ಬಿಜೆಪಿ ಸಂಸದ ಅರ್ಜುನ್ ಸಿಂಗ್ ಬಿಜೆಪಿ ತೊರೆದು ಇಂದು ಭಾನುವಾರ ತೃಣಮೂಲ ಕಾಂಗ್ರೆಸ್(ಟಿಎಂಸಿ) ಪಕ್ಷಕ್ಕೆ ಮರಳಿದ್ದಾರೆ.
ಬಿಜೆಪಿಯ ಪಶ್ಚಿಮ ಬಂಗಾಳ ಘಟಕದ ಉಪಾಧ್ಯಕ್ಷರಾಗಿದ್ದ ಇವರು 2019 ರಲ್ಲಿ ಲೋಕಸಭೆ ಚುನಾವಣೆಗೂ ಮುನ್ನ ಟಿಎಂಸಿ ತೊರೆದು ಬಿಜೆಪಿ ಸೇರಿದ್ದರು.
ಭಾನುವಾರ ಮಧ್ಯಾಹ್ನ ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದರು. ಪಶ್ಚಿಮ ಬಂಗಾಳದ ಸಚಿವ ಜ್ಯೋತಿಪ್ರಿಯಾ ಮಲ್ಲಿಕ್ ಮತ್ತು ಉತ್ತರ 24 ಪರಗಣ ಜಿಲ್ಲೆಯ ಟಿಎಂಸಿ ನಾಯಕರು ಕೋಲ್ಕತ್ತಾದ ಬ್ಯಾನರ್ಜಿ ಅವರ ಕಚೇರಿಯಲ್ಲಿ ಹಾಜರಿದ್ದರು.
ಬಂಗಾಳ ಬಿಜೆಪಿಯ ಮಾಜಿ ಉಪಾಧ್ಯಕ್ಷ ಮತ್ತು ಬರಾಕ್ಪುರದ ಸಂಸದ ಅರ್ಜುನ್ ಸಿಂಗ್ ಅವರನ್ನು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಕುಟುಂಬಕ್ಕೆ ಆತ್ಮೀಯವಾಗಿ ಸ್ವಾಗತಿಸುತ್ತೇನೆ. ಅವರು ಇಂದು ನಮ್ಮ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಸಮ್ಮುಖದಲ್ಲಿ ನಮ್ಮೊಂದಿಗೆ ಸೇರಿದ್ದಾರೆ ಎಂದು ಟಿಎಂಸಿ ತನ್ನ ಅಧಿಕೃತ ಹ್ಯಾಂಡಲ್ನಿಂದ ಟ್ವೀಟ್ ಮಾಡಿದೆ.
ಅರ್ಜುನ್ ಸಿಂಗ್ ಮತ್ತು ಅವರಿಗಿಂತ ಮೊದಲು ಬಾಬುಲ್ ಸುಪ್ರಿಯೊ ಅವರು ಟಿಎಂಸಿಗೆ ಸೇರ್ಪಡೆಯಾದ ನಂತರ ಪಶ್ಚಿಮ ಬಂಗಾಳದಿಂದ ಬಿಜೆಪಿಯ ಸಂಸದರ ಸಂಖ್ಯೆ 18 ರಿಂದ 16 ಕ್ಕೆ ಇಳಿದಿದೆ. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಬಾಬುಲ್ ಸುಪ್ರಿಯೋ ಬಿಜೆಪಿ ತೊರೆದು ಟಿಎಂಸಿ ಸೇರಿದ್ದರು.
ಅರ್ಜುನ್ ಸಿಂಗ್ ತಮ್ಮ ರಾಜಕೀಯ ವೃತ್ತಿಜೀವನವನ್ನು ಕಾಂಗ್ರೆಸ್ ಪಕ್ಷದಿಂದ ಪ್ರಾರಂಭಿಸಿದ್ದರು. ಮೊದಲ ಬಾರಿ ಭಾಟ್ಪಾರಾ ಪುರಸಭೆಯ ಚುನಾವಣೆಯಲ್ಲಿ ಕೌನ್ಸಿಲರ್ ಆಗಿ ಗೆಲುವು ಸಾಧಿಸಿದ್ದರು. 2001 ರಲ್ಲಿ ಸಿಪಿಐ(ಎಂ) ಅಭ್ಯರ್ಥಿ ರಾಮಪ್ರಸಾದ್ ಕುಂದು ಅವರನ್ನು ಸೋಲಿಸಿ ತೃಣಮೂಲ ಕಾಂಗ್ರೆಸ್ನಿಂದ ರಾಜ್ಯ ವಿಧಾನಸಭೆಗೆ ಪ್ರವೇಶಿಸಿದರು.
2019ರಲ್ಲಿ ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಸೇರಿ ಬ್ಯಾರಕ್ಪುರದಲ್ಲಿ ಲೋಕಸಭೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.