2024ರ ಲೋಕಸಭಾ ಚುನಾವಣೆಗೆ ತಾಲೀಮು ಆರಂಭಿಸಿರುವ ಬಿಜೆಪಿ 70 ವರ್ಷ ದಾಟುವ ಹಾಲಿ ಸಂಸದರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡದೇ ಇರಲು ನಿರ್ಧರಿಸಿದೆ ಎಂದು ವರದಿ ಆಗಿದೆ.
ಬುಧವಾರ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಒಳಗೊಂಡಂತೆ ಹಲವು ಬಿಜೆಪಿ ನಾಯಕರ ಸಭೆಯಲ್ಲಿ ಈ ಬಗ್ಗೆ ಸಮಾಲೋಚನೆ ನಡೆದಿದೆ.
ಮುಖ್ಯಮಂತ್ರಿ ಗಾದಿಗೂ ಬಿಜೆಪಿ ಇದೇ ವಯಸ್ಸಿನ ಸೂತ್ರವನ್ನು ಅನುಸರಿಸಿತ್ತು.
ಸದ್ಯ ಬಿಜೆಪಿಯಲ್ಲಿ 301 ಸಂಸದರಿದ್ದು, ಅವರಲ್ಲಿ 81 ಮಂದಿಗೆ 70 ವರ್ಷ ವಯಸ್ಸಿನ ನಿಯಮದ ಕಾರಣದಿಂದ ಮುಂದಿನ ಬಾರಿ ಟಿಕೆಟ್ ಸಿಗದೇ ಇರುವ ಸಾಧ್ಯತೆ ಇದೆ.
ಪ್ರಧಾನಿ ನರೇಂದ್ರ ಮೋದಿಯವರಿಗೆ 2024ರ ಲೋಕಸಭಾ ಚುನಾವಣೆ ವೇಳೆ 73 ವರ್ಷ ತುಂಬಲಿದೆ. ಆದರೆ ಮೋದಿ ಒಳಗೊಂಡAತೆ ಪ್ರಮುಖ ನಾಯಕರಿಗೆ ಈ ಷರತ್ತಿನಿಂದ ವಿನಾಯಿತಿ ಸಿಗಲಿದೆ ಎಂದು ವರದಿ ಆಗಿದೆ.
ಕರ್ನಾಟಕದ ಹಾಲಿ 25 ಮಂದಿ ಸಂಸದರ ಪೈಕಿ 9 ಮಂದಿ ಸಂಸದರಿಗೆ ಟಿಕೆಟ್ ಕೈ ತಪ್ಪಬಹುದು.
ದೇವರಗುಂಡ ವೆಂಕಪ್ಪ ಸದಾನಂದಗೌಡ:
ಬೆಂಗಳೂರು ಉತ್ತರ ಕ್ಷೇತ್ರದಿಂದ 2014ರಿಂದ ಸತತ ಎರಡು ಬಾರಿ ಸಂಸದರಾಗಿದ್ದಾರೆ. ಈಗ ಇವರ ವಯಸ್ಸು 69. 2024ರ ಮಾರ್ಚ್ 18ರಂದು ಇವರಿಗೆ 71 ವರ್ಷ ಆಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ರಸಗೊಬ್ಬರ ಖಾತೆ ಸಚಿವರಾಗಿದ್ದ ಇವರು ಕಳೆದ ಬಾರಿ ಸಂಪುಟ ಪುನರ್ ರಚನೆ ವೇಳೆ ಸಚಿವ ಸ್ಥಾನ ಕಳೆದುಕೊಂಡಿದ್ದರು.
ಗಂಗಸಂದ್ರ ಸಿದ್ದಪ್ಪ ಬಸವರಾಜು:
ತುಮಕೂರು ಲೋಕಸಭಾ ಕ್ಷೇತ್ರದ ಸಂಸದ. ಐದು ಬಾರಿ ಸಂಸದರಾಗಿರುವ ಇವರಿಗೆ ಈಗ 81 ವರ್ಷ. 2024ರ ಮೇ 4ರಂದು ಇವರಿಗೆ 83 ವರ್ಷ ಆಗಿರುತ್ತದೆ. 2019ರ ಚುನಾವಣೆಯಲ್ಲಿ ಇವರು 89 ವರ್ಷ ವಯಸ್ಸಿನ ಮಾಜಿ ಪ್ರಧಾನಿ ದೇವೇಗೌಡರನ್ನು ಸೋಲಿಸಿದ್ದರು.
ವೆಂಕಟಯ್ಯ ಶ್ರೀನಿವಾಸಪ್ರಸಾದ್:
ಚಾಮರಾಜನಗರ ಕ್ಷೇತ್ರದ ಸಂಸದ. 2013ರಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದ ಇವರು 2016ರಲ್ಲಿ ಬಿಜೆಪಿಗೆ ಸೇರ್ಪಡೆ ಆಗಿ 2019ರಲ್ಲಿ ಬಿಜೆಪಿಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಈಗ ಇವರ ವಯಸ್ಸು 74. 2024ರ ಆಗಸ್ಟ್ 6ರಂದು ಇವರಿಗೆ 76 ವರ್ಷ ವಯಸ್ಸಾಗಿರುತ್ತದೆ.
ಪ್ರತಾಪ್ಗೌಡ ಚಂದನಗೌಡ ಗದ್ದೀಗೌಡರ್:
2004ರಿಂದ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಸಂಸದರು. ಈಗ ಇವರ ವಯಸ್ಸು 70. 2024ರ ಜೂನ್ 1ಕ್ಕೆ 72 ವರ್ಷ ಆಗಿರುತ್ತದೆ.
ಗೌಡರ ಮಲ್ಲಿಕಾರ್ಜುನಪ್ಪ ಸಿದ್ದೇಶ್ವರ:
ಸತತ 4 ಬಾರಿ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿರುವ ಇವರು 2014ರಲ್ಲಿ ಪ್ರಧಾನಿ ಮೋದಿ ಸರ್ಕಾರದಲ್ಲಿ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವರಾಗಿದ್ದರು. ಜುಲೈ 5, 2024ಕ್ಕೆ ಇವರಿಗೆ 71 ವರ್ಷ ತುಂಬಲಿದೆ.
ಬೆಂಡಿಗಾನಹಳ್ಳಿ ನಾರಾಯಣಗೌಡ ಬಚ್ಚೇಗೌಡ:
2019ರಿಂದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ. ಅಕ್ಟೋಬರ್ 1, 2024ಕ್ಕೆ ಇವರಿಗೆ 81 ವರ್ಷ ತುಂಬುತ್ತದೆ.
ರಮೇಶ್ ಜಿಗಜಿಣಗಿ:
ಸತತ ಆರು ಬಾರಿ ವಿಜಯಪುರ ಕ್ಷೇತ್ರದ ಸಂಸದರಾಗಿರುವ ರಮೇಶ್ ಜಿಗಜಿಣಗಿ. ಪ್ರಧಾನಿ ಮೋದಿ ಸರ್ಕಾರದಲ್ಲಿ ಕುಡಿಯುವ ಮತ್ತು ಸ್ವಚ್ಛತೆ ಖಾತೆ ರಾಜ್ಯ ಸಚಿವರಾಗಿದ್ದ ಇವರಿಗೆ ಜೂನ್ 28, 2024ರಂದು 71 ವರ್ಷ ಭರ್ತಿ ಆಗಲಿದೆ.
ಕರಡಿ ಸಂಗಣ್ಣ:
2014ರಿAದ ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಕರಡಿ ಸಂಗಣ್ಣ ಅವರಿಗೆ ಮೇ 8, 2024ರಂದು 74 ವರ್ಷ ಆಗಲಿದೆ.
ಯರಬಸಿ ದೇವೇಂದ್ರಪ್ಪ:
2019ರಲ್ಲಿ ಬಳ್ಳಾರಿ ಲೋಕಸಭಾ ಸಂಸದರಾಗಿ ಆಯ್ಕೆ ಆದ ಇವರಿಗೆ ಮೇ 7, 2024ರಂದು 73 ವರ್ಷ ತುಂಬಲಿದೆ.