತಿಗಳಾಗಬಹುದು.
2. ಮುಸ್ಲಿಂ ಮತ ವಿಭಜನೆಯ ರಣತಂತ್ರ
`ನನಗೆ ಹಿಜಬ್-ಪಜಬ್ಯೆಲ್ಲ ಗೊತ್ತಿಲ್ಲ’ ಎಂದು ಹೇಳಿಕೆಕೊಟ್ಟು ಮುಸ್ಲಿಂ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದ ಕುಮಾರಸ್ವಾಮಿ ಈಗ ಧರ್ಮರಾಜಕಾರಣದ ವಿಷಯದಲ್ಲಿ ಇದ್ದಕಿದ್ದಂತೆ ಬಿಜೆಪಿ ವಿರುದ್ಧ ದಿಢೀರ್ ಆಗಿ ದಾಳಿ ಆರಂಭಿಸಿದ್ದಾರೆ. `ಮೃದು ಹಿಂದುತ್ವ’ ಎಂಬ ಪ್ರಯೋಜನಕ್ಕೆ ಬಾರದ ರಕ್ಷಣಾತ್ಮಕ ತಂತ್ರವನ್ನು ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್ ಅನುಸರಿಸುತ್ತಿರುವಾಗ ಮುಸ್ಲಿಂ ಮತಗಳು ಆ ಪಕ್ಷದಿಂದ ದೂರ ಆಗಬಹುದು ಎಂಬ ಸುಳಿವು ಸಿಕ್ಕಿದ್ದೇ ತಡ ಜೆಡಿಎಸ್ ತನ್ನ ವರಸೆಯನ್ನು ಬದಲಾಯಿಸಿದೆ. ಕಳೆದೆರಡು ವರ್ಷದಿಂದ ಬಿಜೆಪಿಗಿಂತಲೂ ಕಾಂಗ್ರೆಸ್ ವಿರುದ್ಧವೇ ಟೀಕೆ-ಟಿಪ್ಪಣಿಯನ್ನು ಮಾಡುತ್ತಿದ್ದ ಕುಮಾರಸ್ವಾಮಿಯವರ ಈ ತಂತ್ರಗಾರಿಕೆ ಕಾಂಗ್ರೆಸ್ ಹೋಗಬಹುದಾದ ಮುಸ್ಲಿಂ ಮತಗಳನ್ನು ಒಡೆಯುವುದು ಮತ್ತು ಆ ಮೂಲಕ ಕಾಂಗ್ರೆಸ್ಗೆ ಲುಕ್ಸಾನ್ ಉಂಟು ಮಾಡುವುದಾಗಿದೆ. ಹೀಗಾಗಿ ಮುನ್ನೆಲೆಯಲ್ಲಿರುವ ಬಿಜೆಪಿ-ಜೆಡಿಎಸ್ ವಾಕ್ಸಮರವೇ ಬೇರೆ, ಹಿನ್ನೆಲೆಯಲ್ಲಿರುವ ಎರಡೂ ಪಕ್ಷಗಳ ಲೆಕ್ಕಾಚಾರವೇ ಬೇರೆ.
3. ಇಬ್ರಾಹಿಂ ಜೆಡಿಎಸ್ ಸೇರಿದ್ದರ ಹಿಂದೆ ಬಿಜೆಪಿ ಲೆಕ್ಕಾಚಾರ..?
ಕಾಂಗ್ರೆಸ್ನಲ್ಲಿ ಸ್ಥಾನಮಾನ ಸಿಗುತ್ತಿಲ್ಲ ಎಂಬುದಾಗಿಯೂ ಕಾಂಗ್ರೆಸ್ನಲ್ಲಿ ಮುಸಲ್ಮಾನರಿಗೆ ಸ್ಥಾನಮಾನ ಸಿಗುತ್ತಿಲ್ಲ ಎಂಬುದಾಗಿಯೂ ತಮ್ಮ ಕೈಯಲ್ಲಿದ್ದ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೇ ರಾಜೀನಾಮೆ ಕೊಟ್ಟು ಜೆಡಿಎಸ್ ಮನೆಗೆ ಮತ್ತೆ ಗೃಹ ಪ್ರವೇಶ ಮಾಡಿದ್ದಾರೆ ಸಿ ಎಂ ಇಬ್ರಾಹಿಂ. ಮೇಲ್ನೋಟಕ್ಕೆ ಇದು ಇಬ್ರಾಹಿಂ ಅವರಿಗೆ ಕಾಂಗ್ರೆಸ್ ನಾಯಕರ ಬಗ್ಗೆ ಇರುವ ಅಸಮಾಧಾನ ಎಂದು ತೋರಿದರೂ ಇಬ್ರಾಹಿಂ ಜೆಡಿಎಸ್ ಸೇರ್ಪಡೆ ಹಿಂದೆ ಇನ್ನೊಂದು ಲೆಕ್ಕಾಚಾರ ಇದೆಯಂತೆ. ಅದೇ ಮುಸ್ಲಿಂ ಮತಗಳನ್ನು ವಿಭಜನೆ ಮಾಡುವುದು. ಕಾಂಗ್ರೆಸ್ ಗೆಲ್ಲಬಹುದಾದ ಕ್ಷೇತ್ರಗಳಲ್ಲಿ ಪ್ರತ್ಯೇಕವಾಗಿ ಮುಸಲ್ಮಾನ ಅಭ್ಯರ್ಥಿಗಳನ್ನು ನಿಲ್ಲಿಸಿ ಆ ಮೂಲಕ ಕಾಂಗ್ರೆಸ್ಗೆ ಹೋಗಬಹುದಾದ ಮತಗಳನ್ನು ವಿಭಜನೆ ಮಾಡುವ ಲೆಕ್ಕಾಚಾರ. (ಉತ್ತರಪ್ರದೇಶದಲ್ಲಿ ಮಾಯಾವತಿ, ಓವೈಸಿಯ ಇಂತಹ ತಂತ್ರಗಾರಿಕೆ ಸಮಾಜವಾದಿ ಪಕ್ಷಕ್ಕೆ ಆಘಾತ ನೀಡಿತ್ತು.) ಈ ತಂತ್ರಕ್ಕೆ ಸಿ ಎಂ ಇಬ್ರಾಹಿಂ ದೊಡ್ಡ ದಾಳ ಆಗಬಹುದು.
4. ಮುಖ್ಯಮಂತ್ರಿ ಆಗಲ್ವಾ ಕುಮಾರಸ್ವಾಮಿ..?
ಮತ್ತೆ ಮುಖ್ಯಮಂತ್ರಿ ಆಗಲ್ವಾ ಕುಮಾರಸ್ವಾಮಿ..? ಇಂಥದ್ದೊAದು ಮಾತು ರಾಜಕೀಯ ವಲಯಗಳಲ್ಲಿ ಹರಿದಾಡುತ್ತಿದೆ. ಅತಂತ್ರ ವಿಧಾನಸಭೆ ಏರ್ಪಟ್ಟಲ್ಲಿ ಬಿಜೆಪಿ-ಜೆಡಿಎಸ್ ಹೊಂದಾಣಿಕೆಯಲ್ಲಿ ಬಿಜೆಪಿಯವರೇ ಮುಖ್ಯಮಂತ್ರಿ ಆಗಬಹುದು ಎನ್ನಲಾಗುತ್ತಿದೆ. ಆಗ ರಾಜ್ಯ ರಾಜಕಾರಣದಲ್ಲಿರುವ ಕುಮಾರಸ್ವಾಮಿ ರಾಷ್ಟç ರಾಜಕಾರಣಕ್ಕೆ ಮತ್ತೆ ಮರಳಬಹುದು, ಜೆಡಿಎಸ್ನ ಒಬ್ಬರಿಗೆ ಉಪ ಮುಖ್ಯಮಂತ್ರಿ ಪಟ್ಟ ಸಿಗಬಹುದು (20-20 ಸರ್ಕಾರದಲ್ಲಿದ್ದ ಸೂತ್ರ ಪ್ರಯೋಗ) ಎಂಬ ಮಾತೂ ಇದೆ. ದಲಿತರನ್ನು ಸಿಎಂ ಮಾಡಲು ಜೆಡಿಎಸ್ ಸಿದ್ಧ ಎಂಬ ಕುಮಾರಸ್ವಾಮಿ ಹೇಳಿಕೆಯ ಹಿಂದಿನ ಮರ್ಮವೇ ಇದು ಎನ್ನಲಾಗ್ತಿದೆ.
5. ಕೆಲವು ಕ್ಷೇತ್ರಗಳಲ್ಲಿ ಒಳಒಪ್ಪಂದ..?
ಇವೆಲ್ಲದರ ಜೊತೆಗೆ ತೀರಾ ಅನಿವಾರ್ಯ ಎನಿಸುವ ಕೆಲವ ಕ್ಷೇತ್ರಗಳಲ್ಲಿ ಜೆಡಿಎಸ್, ಬಿಜೆಪಿ ಒಳಮೈತ್ರಿ ಮಾಡಿಕೊಳ್ಳಬಹುದು ಎನ್ನಲಾಗುತ್ತಿದೆ. ಆ ಮೂಲಕ ಕಾಂಗ್ರೆಸ್ಗೆ ಆಗಬಹುದಾದ ಲಾಭಕ್ಕೆ ಅಂಕುಶ ಹಾಕುವ ಲೆಕ್ಕಾಚಾರವೂ ಇದೆಯಂತೆ.