ಮೂವರೇನೋ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು.. ಒಬ್ಬರು ಜೆಡಿಎಸ್ ಸೀನಿಯರ್ ಲೀಡರ್, ಮಾಜಿ ಸಿಎಂ.. ಮತ್ತಿಬ್ಬರು ಬಿಜೆಪಿಯಲ್ಲಿ ಪ್ರಮುಖ ನೇತಾರರಾಗಿ ಬೆಳೆದು ಟಿಕೆಟ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷದಿಂದ ಕಣಕ್ಕೆ ಇಳಿದವರು.. ಆ ಆರು ಮಂದಿಯನ್ನು ಮೇ 10ರ ಚುನಾವಣೆಯಲ್ಲಿ ಹೇಗಾದರೂ ಮಾಡಿ ಸೋಲಿಸಬೇಕು ಎಂಬ ಲೆಕ್ಕಾಚಾರದೊಂದಿಗೆ ಬಿಜೆಪಿ ರಣವ್ಯೂಹ ರಚಿಸಿದೆ. ಈ ಆರು ಮಂದಿ ವಿರುದ್ಧ ಬಲಿಷ್ಠ ಹುರಿಯಾಳುಗಳನ್ನೇ ಕಣಕ್ಕಿಳಿಸಿದೆ. ಅಷ್ಟೇ ಅಲ್ಲ,ಆ ಕ್ಷೇತ್ರಗಳಲ್ಲಿ ಪ್ರಧಾನಿ ಮೋದಿ ಸೇರಿ ಘಟಾನುಘಟಿಗಳು ಪ್ರಚಾರಕ್ಕೆ ಮುಂದಾಗುತ್ತಿದ್ದಾರೆ.
ಟಾರ್ಗೆಟ್ 1- ಸಿದ್ದರಾಮಯ್ಯ
ಸಿದ್ದರಾಮಯ್ಯ ವರ್ಸಸ್ ಸೋಮಣ್ಣ
ವರುಣಾ.. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಸ್ವಕ್ಷೇತ್ರ. ತಮ್ಮ ಕೊನೆಯ ಚುನಾವಣೆಯನ್ನು ಸಿದ್ದರಾಮಯ್ಯ ಇಲ್ಲಿಂದಲೇ ಎದುರಿಸುತ್ತಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಸಚಿವ ಸೋಮಣ್ಣರನ್ನು ಕಣಕ್ಕಿಳಿಸಿದೆ. ಈ ಕ್ಷೇತ್ರದಲ್ಲಿ ಲಿಂಗಾಯತ, ಕುರುಬ, ದಲಿತ ಸಮುದಾಯ ಹೆಚ್ಚಿದೆ. ಲಿಂಗಾಯತ ಸಮುದಾಯದ ಮತ ಸೆಳೆಯಲು ಸಚಿವ ಸೋಮಣ್ಣರನ್ನು ಬಿಜೆಪಿ ಕಣಕ್ಕಿಳಿಸಿದೆ. ಸಿದ್ದರಾಮಯ್ಯ ದಲಿತ ಮತ ತಪ್ಪಿಸಲು ಜೆಡಿಎಸ್ ಭಾರತಿ ಶಂಕರ್ ಗೆ ಟಿಕೆಟ್ ಕೊಟ್ಟಿದೆ. ವರುಣಾದಲ್ಲಿ ಸ್ಪರ್ಧೆ ಸಚಿವ ಸೋಮಣ್ಣರ ರಾಜಕೀಯ ಭವಿಷ್ಯಕ್ಕೆ ಸವಾಲ್ ಆಗಿ ಪರಿಣಮಿಸಿದೆ. ಗೆದ್ದರೇ ಹೈಕಮಾಂಡ್ ದೃಷ್ಟಿಯಲ್ಲಿ ಹೀರೋ ಆಗುತ್ತಾರೆ.. ಲಿಂಗಾಯತ ಸಮುದಾಯದ ನಾಯಕ ಎನಿಸಿಕೊಳ್ಳಲಿದ್ದಾರೆ. ಒಂದು ವೇಳೆ ಸೋತರೇ ರಾಜಕೀಯವಾಗಿ ಸಮಾಧಿ ಆಗಲಿದ್ದಾರೆ.
ಟಾರ್ಗೆಟ್ 2- ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್ ವರ್ಸಸ್ ಆರ್ ಅಶೋಕ್
ಕನಕಪುರ.. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭದ್ರಕೋಟೆ.. ಇಲ್ಲಿ ಸಚಿವ ಆರ್ ಅಶೋಕ್ ಎನ್ನು ಬಿಜೆಪಿ ಕಣಕ್ಕೆ ಇಳಿಸಿದೆ. ಆರು ಬಾರಿ ಗೆದ್ದಿರುವ ಡಿಕೆ ಶಿವ ಕುಮಾರ್ ಅವರನ್ನು ಇಲ್ಲಿ ಸೋಲಿಸುವುದು ಸುಲಭವಲ್ಲ ಎಂದು ಗೊತ್ತಿದ್ದರೂ ಗಟ್ಟಿಯಾದ ಪೈಪೋಟಿ ಕೊಡಬೇಕೆಂಬ ಕಾರಣಕ್ಕೆ ಆರ್ ಅಶೋಕ್ ಗೆ ಬಿಜೆಪಿ ಟಿಕೆಟ್ ಕೊಟ್ಟಿದೆ. ಒಂದು ವೇಳೆ ಡಿಕೆ ಶಿವ ಕುಮಾರ್ ಅವ್ರನ್ನು ಆರ್ ಅಶೋಕ್ ಸೋಲಿಸಿದರೇ ಒಕ್ಕಲಿಗರ ನಾಯಕ ಎನಿಸಿಕೊಳ್ಳಲಿದ್ದಾರೆ. ಜೊತೆಗೆ ಹೈಕಮಾಂಡ್ ಕಣ್ಣಲ್ಲಿಯೂ ಹೀರೋ ಎನಿಸಿಕೊಳ್ಳಲಿದ್ದಾರೆ. ಒಂದೊಮ್ಮೆ ಸೋತರೇ, ಕೇವಲ ಪದ್ಮನಾಭನಗರಕ್ಕೆ ಮಾತ್ರ ಅಶೋಕ್ ಹೀರೋ ಅಷ್ಟೇ ಎನಿಸಿಕೊಳ್ಳಲಿದ್ದಾರೆ.
ಟಾರ್ಗೆಟ್ 3 – ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ ವರ್ಸಸ್ ಮಣಿಕಂಠ ರಾಠೋಡ್
ಚಿತ್ತಾಪುರದಲ್ಲಿ ಪ್ರಿಯಾಂಕ್ ಖರ್ಗೆ ಸೋಲಿಸುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪಾಠ ಕಲಿಸಬೇಕು.. ಜೊತೆಗೆ ಮಗನನ್ನೂ ಗೆಲ್ಲಿಸಿಕೊಳ್ಳಲಾಗದ ದುರ್ಬಲ ನಾಯಕ ಎಂದು ಬಿಂಬಿಸಬೇಕು ಎಂದು ಬಿಜೆಪಿ ಪ್ಲಾನ್ ಮಾಡಿದೆ. ಅದಕ್ಕೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಖರ್ಗೆಯನ್ನು ಸೋಲಿಸಿದಂತೆ ಇದೀಗ ಅವರ ಮಗನನ್ನು ಸೋಲಿಸಲು ತಂತ್ರ ರೂಪಿಸುತ್ತಿದೆ. ಇದಕ್ಕಾಗಿ ಕ್ರಿಮಿನಲ್ ಚರಿತ್ರೆ ಹೊಂದಿರುವ ರೌಡಿಶೀಟರ್ ಮಣಿಕಂಠ ರಾಠೋಡ್ಗೆ ಟಿಕೆಟ್ ನೀಡಿದೆ. ಇಂತಹ ವ್ಯಕ್ತಿತ್ವ ಹೊಂದಿರುವ ಅಭ್ಯರ್ಥಿ ಪರವಾಗಿ ಪ್ರಧಾನಿ ಮೋದಿ ಕೂಡ ಪ್ರಚಾರ ನಡೆಸಲಿದ್ದಾರೆ ಎನ್ನುವುದು ವಿಪರ್ಯಾಸ.
ಟಾರ್ಗೆಟ್ 4 – ಕುಮಾರಸ್ವಾಮಿ
ಕುಮಾರಸ್ವಾಮಿ ವರ್ಸಸ್ ಸಿಪಿ ಯೋಗೇಶ್ವರ್
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪರ್ಧೆ ಮಾಡಿರುವ ಚನ್ನಪಟ್ಟಣದ ಮೇಲೆ ಕೇಸರಿ ಪಡೆ ಹೆಚ್ಚು ನಿಗಾ ಇಟ್ಟಿದೆ. ಪ್ರಧಾನಿ ಮೋದಿ ಕೂಡ ಇಲ್ಲಿ ಪ್ರಚಾರ ಮಾಡಿದ್ದಾರೆ. ಕುಮಾರಸ್ವಾಮಿ ಸೋಲಿಸುವ ಮೂಲಕ ಅವರ ಪ್ರತಿಷ್ಠೆಗೆ ಭಂಗ ತರಬೇಕು ಎನ್ನುವುದು ಬಿಜೆಪಿ ವ್ಯೂಹ. ಆದರೆ, ಒಕ್ಕಲಿಗ ಸಮುದಾಯದ ನಾಯಕರಾಗಿರುವ ಕುಮಾರಸ್ವಾಮಿಯನ್ನು ಅಷ್ಟು ಸುಲಭವಾಗಿ ಸೋಲಿಸಲು ಆಗಲ್ಲ ಎಂಬ ಮಾತು ಕೇಳಿಬರುತ್ತಿದೆ.
ಟಾರ್ಗೆಟ್ 5 – ಜಗದೀಶ್ ಶೆಟ್ಟರ್
ಜಗದೀಶ್ ಶೆಟ್ಟರ್ ವರ್ಸಸ್ ಮಹೇಶ್ ಟೆಂಗಿನಕಾಯಿ
ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರನ್ನು ಸೋಲಿಸಿಯೇ ತೀರುವುದಾಗಿ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿಯ ನಂಬರ್ 2 ನಾಯಕ ಅಮಿತ್ ಶಾ ಶಪಥ ಮಾಡಿದ್ದಾರೆ. ಆದರೆ, ಅದು ಹೇಗೆ ಸೋಲಿಸ್ತೀರೋ ನೋಡಿಯೇ ಬಿಡುವೆ.. ನನ್ನನ್ನು ಸೋಲಿಸಲು ಇದೇನು ಗುಜರಾತ್ ಅಲ್ಲ.. ಇದು ಕರ್ನಾಟಕ.. ನಾನು ಗೆದ್ದೇ ಗೆಲ್ಲುವೇ ಎಂದು ಜಗದೀಶ್ ಶೆಟ್ಟರ್ ಪ್ರತಿ ಸವಾಲ್ ಹಾಕಿದ್ದಾರೆ. ಒಂದೊಮ್ಮೆ ಶೆಟ್ಟರ್ ಗೆದ್ದರೇ ಪಕ್ಷ ದುರ್ಬಲವಾಗುವುದರ ಜೊತೆಗೆ ಲಿಂಗಾಯತ ಮತ ಬ್ಯಾಂಕ್ ಮೇಲಿನ ಹಿಡಿತ ಕೈತಪ್ಪಬಹುದು ಎಂಬ ಆತಂಕ ಬಿಜೆಪಿಯನ್ನು ಕಾಡುತ್ತಿದೆ.
ಟಾರ್ಗೆಟ್ 6 – ಲಕ್ಷ್ಮಣ ಸವದಿ
ಲಕ್ಷ್ಮಣ ಸವದಿ ವರ್ಸಸ್ ಮಹೇಶ್ ಕುಮಟಳ್ಳಿ
ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ಲಕ್ಷ್ಮಣ ಸವದಿ ಕೂಡ ಒಬ್ಬರು. ಆದರೂ, ಈ ಬಾರಿ ಲಕ್ಷ್ಮಣ ಸವದಿಗೆ ಬಿಜೆಪಿ ಟಿಕೆಟ್ ನಿರಾಕರಿಸಿತ್ತು. ಹೀಗಾಗಿ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷದಿಂದ ಅಥಣಿಯಲ್ಲಿ ಸ್ಪರ್ಧೆ ಮಾಡಿದ್ದಾರೆ. ಅವರನ್ನು ಸೋಲಿಸಲೇಬೇಕೆಂದು ಬಿಜೆಪಿ ಪಣ ತೊಟ್ಟಿದೆ. ಸವದಿ ಸೋಲನ್ನು ರಮೇಶ್ ಜಾರಕಿಹೊಳಿ ವೈಯಕ್ತಿಕ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಒಂದೊಮ್ಮೆ ಅಥಣಿಯಲ್ಲಿ ಸವದಿ ಗೆದ್ದರೇ ಮರ್ಯಾದೆ ಮಣ್ಣು ಪಾಲಾಗುವ ಭೀತಿ ಬಿಜೆಪಿಯನ್ನು ಆವರಿಸಿದೆ. ಹೀಗಾಗಿಯೇ ಸವದಿ ಸೋಲಿಸುವ ಹೊಣೆಯನ್ನು ಹೈಕಮಾಂಡ್ ಯಡಿಯೂರಪ್ಪಗೆ ನೀಡಿದೆ