ಬಿಜೆಪಿ ಅಧಿಕಾರಕ್ಕೆ ಬರುವವರೆಗೂ ತಾನು ಪಾದರಕ್ಷೆ ಧರಿಸೋದಿಲ್ಲ ಅಂತ ಶಪಥಗೈದು ಸುಮಾರು 6 ವರ್ಷಗಳ ಕಾಲ ಬರಿಗಾಲಿನಲ್ಲೇ ನಡೆಯುತ್ತಿದ್ದ ತಮ್ಮ ಪಕ್ಷದ ಕಾರ್ಯಕರ್ತನ ಕಾಲುಗಳಿಗೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಶೂ ಹಾಕಿದ್ದಾರೆ.
ಅನ್ನುಪ್ಪುರ್ ಜಿಲ್ಲೆಯ ಪಕ್ಷದ ಜಿಲ್ಲಾಧ್ಯಕ್ಷ ರಾಮದಾಸ್ 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತ ಬಳಿಕ ಭಾರೀ ನಿರಾಶರಾಗಿದ್ದರು. ಜೊತೆಗೆ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದೇ ತೀರುತ್ತೆ, ಅಲ್ಲಿಯವರೆಗೂ ನಾನು ಕಾಲಿಗೆ ಪಾದರಕ್ಷೆಗಳನ್ನು ಧರಿಸೋದಿಲ್ಲ ಅಂತ ರಾಮದಾಸ್ ಶಪಥಗೈದಿದ್ರು. ಅಂತೆಯೇ ಅವರು 2018ರಿಂದ ಈವರೆಗೂ ಪಾದರಕ್ಷೆಗಳನ್ನೇ ಧರಿಸದೆ ಬರಿಗಾಲಿನಲ್ಲಿ ಓಡಾಡುತ್ತಿದ್ದರು.
ಈ ಮಧ್ಯೆ 2020ರಲ್ಲಿ ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ಸರ್ಕಾರ ಪತನಗೊಳಿಸಿ ಶಿವರಾಜ್ ಸಿಂಗ್ ಸಿಎಂ ಆಗಿ ಅಧಿಕಾರ ವಹಿಸಿಕೊಂಡ್ರು. ಆದರೆ ಇದು ನಿಷ್ಠಾವಂತ ಕಾರ್ಯಕರ್ತ ರಾಮದಾಸ್ ಗೆ ಸಮಾಧಾನ ತರಲಿಲ್ಲ. ವಿಧಾನಸಭಾ ಚುನಾವಣೆ ಮೂಲಕವೇ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ತಮ್ಮ ಪ್ರತಿಜ್ಞೆಯಂತೆ ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ 163 ಸೀಟುಗಳನ್ನು ಪಡೆದು ಪ್ರಚಂಡ ಬಹುಮತದಿಂದ ಬಿಜೆಪಿ ಗೆದ್ದ ಬಳಿಕ ಇದೀಗ ರಾಮದಾಸ್ ಕಾಲಿಗೆ ಶೂ ಧರಿಸೋ ನಿರ್ಧಾರ ಮಾಡಿದ್ರು.
ವಿಶೇಷ ಅಂದ್ರೆ, ಮಧ್ಯಪ್ರದೇಶದ ಮಾಜಿ ಸಿಎಂ, ಜನಪ್ರಿಯ ನಾಯಕ ಶಿವರಾಜ್ ಸಿಂಗ್ ಚೌವ್ಹಾಣ್ ರವರೇ ಖುದ್ದಾಗಿ ಕಾರ್ಯಕರ್ತನ ಕಾಲಿಗೆ ಶೂ ಹಾಕಿದ್ದಾರೆ. ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ರಾಮದಾಸ್ ರವರನ್ನು ಕೊಂಡಾಡಿದ್ದಾರೆ.
ಸದ್ಯ ಮಧ್ಯಪ್ರದೇಶದಲ್ಲಿ ಮೋಹನ್ ಯಾದವ್ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಇನ್ನು ಮಧ್ಯಪ್ರದೇಶದ ಅತ್ಯಂತ ಜನಪ್ರಿಯ ನಾಯಕ, ಮಾಜಿ ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್ ಸಾಮಾನ್ಯ ಕಾರ್ಯಕರ್ತನ ನಿಷ್ಠೆಗೆ ತಲೆ ಬಾಗಿ ಆತನ ಕಾಲಿಗೆ ಶೂ ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗ್ತಿದೆ.